ಹೈದರಾಬಾದ್: ಶನಿವಾರ ನಡೆದ ಐಪಿಎಲ್ನ ಹಗಲು ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಗೆಲುವು ಸಾಧಿಸಿ ಬೀಗಿದೆ. ಆದರೆ ಈ ಪಂದ್ಯದಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ಕ್ಲಾಸೆನ್(74) ಮತ್ತು ಸಮದ್(30*) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ 19.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 185 ರನ್ ಬಾರಿಸಿ ಗೆಲುವಿನ ಜಯಭೇರಿ ಮೊಳಗಿಸಿತು. ಸೋತ ಹೈದರಾಬಾದ್ ಟೂರ್ನಿಯಿಂದ ಬಹುತೇಕವಾಗಿ ಹೊರಬಿದ್ದಂತಾಗಿದೆ.
ಇದನ್ನೂ ಓದಿ IPL 2023: ಟಿ20 ವಿಶ್ವ ಕಪ್ಗೆ ಹಾರ್ದಿಕ್ ಪಾಂಡ್ಯ ಸೂಕ್ತ ನಾಯಕ; ರವಿಶಾಸ್ತ್ರಿ ವಿಶ್ವಾಸ
ಈ ಪಂದ್ಯ ವೇಳೆ ವಿರಾಟ್ ಕೊಹ್ಲಿಯ ಅಭಿಮಾನಿಗಳು ಮತ್ತೆ ಗೌತಮ್ ಗಂಭೀರ್ ಅವರ ಕಾಳೆಲೆದಿದ್ದಾರೆ. ಗಂಭೀರ್ ಅವರು ಗ್ರೌಂಡ್ನಿಂದ ತಮ್ಮ ಡಗೌಟ್ನತ್ತ ಬರುತ್ತಿದ್ದ ಸಂದರ್ಭ ಹೈದರಾಬಾದ್ ಅಭಿಮಾನಿಗಳು ತಮ್ಮ ತಂಡದ ಬಾವುಟವನ್ನು ಬೀಸುತ್ತಾ ಜೋರಾಗಿ ಕೊಹ್ಲಿ, ಕೊಹ್ಲಿ ಎಂದು ಜೋರಾಗಿ ಕೂಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೊಹ್ಲಿ-ಗಂಭೀರ್ ಜಗಳದ ಬಳಿಕ ಕೊಹ್ಲಿ ಅಭಿಮಾನಿಗಳು ಗಂಭೀರ್ಗೆ ಈ ರೀತಿಯ ಅವಮಾನ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ಸಿಎಸ್ಕೆ ಮತ್ತು ಲಕ್ನೋ ವಿರುದ್ಧದ ಪಂದ್ಯದಲ್ಲೂ ಗಂಭೀರ್ಗೆ ಇದೇ ರೀತಿ ಛೇಡಿಸಿದರು.
ಮೇ 1ರಂದು ನಡೆದ ಲಕ್ನೋ ಮತ್ತು ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತು ಗಂಭೀರ್ ಇಬ್ಬರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಸುತ್ತ ಮುತ್ತ ಇದ್ದ ಆಟಗಾರರು ಅಂಪೈರ್ಗಳು ಅವರಿಬ್ಬರನ್ನು ಬೇರ್ಪಡಿಸಬೇಕಾಯಿತು. ಇವರಿಬ್ಬರ ಜಗಳ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಯಿತಲ್ಲದೆ ಉಭಯ ಆಟಗಾರರಿಗು ಬಿಸಿಸಿಐ ದಂಡ ವಿಧಿಸಿತ್ತು. ಇಲ್ಲಿಂದ ಆರಂಭವಾದ ಇವರಿಬ್ಬರ ಹಾವು-ಮುಂಗುಸಿ ಆಟಕ್ಕೆ ಇದೀಗ ಅಭಿಮಾನಿಗಳು ಸೇಡು ತೀರಿಸುತ್ತಿದ್ದಾರೆ.