Site icon Vistara News

T20 World Cup final: ತ್ರಿವರ್ಣ ಧ್ವಜ ಹಿಡಿದು ಜಮ್ಮು-ಕಾಶ್ಮೀರದಲ್ಲಿ ಮೊಳಗಿದ ವಿಜಯೋತ್ಸವ

T20 World Cup final

t20-world-cup-final-jammu-fans-celebrate-indias-victory-in-t20-world-cup

ಜಮ್ಮ-ಕಾಶ್ಮೀರ: 17ನೇ ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup final)​ ಗೆದ್ದ ಭಾರತ ತಂಡದ ಈ ಅಭೂತಪೂರ್ವ ಗೆಲುವನ್ನು ಅಭಿಮಾನಿಗಳು ದೇಶಾದ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ತಡರಾತ್ರಿಯೇ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಅಭಿಮಾನಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ಗೆಲುವನ್ನು ಸಂಭ್ರಮಿಸಿದ್ದಾರೆ. ಇದರ ಫೋಟೊ ಮತ್ತು ವೈರಲ್​ ಆಗಿದೆ.

ಜಮ್ಮು ಕಾಶ್ಮೀರದ ಕಚಿ ಚೌನಿ ಸೇರಿದಂತೆ ವಿವಿಧ ಭಾಗಗಳಲ್ಲಿ ಚಳಿಯನ್ನು ಕೂಡ ಲೆಕ್ಕಿಸದೆ ಮಧ್ಯರಾತ್ರಿಯೇ ಅಭಿಮಾನಿಗಳು ಮನೆಯಿಂದ ಹೊರ ಬಂದು ಭಾರತದ ಗೆಲುವನ್ನು ಸಂಭ್ರಮಿಸಿದ್ದಾರೆ. ಬೃಹತ್ ತ್ರಿವರ್ಣ ಧ್ವಜ ಹಿಡಿದು ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು.

ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ 

ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿತ್ತು‌. ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ಕೋರಮಂಗಲ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಮತ್ತು ತ್ರಿವರ್ಣ ಧ್ವಜ ಹಾರಿಸಿ, ಹಾಡುಗಳಿಗೆ ಕುಣಿದು ಸಂಭ್ರಮ ಆಚರಿಸಿ ಭಾರತ ತಂಡಕ್ಕೆ ಅಭಿನಂದನೆ‌ ಸಲ್ಲಿಸಿದರು.

ಇದನ್ನೂ ಓದಿ MS Dhoni Instagram Post: ಭಾರತ 2ನೇ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಚ್ಚರಿಯ ಪೋಸ್ಟ್ ಮಾಡಿದ ಧೋನಿ

ಭಾರತ ತಂಡ ಎರಡನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಸಮಾದೇವಿ ಗಲ್ಲಿಯಲ್ಲಿ ಕ್ರಿಕೆಟ್ ಪ್ರೇಮಿಗಳು ಭಾರತ ಧ್ವಜ, ಭಗವಾಧ್ವಜ ಪ್ರದರ್ಶಿಸಿ ಖುಷಿಪಟ್ಟರು. ಜತೆಗೆ ಡಿಜೆಗೆ ಸಖತ್‌ ಸ್ಟೆಪ್ ಹಾಕಿ ಕ್ರೀಡಾ ಪ್ರೇಮಿಗಳು ಸಂಭ್ರಮಿಸಿದರು. ಕನ್ನಡ, ಹಿಂದಿ ಹಾಡುಗಳ ನಡುವೆ ಯುವ ಜನತೆಯ ಡ್ಯಾನ್ಸ್‌ ಗಮನ ಸೆಳೆಯಿತು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಭಾರತದ ಗೆಲುವನ್ನು ಕ್ರಿಕೆಟ್ ಪ್ರೇಮಿಗಳು ಸಂಭ್ರಮಿಸಿದರು. ಭಟ್ಕಳದ ಸಂಶುದ್ದೀನ್ ವೃತ್ತದಲ್ಲಿ ತಡರಾತ್ರಿ ಸಂಭ್ರಮಾಚರಣೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಹೆದ್ದಾರಿಯಲ್ಲಿ ಜಮಾಯಿಸಿದ ಕ್ರಿಕೆಟ್ ಪ್ರೇಮಿಗಳು ಸಂಚರಿಸುತ್ತಿದ್ದ ವಾಹನಗಳ ಎದುರು ಕುಣಿದು ಕುಪ್ಪಳಿಸಿದರು. ಭಾರತದ ಬಾವುಟ ಹಿಡಿದ ಯುವಕರು, ಮಕ್ಕಳು, ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟಿತು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡ ಪ್ರಸಂಗವೂ ನಡೆಯಿತು. ಕ್ರಿಕೆಟ್ ಪ್ರೇಮಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಕೊನೆಗೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಿಕೆಟ್ ಪ್ರೇಮಿಗಳನ್ನು ಪೊಲೀಸರು ಚದುರಿಸಿದರು.

Exit mobile version