ಸಿಡ್ನಿ: ನಾಯಕ ರೋಹಿತ್ ಶರ್ಮಾ(53), ವಿರಾಟ್ ಕೊಹ್ಲಿ(62*) ಮತ್ತು ಸೂರ್ಯಕುಮಾರ್ ಯಾದವ್(51*) ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 179 ರನ್ ಗಳಿಸಿ ನೆದರ್ಲೆಂಡ್ಸ್ಗೆ ಬೃಹತ್ ರನ್‌ಗಳ ಸವಾಲೊಡ್ಡಿದೆ. ಟಾಸ್ ಗೆದ್ದು ಭಾರತವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 20 ಓವರ್ಗಳಲ್ಲಿ 2 ವಿಕೆಟ್‌ಗಳನ್ನಷ್ಟೇ ಭಾರತವು ಕಳೆದುಕೊಂಡಿತು. ಗೆಲ್ಲಲು ನೆದರ್ಲೆಂಡ್ಸ್ 180 ರನ್‌ಗಳನ್ನು ಪೇರಿಸಬೇಕಿದೆ.
ಆರಂಭಿಕಕ ಆಟಗಾರ ಕೆ.ಎಲ್ ರಾಹುಲ್ ಮತ್ತೆ ವಿಫಲರಾಗಿದ್ದಾರೆ. 12 ಎಸೆತಗಳಲ್ಲಿ 9 ರನ್ ಗಳಿಸಿ ನಿರಾಸೆ ಮೂಡಿಸಿದರು. ಪಾಕಿಸ್ತಾನ ಎದುರು 4 ರನ್‌ಗೆ ವಿಕೆಟ್ ಕೈಚೆಲ್ಲಿದ್ದ ರೋಹಿತ್, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸಹಿತ 53 ರನ್ ಪೇರಿಸಿದರು. ಉಳಿದಂತೆ ವಿರಾಟ್ ಕೊಹ್ಲಿ (62*), ಸೂರ್ಯಕುಮಾರ್(51*) ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಸೂರ್ಯಕುಮಾರ್ ಅಂತಿಮ ಮೂರು ಓವರ್ಗಳಲ್ಲಿ ಸಿಡಿದು ನಿಂತ ಕಾರಣ ಭಾರತ ಸವಾಲಿನ ಮೊತ್ತ ಕಲೆಹಾಕಿತು.
ಟೀಮ್ ಇಂಡಿಯಾ ತನ್ನ ಆಡುವ ಹನ್ನೊಂದರ ಬಳದಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಹನ್ನೊಂದರ ಬಳಗವನ್ನೇ ಈ ಪಂದ್ಯದಲ್ಲಿಯೂ ಕಣಕ್ಕಿಳಿಸಿತು.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್.
ನೆದರ್ಲೆಂಡ್ಸ್: ವಿಕ್ರಮಜೀತ್ ಸಿಂಗ್, ಮ್ಯಾಕ್ಸ್ ಓಡೌಡ್, ಬಾಸ್ ಡಿ ಲೀಡೆ, ಕಾಲಿನ್ ಅಕೆರ್ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್.
ಇದನ್ನೂ ಓದಿ | T20 World Cup | ನ್ಯೂಜಿಲೆಂಡ್- ಅಫಘಾನಿಸ್ತಾನ ಪಂದ್ಯ ಮಳೆಯಿಂದ ರದ್ದು, ಉಭಯ ತಂಡಕ್ಕೂ ಅಂಕ ಹಂಚಿಕೆ