Site icon Vistara News

T20 World Cup : ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 60 ರನ್​ ಭರ್ಜರಿ ವಿಜಯ ಸಾಧಿಸಿದ ಭಾರತ

T 20 world cup

ನ್ಯೂಯಾರ್ಕ್​​: ಟಿ20 ವಿಶ್ವ ಕಪ್​ ಅಭಿಯಾನದ (T20 World Cup) ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿದೆ. ತನ್ನ ನೆರೆಯ ದೇಶ ಬಾಂಗ್ಲಾ ವಿರುದ್ಧದ ಹಣಾಹಣಿಯಲ್ಲಿ 60 ರನ್​ಗಳ ಭರ್ಜರಿ ವಿಜಯ ತನ್ನದಾಗಿಸಿಕೊಂಡಿದೆ. ವಿಕೆಟ್​ ಕೀಪರ್​ ಬ್ಯಾಟರ್ ರಿಷಭ್​ ಪಂತ್(53 ರನ್​, 32 ಎಸೆತ)​ ಹಾಗೂ ಹಾರ್ದಿಕ್ ಪಾಂಡ್ಯ (23 ಎಸೆತಕ್ಕೆ 43 ರನ್​) ಭಾರತ ಪರ ಬ್ಯಾಟಿಂಗ್​ನಲ್ಲಿ ಮಿಂಚಿದರೆ ಬೌಲಿಂಗ್​ನಲ್ಲಿ ಅರ್ಶ್​ದೀಪ್​ ಸಿಂಗ್​ (2 ವಿಕೆಟ್) ಪಡೆದರು. ಈ ಗೆಲುವಿನೊಂದಿಗೆ ಭಾರತ ತಂಡ ತನ್ನ ವಿಶ್ವಾಸ ಪ್ರದರ್ಶಿಸಿತು.

ಇಲ್ಲಿನ ನಸ್ಸಾವು ಕೌಂಟಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ಗೆ 182 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಬಾಂಗ್ಲಾದೇಶ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ಗೆ 120 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಭಾರತ ಪರ ಇನಿಂಗ್ಸ್ ಆರಂಭಿಸಲು ಅವಕಾಶ ಪಡೆದ ಸಂಜು ಸ್ಯಾಮ್ಸನ್​ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡರು. ಅವರು 1 ರನ್​ಗೆ ಔಟಾದರು. ರೋಹಿತ್ ಶರ್ಮಾ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಇರದೇ 23 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. 59 ರನ್​ಗಳಿಗೆ 2 ವಿಕೆಟ್​ ನಷ್ಟ ಮಾಡಿಕೊಂಡ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ಬಳಿಕ ರಿಷಭ್​ ಪಂತ್​ ಹಾಗೂ ಸೂರ್ಯಕುಮಾರ್ ಯಾದವ್​ ಇನಿಂಗ್ಸ್​ ಕಟ್ಟಿದರು. ಪಂತ್ 32 ಎಸೆತಗಳಿಗೆ 4 ಸಿಕ್ಸರ್​ ಹಾಗೂ ಅಷ್ಟೇ ಸಂಖ್ಯೆಯ ಫೋರ್​ನೊಂದಿಗೆ 53 ರನ್ ಬಾರಿಸಿದರೆ ಸೂರ್ಯಕುಮಾರ್ ಯಾದವ್​​ 18 ಎಸೆತಕ್ಕೆ 4 ಫೋರ್​ ಸಮೇತ 31 ರನ್ ಕೊಡುಗೆ ಕೊಟ್ಟರು. ಹೀಗಾಗಿ ಭಾರತದ ರನ್​ 3 ವಿಕೆಟ್​ 103 ತಲುಪಿತು.

ಇದನ್ನೂ ಓದಿ: Dinesh Karthik: ಜನ್ಮದಿನದಂದೇ ಕ್ರಿಕೆಟ್‌ ಬದುಕಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ; ಕೊಡುಗೆ ನೆನೆದ ಆರ್‌ಸಿಬಿ ಫ್ಯಾನ್ಸ್

ಶಿವಂ ದುಬೆ 14 ಎಸೆತಕ್ಕೆ 13 ರನ್ ಬಾರಿಸಿ ಔಟಾದರೆ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 24 ಎಸೆತಕ್ಕೆ 2 ಫೋರ್ ಹಾಗೂ 4 ಸಿಕ್ಸರ್ ಸಮೇತ 4 ರನ್ ಬಾರಿಸಿದರು. ಜಡೇಜ ಕೊಡುಗೆ 4 ರನ್​.

ಬಾಂಗ್ಲಾ ಬ್ಯಾಟಿಂಗ್ ವೈಫಲ್ಯ

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಬಾಂಗ್ಲಾ ದೇಶದ ಆರಂಭಿಕರು ಲಗುಬಗನೆ ವಿಕೆಟ್​ ಕಳೆದುಕೊಂಡರು. ತಂಜಿದ್​ ಹಸನ್​ 17 ರನ್ ಬಾರಿಸಿದರೆ ಸೌಮ್ಯ ಸರ್ಕಾರ್​ ಶೂನ್ಯಕ್ಕೆ ಔಟಾದರು. ಲಿಟನ್​ ದಾಸ್ 7 ರನ್ ಬಾರಿಸಿದರೆ ನಜ್ಮುಲ್ ಹೊಸೈನ್ ಕೂಡ ಸೊನ್ನೆ ಸುತ್ತಿದರು. 39 ರನ್​ಗೆ 4 ವಿಕೆಟ್ ಕಳೆದುಕೊಂಡು ಬಾಂಗ್ಲಾ ಗೆಲುವಿನ ಆಸೆ ಕೈಬಿಟ್ಟಿತು. ಬಳಿಕ ಶಕಿಬ್ ಅಲ್ ಹಸನ್​ 28 ರನ್ ಹಾಗೂ ಮಹಮ್ಮದುಲ್ಲಾ 40 ರನ್ ಬಾರಿಸುವ ಮೂಲಕ ತಂಡದ ಮರ್ಯಾದೆ ಕಾಪಾಡಿದರು. ಭಾರತ ಪರ ಬೌಲಿಂಗ್​ನಲ್ಲಿ ಅರ್ಶ್​ದೀಪ್ ಸಿಂಗ್​ ಮತ್ತು ಶಿವಂ ದುಬೆ ತಲಾ ಎರಡು ವಿಕೆಟ್ ಕಬಳಿಸಿದರು.

Exit mobile version