ಬೆಂಗಳೂರು: 2024ರಲ್ಲಿ ನಡೆಯುವ ಪ್ರತಿಷ್ಠಿತ ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್(T20 World Cup 2024) ಟೂರ್ನಿಗೆ ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ. ಟೂರ್ನಿಯ ಪಂದ್ಯಾವಳಿಗಳು ಜೂನ್ 4 ರಿಂದ 30ರ ವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ ಎನ್ನಲಾಗಿದೆ. ಇದೀಗ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳ ನಡುವಿನ ಪಂದ್ಯದ ತಾಣದ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ.
ದಿ ಗಾರ್ಡಿಯನ್ ವರದಿ ಮಾಡಿರುವ ಪ್ರಕಾರ ಇತ್ತಂಡಗಳ ನಡುವಿನ ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ವರದಿಯನ್ನಾಧರಿಸಿ ಕೆಲ ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಹರಿಬಿಡುತ್ತಿದ್ದಾರೆ. ಆದರೆ ಐಸಿಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇಲ್ಲಿ ಏಕೆ ಪಂದ್ಯ?
ಭಾರತ ಮತ್ತು ಪಾಕ್ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂಬುದು ತಿಳಿದುಬಂದಿದೆ.
INDIA VS PAKISTAN WILL BE PLAYED IN NEW YORK CITY IN THE 2024 T20 WORLD CUP….!!! (The Guardian). pic.twitter.com/RbqrkYD2lj
— Mufaddal Vohra (@mufaddal_vohra) December 15, 2023
ಇಂಡೋ-ಪಾಕ್ ಪಂದ್ಯ ಎಂದರೆ ವಿಶೇಷ ರೋಮಾಂಚನ
ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧ ಹಾಗೂ ತ್ವೇಷಮಯ ವಾತಾವರಣದ ನಡುವೆ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ವಿಶ್ವಕಪ್ ಆಗಿರಲಿ ಇತರ ಯಾವುದೇ ಟೂರ್ನಿಯ ಪಂದ್ಯವಾಗಿರಲಿ ಇದನ್ನು ನೋಡುವುದೇ ಒಂದು ರೋಮಾಂಚನ. ಇತ್ತಂಡಗಳ ಪಂದ್ಯ ಇದೆ ಎಂದರೆ ಸಾಕು ಸರಿ ತಿಂಗಳ ಮುಂದೆಯೇ ಅಭಿಮಾನಿಗಳಲ್ಲಿ ಕಾತರ,ಕುತೂಹಲ ಎಲ್ಲವು ಮನೆ ಮಾಡಿರುತ್ತದೆ.
ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯುತ್ತಾರೆ. ಹಾಗೆಯೇ ಕೆಲವು ವಿಲನ್‌ಗಳೂ ಹುಟ್ಟಿ ಕೊಳ್ಳುತ್ತಾರೆ. ಪಾಕಿಸ್ತಾನ ಸೋತರೆ ಅಲ್ಲಿ ಇವರ ಪ್ರತಿಕೃತಿ ದಹನವಾಗಲಿದೆ; ಮನೆಗೆ ಕಲ್ಲು ಬೀಳಲಿದೆ. ಇದರಿಂದ ಬಚಾವಾಗುವುದು ಪಾಕ್ ಕ್ರಿಕೆಟಿಗರ ಪಾಲಿಗೆ ಇನ್ನೂ ದೊಡ್ಡ ಸವಾಲು. ಒಟ್ಟಾರೆ ಇತ್ತಂಡಗಳ ಮತ್ತೊಂದು ಕ್ರಿಕೆಟ್ ಯುದಕ್ಕೆ ಮುಂದಿನ ವರ್ಷದ ಜೂನ್ ತನಕ ಕಾಯಬೇಕು.
ಇದನ್ನೂ ಓದಿ T20 World Cup 2024: ನೂತನ ಲೋಗೋ ವಿನ್ಯಾಸಕ್ಕೆ ಫಿದಾ ಆದ ಕ್ರಿಕೆಟ್ ಅಭಿಮಾನಿಗಳು
ಟಿ20 ಮುಖಾಮುಖಿ
ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್ ಅಂತರದ ಹೀನಾಯ ಸೋಲಾಗಿತ್ತು.
ಸ್ವರೂಪ ಬದಲು
ಹಿಂದಿನ ಆವೃತ್ತಿಗಳಿಗಿಂತ 2024ರಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್ ನಡೆಯಲಿದೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ.