ಲೌಡರ್‌ಹಿಲ್ : ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್ ತಂಡ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ (IND vs WI T20) ಟಿ೨೦ ಸರಣಿಯ ಮೂರನೇ ಪಂದ್ಯದಲ್ಲಿ ೫೯ ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ೩-೧ ಅಂತರದಿಂದ ಭಾರತದ ಕೈವಶವಾಗಿದೆ. ಇದು ಭಾರತಕ್ಕೆ ಲಭಿಸಿದ ಸತತ ಐದನೇ ಟಿ೨೦ ಸರಣಿ ವಿಜಯವಾಗಿದೆ. ಜತೆಗೆ ವಿಂಡೀಸ್ ವಿರುದ್ಧ ೧೩ ಸರಣಿ ಗೆದ್ದ ದಾಖಲೆ ಮಾಡಿ, ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟ್ ತಂಡ ಎಂಬ ಖ್ಯಾತಿ ಪಡೆಯಿತು. ಜಿಂಬಾಬ್ವೆ ವಿರುದ್ಧ ಸತತ ೧೨ ಸರಣಿಗಳನ್ನು ಗೆದ್ದಿರುವ ಪಾಕಿಸ್ತಾನ ತಂಡ ಈ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದೆ.
ಅಮೆರಿಕದ ಲೌಡರ್‌ಹಿಲ್‌ನ ಸೆಂಟ್ರಲ್ ಬ್ರೊವಾರ್ಡ್ ರೀಜಿನಲ್ ಪಾರ್ಕ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ ೨೦ ಓವರ್‌ಗಳಲ್ಲಿ ೫ ವಿಕೆಟ್ ಕಳೆದುಕೊಂಡು ೧೯೧ ರನ್ ಬಾರಿಸಿತು. ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಆತಿಥೇಯ ವೆಸ್ಟ್ ಇಂಡೀಸ್ ತಂಡ ೧೯. ೧ ಓವರ್‌ಗಳಲ್ಲಿ ೧೩೨ ರನ್‌ಗಳಿಗೆ ಆಲ್‌ಔಟ್ ಆಯಿತು.
ಭಾರತದ ಅಬ್ಬರ
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಲ್ಲೇ ಅಬ್ಬರಿಸಿತು. ರೋಹಿತ್ ಶರ್ಮ (೩೩), ಸೂರ್ಯಕುಮಾರ್ ಯಾದವ್ (೨೪) ಅವರ ಉತ್ತಮ ಜತೆಯಾಟದ ನೆರವಿನಿಂದ ಮೊದಲ ವಿಕೆಟ್‌ಗೆ ೫೩ ರನ್ ಬಾರಿಸಿತು. ಬಳಿಕ ದೀಪಕ್ ಹೂಡ ೨೧ ರನ್ ಬಾರಿಸಿದರೆ, ರಿಷಭ್ ಪಂತ್ ೪೪ ರನ್‌ಗಳನ್ನು ಬಾರಿಸಿ ಭಾರತದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಸಂಜು ಸ್ಯಾಮ್ಸನ್ ಕೂಡ ಬಿಡುಬೀಸಿನ ಬ್ಯಾಟಿಂಗ್ ನಡೆಸಿ ೩೦ ರನ್‌ಗಳನ್ನು ಬಾರಿಸಿದರು. ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ ೮ ಎಸೆತಗಳಿಗೆ ೨೦ ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು.
ವಿಂಡೀಸ್ ಬೌಲಿಂಗ್ ಪರ ಒಬೆದ್ ಮೆಕಾಯ್ ಮತ್ತ ಅಲ್ಜಾರಿ ಜೋಸೆಫ್ ತಲಾ ೨ ವಿಕೆಟ್ ತಮ್ಮದಾಗಿಸಿಕೊಂಡರು.
ಬಿಗು ಬೌಲಿಂಗ್ ದಾಳಿ
ದೊಡ್ಡ ಗುರಿಯನ್ನು ಬೆನ್ನಟ್ಟುವ ರೀತಿಯಲ್ಲೇ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಸ್ಫೋಟಕ ಬ್ಯಾಟಿಂಗ್‌ಗೆ ಮೊರೆ ಹೋಯಿತು. ಆದರೆ, ಭಾರತದ ಬೌಲರ್‌ಗಳಾದ ಆವೇಶ್ ಖಾನ್ (೧೭ರನ್‌ಗಳಿಗೆ ೨ ವಿಕೆಟ್), ಅಕ್ಷರ್ ಪಟೇಲ್ (೪೮ಕ್ಕೆ೨) , ಅರ್ಶ್‌ದೀಪ್ ಸಿಂಗ್ (೧೨ಕ್ಕೆ೩), ರವಿ ಬಿಷ್ಣೋಯಿ (೨೭ಕ್ಕೆ೨) ವಿಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ತಮ್ಮನಿಖರ ಬೌಲಿಂಗ್ ದಾಳಿಯ ಮೂಲಕ ಕಟ್ಟಿ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ನಿಕೋಲಸ್ ಪೂರನ್ ಹಾಗೂ ರೋವ್ಮನ್ ಪೊವೆಲ್ ತಲಾ ೨೪ ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ರೋಹಿತ್ ೧೬ ಸಾವಿರ
ಭಾರತ ತಂಡದ ನಾಯಕ ರೋಹಿತ್ ಶರ್ಮ ಈ ಪಂದ್ಯದಲ್ಲಿ ೩೩ ರನ್ ಬಾರಿಸುವ ಮೂಲಕ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳು ಸೇರಿ ಒಟ್ಟಾರೆ ೧೬ ಸಾವಿರ ರನ್‌ಗಳ ಗಡಿ ದಾಟಿದರು.
ಸ್ಕೋರ್ ವಿವರ
ಭಾರತ : ೨೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೯೧ (ರೋಹಿತ್ ಶರ್ಮ ೩೩, ಸೂರ್ಯಕುಮಾರ್ ಯಾದವ್ ೨೪, ದೀಪಕ್ ಹೂಡ ೨೧, ರಿಷಭ್ ಪಂತ್ ೪೪, ಸಂಜು ಸ್ಯಾಮ್ಸನ್ ೩೦, ಅಕ್ಷರ್ ಪಟೇಲ್ ೨೦; ಒಬೆದ್ ಮೆಕಾಯ್ ೬೬ಕ್ಕೆ೨, ಅಲ್ಜಾರಿ ಜೋಸೆಫ್ ೨೯ಕ್ಕೆ೨)
ವೆಸ್ಟ್ ಇಂಡೀಸ್ : ೧೯.೧ ಓವರ್‌ಗಳಲ್ಲಿ ೧೩೨ (ಬ್ರೆಂಡನ್ ಕಿಂಗ್ ೧೩, ಕೈಲ್ ಮೇಯರ್ಸ್ ೧೪, ನಿಕೋಲಸ್ ಪೂರನ್ ೨೪, ರೋವ್ಮನ್ ಪೊವೆಲ್ ೨೪, ಜೇಸನ್ ಹೋಲ್ಡರ್ ೧೩; ಅರ್ಶ್‌ದೀಪ್ ಸಿಂಗ್ ೧೨ಕ್ಕೆ ೩, ರವಿ ಬಿಷ್ಣೋಯಿ ೨೭ಕ್ಕೆ೨, ಅಕ್ಷರ್ ಪಟೇಲ್ ೪೮ಕ್ಕೆ೨, ಆವೇಶ್ ಖಾನ್ ೧೭ಕ್ಕೆ೨).
ಇದನ್ನೂ ಓದಿ | ಕ್ರಿಕೆಟ್ ಕೌಶಲ ಕಲಿಯಲು ಲಂಡನ್‌ಗೆ ಹೋಗಲಿದ್ದಾರೆ ಅನುಷ್ಕಾ ಶರ್ಮ!