ಬೆಂಗಳೂರು: 2007ರ ಟಿ20 ವಿಶ್ವ ಕಪ್ (T20 World Cup 2024) ಉದ್ಘಾಟನಾ ಆವೃತ್ತಿಯಲ್ಲೇ ಚಾಂಪಿಯನ್ ಆಗಿ ಭಾರತ ಹೊರಹೊಮ್ಮಿತು. ಇದರ ಬಳಿಕ ಭಾರತ ಮತ್ತೆ ಟಿ20 ಚಾಂಪಿಯನ್ ಆಗಲೇ ಇಲ್ಲ. ಇದೀಗ 17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆಗುವ ಇರಾದೆಯೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ ಆದರೆ, ತಂಡಕ್ಕೆ ಹಲವು ಸವಾಲು ಕೂಡ ಇದೆ.
ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ ವಿಶ್ವಕಪ್ ಮಿನಿ ಸಮರ ಆರಂಭವಾಗಲಿದ್ದು, ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.
ರೋಹಿತ್ ಮತ್ತು ಕೊಹ್ಲಿಗೆ ನಿರ್ಣಾಯಕ ಟೂರ್ನಿ
ಈ ಕೂಟದಲ್ಲಿ ಭಾರತ ನೀಡುವ ಪ್ರದರ್ಶನದ ಮೇಲೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಟಿ20 ಭವಿಷ್ಯ ಅಡಗಿದೆ. ಈ ಕೂಟ ಮುಗಿದ ಮೇಲೆ ಯಾರ್ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗಳೂ ಇವೆ. ಹೀಗಾಗಿ ರೋಹಿತ್ ಮತ್ತು ಕೊಹ್ಲಿ ಪಾಲಿಗೆ ಇದೊಂದು ಮಹತ್ವದ ಕೂಟ ಎನ್ನಲಡ್ಡಿಯಿಲ್ಲ.
ಭಾರತ ಬಲಿಷ್ಠ ಆದರೆ ಎಚ್ಚರ ಅಗತ್ಯ
ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಇರುವ ಭಾರತ ತಂಡವನ್ನು ಬಲಿಷ್ಠ ಎನ್ನಲೇಬೇಕು. ಆದರೆ, ಭಾರತ ಪೂರ್ಣ ಎಚ್ಚರವಾಗಿಯೇ ಪ್ರತೀ ಪಂದ್ಯದಲ್ಲಿ ಕಣಕ್ಕಿಳಿಯಬೇಕು. ಎದುರಾಳಿಯನ್ನು ಒಮ್ಮೆಯೂ ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರು ಯಾರನ್ನು ಕೆಡವಿ ಬೀಳಿಸುತ್ತಾರೆ ಎಂಬುದು ಟಿ20 ಮಾದರಿಯಲ್ಲಿ ಅಂದಾಜಿಸುವುದಕ್ಕೆ ಕಷ್ಟ ಸಾಧ್ಯ. ಇದಕ್ಕೆ ಉತ್ತಮ ನಿದರ್ಶನವೆಂದರೆ ಅಭ್ಯಾಸ ಪಂದ್ಯದಲ್ಲಿ ಅನುಭವಿ ಬಾಂಗ್ಲಾದೇಶಕ್ಕೆ ಕ್ರಿಕೆಟ್ ಶಿಶು ಅಮೆರಿಕ ಸೋಲುಣಿಸಿದ್ದು. ಆದ್ದರಿಂದ ಭಾರತ ಎಚ್ಚರ ತಪ್ಪಬಾರದು. ಕೆಲವೇ ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗುವುದು ಟಿ20 ಪಂದ್ಯಗಳ ಶಕ್ತಿ.
ದ್ರಾವಿಡ್ಗೆ ಕೊನೆಯ ಟೂರ್ನಿ
ರಾಹುಲ್ ದ್ರಾವಿಡ್ ಅವರಿಗೆ ಕೋಚ್ ಆಗಿ ಇದು ಕೊನೆಯ ಟೂರ್ನಿಯಾಗಿದೆ. ಈ ಟೂರ್ನಿ ಮುಕ್ತಾಯದ ಬಳಿಕ ಅವರು ಕೋಚಿಂಗ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. 2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ರಾಹುಲ್ ದ್ರಾವಿಡ್ಗೆ ಕೋಚ್ ಆಗಿ ಮೊದಲ ಸವಾಲಾಗಿತ್ತು. ಇಲ್ಲಿ ಕಪ್ ಗೆಲ್ಲಲು ತಂಡ ವಿಫಲವಾಗಿತ್ತು. ಬಳಿಕ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ನಲ್ಲಿಯೂ ಭಾರತ ಫೈನಲ್ನಲ್ಲಿ ಸೋಲು ಕಂಡಿತ್ತು. ಇದೀಗ ನಿರ್ಗಮನದ ಹಂತದಲ್ಲಿರುವ ದ್ರಾವಿಡ್ ಈ ಟೂರ್ನಿಯಲ್ಲಿದ್ದಾರು ಭಾರತಕ್ಕೆ ಕಪ್ ಗೆಲ್ಲಿಸಿಕೊಡಬೇಕಿದೆ. ಆದ್ದರಿಂದ ದ್ರಾವಿಡ್ಗೂ ಈ ಕೂಟ ಮಹತ್ವದಾಗಿದೆ.
ಟಿ20 ವಿಶ್ವ ಕಪ್ನಲ್ಲಿ ಭಾರತ ಸಾಧನೆ
2007 | ಚಾಂಪಿಯನ್ |
2009 | 2ನೇ ಸುತ್ತು |
2010 | 2ನೇ ಸುತ್ತು |
2012 | 2ನೇ ಸುತ್ತು |
2014 | ರನ್ನರ್ ಅಪ್ |
2016 | ಸೆಮಿಫೈನಲ್ |
2021 | 2ನೇ ಸುತ್ತು |
2022 | ಸೆಮಿಫೈನಲ್ |
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.