ಬೆಂಗಳೂರು: 9ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಗೆ(T20 World Cup 2024) ಕ್ಷಣಗಣನೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಅಮೆರಿಕ ಜಂಟಿಯಾಗಿ ವೆಸ್ಟ್ ಇಂಡೀಸ್ ಜತೆ ಟೂರ್ನಿಯ ಆತಿಥ್ಯವಹಿಸಿಕೊಂಡಿದೆ. ಇದುವರೆಗಿನ 8 ಆವೃತ್ತಿಯ ಟೂರ್ನಿಯಲ್ಲಿ(T20 World Cup Records) ದಾಖಲಾದ ಸ್ವಾರಸ್ಯಕರ ದಾಖಲೆಗಳ ಪಟ್ಟಿ ಇಂತಿದೆ.
ಅತಿ ಹೆಚ್ಚು ಪಂದ್ಯ: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ. 39 ಪಂದ್ಯಗಳನ್ನು ಆಡಿದ್ದಾರೆ. ವಿಶೇಷವೆಂದರೆ ಎಲ್ಲ 8 ಆವೃತ್ತಿಯ ವಿಶ್ವಕಪ್ ಆಡಿದ ಆಟಗಾರನು ಆಗಿದ್ದಾರೆ.
ಅತ್ಯಂತ ಯಶಸ್ವಿ ನಾಯಕ: ವೆಸ್ಟ್ ಇಂಡೀಸ್ ತಂಡದ ಡ್ಯಾರೆನ್ ಸ್ಯಾಮಿ ಟಿ20 ವಿಶ್ವಕಪ್ ಟೂರ್ನಿಯ ಅತ್ಯಂತ ಯಶಸ್ವಿ ನಾಯಕ. ಅವರು 2 ಟ್ರೋಫಿ ಗೆದ್ದ ಏಕೈಕ ನಾಯಕ. 2012 ಮತ್ತು 2016ರಲ್ಲಿ ಈ ಸಾಧನೆ ಮಾಡಿದ್ದರು.
ಶೂನ್ಯ ಸಾಧನೆ: ಟಿ20 ವಿಶ್ವ ಕಪ್ ಇತಿಹಾಸದಲ್ಲಿ ಅತ್ಯಧಿಕ ಶೂನ್ಯ ಸಂಪಾದನೆ ಮಾಡಿದ ಆಟಗಾರರೆಂದರೆ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತು ಶ್ರೀಲಂಕಾದ ತಿಲಕರತ್ನೆ ದಿಲ್ಶನ್. ಇಬ್ಬರು ಆಟಗಾರರು 5 ಬಾರಿ ಶೂನ್ಯಕ್ಕೆ ಔಟಾಗಿ ಜಂಟಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಬಳಿಕ ಇಂಗ್ಲೆಂಡ್ ತಂಡದ ಅಲೆಕ್ಸ್ ಹೇಲ್ಸ್ 3 ಬಾರಿ ಶೂನ್ಯ ಸುತ್ತಿದ ಆಟಗಾರ.
ಅತಿ ಹೆಚ್ಚು ರನ್ ಗಳಿಕೆ: ಅತಿ ಹೆಚ್ಚು ಮೊತ್ತ ಪೇರಿಸಿದ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ ಟಿ20 ವಿಶ್ವ ಕಪ್ ಆವೃತ್ತಿಯಲ್ಲಿ ಕೀನ್ಯಾ ತಂಡದ ವಿರುದ್ಧ 6 ವಿಕೆಟ್‌ಗೆ 260 ರನ್ ಗಳಿಸಿತ್ತು.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?
ಅತಿ ಹೆಚ್ಚು ಬೌಂಡರಿ ಮತ್ತು ಸಿಕ್ಸರ್ ಮೂಲಕ ರನ್ ಗಳಿಕೆ: ಕೇವಲ ಬೌಂಡರಿ ಮತ್ತು ಸಿಕ್ಸರ್ ಮೂಲಕ ಅತ್ಯಧಿಕ ರನ್ ಗಳಿಸಿದ ಆಟಗಾರ ಎನ್ನುವ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಉದ್ಘಾಟನಾ ಆವೃತ್ತಿಯ ಟೂರ್ನಿಯಲ್ಲಿ 10 ಸಿಕ್ಸರ್ (60), 7 ಬೌಂಡರಿ (28) ಒಳಗೊಂಡಂತೆ 88 ರನ್ ಸಿಡಿಸಿದ್ದರು.
ಎಲ್ಲ ಆವೃತ್ತಿ ಆಡಿದ ಆಟಗಾರರು: ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್ ಆಡಿದ ಇಬ್ಬರು ಆಟಗಾರರು ಈ ಬಾರಿಯ ವಿಶ್ವ ಕಪ್ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರೆಂದರೆ, ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಬಾಂಗ್ಲಾದೇಶದ ಶಕಿಬ್ ಅಲ್ ಹಸನ್.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ ಪಂದ್ಯ ನಡೆಯುವ ತಾಣ,ಭಾರತದ ಪಂದ್ಯಗಳ ಪ್ರಸಾರದ ಮಾಹಿತಿ ಹೀಗಿದೆ
ತಂಡವೊಂದರ ಕನಿಷ್ಠ ಸ್ಕೋರ್: ಇದುವರೆಗಿನ ಟಿ20 ವಿಶ್ವ ಕಪ್ನಲ್ಲಿ ತಂಡವೊಂದರ ಕನಿಷ್ಠ ಸ್ಕೋರ್ 2014ರಲ್ಲಿ ದಾಖಲಾಗಿತ್ತು. ಶ್ರೀಲಂಕಾ ತಂಡದ ವಿರುದ್ಧ ನೆದರ್ಲೆಂಡ್ಸ್ ತಂಡ 79 ರನ್ ಗಳಿಸಿದ್ದು ಈ ವರೆಗಿನ ಕನಿಷ್ಠ ಮೊತ್ತ.
ತಂಡವೊಂದರ ಗರಿಷ್ಠ ಸ್ಕೋರ್: 2007ರ ಚೊಚ್ಚಲ ಆವೃತ್ತಿಯಲ್ಲಿ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ 6 ವಿಕೆಟ್‌ಗೆ
260 ರನ್ ಬಾರಿಸಿದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ.
ಅತೀ ಹೆಚ್ಚು ಇತರ ರನ್: ಈ ಕೆಟ್ಟ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿದೆ. ಬರೋಬ್ಬರಿ 28 ರನ್ ನೀಡಿದೆ. ಇದರಲ್ಲಿ 23 ವೈಡ್, ಒಂದು ನೋ ಬಾಲ್, ನಾಲ್ಕು ಲೆಗ್ಬೈ ಸೇರಿತ್ತು.
ಅತ್ಯಧಿಕ ಗರಿಷ್ಠ ಸ್ಕೋರರ್: ಈ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ ತಂಡದ ಬ್ರೆಂಡನ್ ಮೆಕಲಮ್ (123) ಅಗ್ರಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಕ್ರಿಸ್ ಗೇಲ್(117) ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ T20 World Cup 2024: ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳು ಯಾರು?
ಮೂರು ಬಾರಿ ಪಂದ್ಯ ಟೈ: ಈ ವರೆಗಿನ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಪಂದ್ಯಗಳು ಟೈ ಕಂಡಿದೆ. ಮೊದಲ ಟೈ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಂಡುಬಂತು. ಈ ಪಂದ್ಯದಲ್ಲಿ ಗೆಲುವಿಗೆ ಬಾಲ್ ಔಟ್ ನೀಡಲಾಗಿತ್ತು. ಇದರಲ್ಲಿ ಭಾರತ ಮೇಲುಗೈ ಸಾಧಿಸಿತ್ತು. ಇದಾದ ಬಳಿಕ ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಪಂದ್ಯ ಟೈ ಗೊಂಡಿತ್ತು. ಆದರೆ ಇಲ್ಲಿ ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಣಯಿಸಲಾಗಿತ್ತು.
ಅತಿದೊಡ್ಡ ಗೆಲುವು (ವಿಕೆಟ್‌ಗಳಿಂದ): ಆಸ್ಟ್ರೇಲಿಯಾ ಸೆಪ್ಟೆಂಬರ್ 20, 2007 ರಂದು ಕೇಪ್ ಟೌನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಸೋಲಿಸಿತು (10.2 ಓವರ್‌ಗಳಲ್ಲಿ 102 ರನ್‌ಗಳನ್ನು ಬೆನ್ನಟ್ಟಿತು).
ಅತಿ ಹೆಚ್ಚಿನ ಸೋಲು: ಈ ಕೆಟ್ಟ ದಾಖಲೆ ಬಾಂಗ್ಲಾದೇಶ ತಂಡದ ಹೆಸರಿನಲ್ಲಿ 38 ಪಂದ್ಯಗಳಲ್ಲಿ 28 ಸೋಲು ಕಂಡಿದೆ.
ಅತಿ ಹೆಚ್ಚು ಗೆಲುವು: ಭಾರತ ಮತ್ತು ಪಾಕಿಸ್ತಾನ, ತಲಾ 28 ಗೆಲುವುಗಳೊಂದಿಗೆ (ಭಾರತ 44 ಪಂದ್ಯ, ಪಾಕಿಸ್ತಾನ 47 ಪಂದ್ಯ) ಅತಿ ಹೆಚ್ಚು ಗೆಲುವು ಕಂಡ ದಾಖಲೆ ಹೊಂದಿದೆ.
ಇದನ್ನೂ ಓದಿ T20 World Cup 2024: ಮಿನಿ ವಿಶ್ವಕಪ್ ಸಮರದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ದಾಂಡಿಗರಿವರು!
ಕ್ಯಾಚ್ ದಾಖಲೆ: ಅತಿ ಹೆಚ್ಚು ಕ್ಯಾಚ್ ಹಿಡಿದ ದಾಖಲೆ ಇಂಗ್ಲೆಂಡ್ ತಂಡದ ಹಾಲಿ ನಾಯಕ ಜಾಸ್ ಬಟ್ಲರ್ ಹೆಸರಿನಲ್ಲಿದೆ. ಬಟ್ಲರ್ 30 ಪಂದ್ಯಗಳನ್ನಾಡಿ 23 ಕ್ಯಾಚ್ ಹಿಡಿದಿದ್ದಾರೆ.
ಅತಿ ಹೆಚ್ಚು ಅರ್ಧಶತಕ: ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ದಾಖಲೆ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 27 ಪಂದ್ಯಗಳಿಂದ 14 ಅರ್ಧಶತಕ ಬಾರಿಸಿದ್ದಾರೆ.
ಅತಿ ಹೆಚ್ಚು ಶತಕ: ಈ ದಾಖಲೆ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 33 ಪಂದ್ಯಗಳಿಂದ 2 ಶತಕ ಬಾರಿಸಿದ್ದಾರೆ.
ಅತಿ ಹೆಚ್ಚು ವಿಕೆಟ್: ಅತಿ ಹೆಚ್ಚು ವಿಕೆಟ್ ಕಿತ್ತ ದಾಖಲೆ ಬಾಂಗ್ಲಾದೇಶದ ಹಿರಿಯ ಆಟಗಾರ ಶಕೀಬ್ ಅಲ್ ಹಸನ್ ಹೆಸರಿನಲ್ಲಿದೆ. ಶಕೀಬ್ 36 ಪಂದ್ಯಗಳನ್ನಾಡಿ 47 ವಿಕೆಟ್ ಕಿತ್ತಿದ್ದಾರೆ.
ಅತಿ ಹೆಚ್ಚು ಕಪ್ ಗೆದ್ದ ದಾಖಲೆ: ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಲಾ 2 ಬಾರಿ ಕಪ್ ಗೆದ್ದ ದಾಖಲೆ ಹೊಂದಿದೆ.
ಟೂರ್ನಿಯೊಂದರಲ್ಲಿ ಗರಿಷ್ಠ ರನ್: ಟೂರ್ನಿಯೊಂದರಲ್ಲಿ ಗರಿಷ್ಠ ರನ್ ಪೇರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 2014ರ ಆವೃತ್ತಿಯಲ್ಲಿ 319 ರನ್ ಬಾರಿಸಿದ್ದರು.