Site icon Vistara News

T20 World Cup: ಪಾಕಿಸ್ತಾನಕ್ಕೆ ಮುಖಭಂಗ ಮಾಡಿದ ಅಮೆರಿಕ ಕ್ರಿಕೆಟ್‌ ತಂಡದ ಸೌರಭ್ ನೇತ್ರವಾಲ್ಕರ್ ಹಿನ್ನೆಲೆ ಏನು?

T20 World Cup

ಬೆಂಗಳೂರು: ಟಿ20 ವಿಶ್ವ ಕಪ್​ನಲ್ಲಿ (T20 World Cup ) ಗುರುವಾರ ಅಚ್ಚರಿಯ ಫಲಿತಾಂಶವೊಂದು ಮೂಡಿ ಬಂದಿದೆ. ಅಲ್ಲಿನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐತಿಹಾಸಿಕ ಪಂದ್ಯದಲ್ಲಿ ಸಹ ಆತಿಥೇಯ ಯುಎಸ್ಎ ತಂಡವು ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನವನ್ನು ಸೂಪರ್ ಓವರ್​ನಲ್ಲಿ ಸೋಲಿಸಿತು. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿತು. ಪಂದ್ಯವು ಟೈನಲ್ಲಿ ಕೊನೆಗೊಂಡ ನಂತರ ಸೂಪರ್​ ಓವರ್​ ನಡೆಯಿತು. ಮೊದಲು ಬ್ಯಾಟ್​ ಮಾಡಿದ ಅಮರಿಕ 18 ರನ್ ಬಾರಿಸಿತು. ಈ ರನ್​ ರಕ್ಷಿಸುವ ಹೊಣೆ ಅಮೆರಿಕದ ಬೌಲರ್ ಸೌರಭ್​ ನೇತ್ರವಾಲ್ಕರ್ ಹೆಗಲ ಮೇಲೆ ಬಿತ್ತು. ಅನುಭವಿ ಹಾಗೂ ಕ್ರಿಕೆಟ್​ ಪ್ರೇಮಿ ದೇಶದ ಬ್ಯಾಟರ್​ಗಳು ಒಡ್ಡಿದ ಎಲ್ಲಾ ಅಡೆತಡೆಗಳ ನಡುವೆಯೂ ನೇತ್ರವಾಲ್ಕರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಅವರು ಮಾರಕ ಬೌಲಿಂಗ್​ ಮೂಲಕ ಪಾಕ್ ತಂಡವನ್ನು 13 ರನ್​ಗಳಿಗೆ ಕಟ್ಟಿ ಹಾಕಿದರು. ಈ ವೇಳೆ ಯುಎಸ್ ಆಟಗಾರರು ಹಾಗೂ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಈ ಫಲಿತಾಂಶದ ಬಳಿಕ ವೇಗದ ಬೌಲರ್ ಸೌರಭ್​ ನೇತ್ರವಾಲ್ಕರ್ ಕುರಿತ ಚರ್ಚೆ ಜೋರಾಗಿದೆ. ಯಾಕೆಂದರೆ ಪಾಕ್ ತಂಡವನ್ನು ಸೋಲಿಸಲು ಅಮೆರಿಕಕ್ಕೆ ನೆರವಾಗಿದ್ದು ಭಾರತೀಯ ಮೂಲದ ಬೌಲರ್​ ಕಂ ಟೆಕಿ. ಹೀಗಾಗಿ ಮೂರು ದೇಶಗಳಲ್ಲಿ ಸೌರಭ್ ಅವರ ಬಗ್ಗೆಯೇ ಚರ್ಚೆ. ಐಟಿ ಕಂಪನಿ ಒರಾಕಲ್​ನಲ್ಲಿ ಟೆಕ್ ಇನ್ನೋವೇಶನ್ ತಂಡವನ್ನು ಮುನ್ನಡೆಸುತ್ತಿರುವ ಸೌರಭ್ ನೇತ್ರವಾಲ್ಕರ್ ಕ್ರಿಕೆಟ್ ಅಂಗಣದಲ್ಲಿ ಪಾಕಿಸ್ತಾನ ತಂಡ ಮಂಡಿಯೂರುವಂತೆ ಮಾಡಿದಾಗ ಅವರ ಬಗ್ಗೆ ಭಾರತೀಯರೂ ಮೆಚ್ಚುಗೆ ವ್ಯಕ್ತಪಡಿಸಲು ಆರಂಭಿಸಿದ್ದಾರೆ.

ಅಮೆರಿಕ ತಂಡ ಕಷ್ಟಪಟ್ಟು ಗಳಿಸಿದ ವಿಜಯದ ಸುದ್ದಿ ಸೋಶಿಯಲ್​ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿರುವ ನಡುವೆಯೇ ಸೌರಭ್​ ನೇತ್ರವಾಲ್ಕರ್ ಅವರ ಲಿಂಕ್ಡ್ಇನ್ ಪ್ರೊಫೈಲ್ ಸಹ ವೈರಲ್ ಆಗಿದೆ. ಅವರು ಯಾರು? ಎಲ್ಲಿನವರು? ಕ್ರಿಕೆಟ್ ಅನುಭವ ಏನು ಎಂಬೆಲ್ಲ ವಿಚಾರಗಳನ್ನು ಕ್ರಿಕೆಟ್ ಅಭಿಮಾನಿಗಳು ತಿಳಿಯಲು ಬಯಸಿದ್ದಾರೆ.

ಸೌರಭ್ ನೇತ್ರವಾಲ್ಕರ್ ಯಾರು?

ಅಕ್ಟೋಬರ್ 16, 1991 ರಂದು ಮುಂಬೈನಲ್ಲಿ ಜನಿಸಿದ ಸೌರಭ್ ನರೇಶ್ ನೇತ್ರವಾಲ್ಕರ್ ಭಾರತೀಯ ಮೂಲದ ಕ್ರಿಕೆಟಿಗ. ಹೀಗಾಗಿ ಕ್ರಿಕೆಟ್ ಅವರಿಗೆ ರಕ್ತಗತ. ಅವರು ಅಮೆರಿದಕ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಸಾಧನೆ ಮಾಡಿದವರು. 2015 ರಲ್ಲಿ ಯುನೈಟೆಡ್ ಸ್ಟೇಟ್ಸ್​ಗೆ ತೆರಳುವ ಮೊದಲು ನೇತ್ರವಾಲ್ಕರ್ ಭಾರತದಲ್ಲಿ ದೇಶೀಯ ಕ್ರಿಕೆಟ್​ನಲ್ಲೂ ಆಡಿದ್ದರು. ಅವರು ಪ್ರತಿಷ್ಠಿತ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡಿದ್ದರು. ಭಾರತ ಅಂಡರ್ 19 ತಂಡದ ಸದಸ್ಯರಾಗಿದ್ದರು, ಭಾರತದ ಕ್ರಿಕೆಟ್ ತಾರೆಗಳಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಹರ್ಷಲ್ ಪಟೇಲ್, ಜಯದೇವ್ ಉನಾದ್ಕಟ್ ಮತ್ತು ಸಂದೀಪ್ ಶರ್ಮಾ ಅವರೊಂದಿಗೆ ಮೈದಾನವನ್ನು ಹಂಚಿಕೊಂಡಿದ್ದರು. 2010ರ ಐಸಿಸಿ ಅಂಡರ್ -19 ವಿಶ್ವಕಪ್​​ನಲ್ಲಿ ನೇತ್ರವಾಲ್ಕರ್ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು.

ಇದನ್ನೂ ಓದಿ: T20 World Cup : ಕ್ರಿಕೆಟ್​ ಕೂಸು ಅಮೆರಿಕ ತಂಡದ ವಿರುದ್ಧ ಸೋತ ಪಾಕಿಸ್ತಾನ

ಕ್ರಿಕೆಟಿಗರ ದೊಡ್ಡ ಪಡೆಯನ್ನೇ ಹೊಂದಿರುವ ಭಾರತದಲ್ಲಿ ಸೌರಭ್ ಅವರಿಗೆ ಹೆಚ್ಚಿನ ಅವಕಾಶಗಳು ದೊರಕಿಲ್ಲ. ಇಲ್ಲಿನ ಸ್ಪರ್ಧೆಯ ಮುಂದೆ ಮಿಂಚುವುದು ಸುಲಭವಲ್ಲ. ಬಳಿಕ ಅವರು ಸಾಗಿದ್ದ ಅಮೆರಿಕದ ಕಡೆಗೆ. ಉದ್ಯೋಗಕ್ಕಾಗಿ ಹೋದ ಅವರು ಕ್ರಿಕೆಟ್​ ಮುಂದುವರಿಸಿದರು.

ಭಾರತದಲ್ಲಿ ಭರವಸೆಯ ಯುವ ಕ್ರಿಕೆಟಿಗನಿಂದ ಯುಎಸ್ ರಾಷ್ಟ್ರೀಯ ತಂಡವನ್ನು ಮುನ್ನಡೆಸುವವರೆಗಿನ ನೇತ್ರವಾಲ್ಕರ್ ಅವರ ಪ್ರಯಾಣವು ಆಟದ ಕುರಿತು ಅವರ ಉತ್ಸಾಹವನ್ನು ತೋರಿಸುತ್ತದೆ. ದೇಶೀಯ ಕ್ರಿಕೆಟ್​ನಲ್ಲಿ ಅವರು ಪಡೆದ ಅನುಭವ, ಯುಎಸ್​ನಲ್ಲಿ ಮತ್ತೆ ಕ್ರಿಕೆಟ್ ಅಭ್ಯಾಸ ಹಾಗೂ ನಾಯಕತ್ವದ ಹೊಣೆಗಾರಿಕೆಯೊಂದಿಗೆ ಅವರು ಇನ್ನಷ್ಟು ಪಳಗಿದರು. ಹೀಗಾಗಿ ಅವರು ತಮಗೆ ರಾಷ್ಟ್ರೀಯ ಮಾನ್ಯತೆ ನೀಡಿದ ತಂಡಕ್ಕೆ ಉತ್ತಮ ಪ್ರತಿಫಲ ಕೊಡುತ್ತಿದ್ದಾರೆ.

ಕೋಡಿಂಗ್​ ಎಕ್ಸ್​ಪರ್ಟ್​

ಕ್ರಿಕೆಟ್ ಹೊರತಾಗಿಯೂ ನೇತ್ರವಾಲ್ಕರ್ ಕೋಡಿಂಗ್ ಬಗ್ಗೆಯೂ ಒಲವು ಹೊಂದಿದ್ದಾರೆ. ಮುಂಬೈ ವಿಶ್ವವಿದ್ಯಾಲಯ ಮತ್ತು ಪ್ರತಿಷ್ಠಿತ ಕಾರ್ನೆಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ನೇತ್ರವಾಲ್ಕರ್ ಪ್ರಸ್ತುತ ಒರಾಕಲ್​ನಲ್ಲಿ ತಾಂತ್ರಿಕ ಸಿಬ್ಬಂದಿ ವಿಭಾಗದ ಪ್ರಧಾನ ಸದಸ್ಯರಾಗಿದ್ದಾರೆ. ಅವರು ಕ್ರಿಕ್ ಡೆಕೋಡ್ ಎಂಬ ಕ್ರಿಕೆಟ್ ಕೇಂದ್ರಿತ ಅಪ್ಲಿಕೇಶನ್ ನ ಸಹ-ಸಂಸ್ಥಾಪಕರಾಗಿದ್ದಾರೆ.

ಅವರು ಉಕುಲೆಲೆ ಎಂಬ ಸಂಗೀತ ಸಾಧನವನ್ನು ನುಡಿಸುತ್ತಾರೆ. ಈ ವಾದ್ಯವನ್ನು ನುಡಿಸುತ್ತಾ ಹಾಡುವ ಹವ್ಯಾಸವನ್ನೂ ಅವರು ಹೊಂದಿದ್ದಾರೆ. ಸೌರಭ್ ವಾದ್ಯ ನುಡಿಸುತ್ತಾ ಹಾಡುವ ವಿಡಿಯೊಗಳು ಶೋಶಿಯಲ್​ ಮೀಡಿಯಾಗಳಲ್ಲಿ ಲಭ್ಯವಿದೆ.

Exit mobile version