Site icon Vistara News

IND VS NZ: ಕಿವೀಸ್​ ವಿರುದ್ಧ ಕ್ಲೀನ್​ ಸ್ವೀಪ್​ ಸಾಧನೆಗೈದ ಟೀಮ್​ ಇಂಡಿಯಾ

IND VS NZ

ಇಂದೋರ್​: ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ 90 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು ಕ್ಲೀನ್​ ಸ್ವೀಪ್​ ಮಾಡಿದೆ. ಸೋಲು ಕಂಡ ನ್ಯೂಜಿಲ್ಯಾಂಡ್​ ವೈಟ್​ ವಾಶ್​ ಮುಖಭಂಗಕ್ಕೆ ಒಳಗಾಯಿತು. ಭಾರತ ಈ ಗೆಲುವಿನೊಂದಿಗೆ ಐಸಿಸಿ ನೂತನ ಏಕದಿನ ಶ್ರೇಯಾಂದಲ್ಲಿ ನಂ.1 ಸ್ಥಾನಕ್ಕೇರಿದೆ.

ಇಂದೋರ್​ನ ಹೋಳ್ಕರ್​ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ರೋಹಿತ್​ ಶರ್ಮಾ(101 ಮತ್ತು ಶುಭಮನ್​ ಗಿಲ್(112)​ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ಗೆ 385 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್​ 41.2 ಓವರ್​ಗಳಲ್ಲಿ 295ಕ್ಕೆ ಆಲೌಟ್​ ಆಯಿತು. ಕಿವೀಸ್​ ಪರ ಡೆವೋನ್​ ಕಾನ್ವೆ(138) ಶತಕ ಬಾರಿಸಿ ಮಿಂಚಿದರು.

ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್​ ತಂಡಕ್ಕೆ ಹಾರ್ದಿಕ್ ಪಾಂಡ್ಯ ಖಾತೆ ತೆರೆಯುವ ಮುನ್ನವೇ ದೊಡ್ಡ ಆಘಾತ ನೀಡಿದರು. ಮೊದಲ ಓವರ್​ನ 2ನೇ ಎಸೆತದಲ್ಲಿ ಫಿನ್​ ಅಲೆನ್​ ವಿಕೆಟ್​ ಕಿತ್ತರು. ಆದರೆ ದ್ವಿತೀಯ ವಿಕೆಟ್​ಗೆ ಜತೆಯಾದ ಡೆವೋನ್​ ಕಾನ್ವೆ ಮತ್ತು ಹೆನ್ರಿ ನಿಕೋಲ್ಸ್​ ಭಾರತದ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ಹೋರಾಟವೊಂದನ್ನು ಜಾರಿಯಲ್ಲಿರಿಸಿದರು.

ಉಭಯ ಆಟಗಾರರ ರನ್​ ಗಳಿಕೆ ವೇಗವನ್ನು ಗಮನಿಸಿದಾಗ ಭಾರತ ಸವಾಲನ್ನು ಚೇಸ್​ ಮಾಡುವ ಸೂಚನೆ ಇತ್ತು. ಆದರೆ ಹೆನ್ರಿ ನಿಕೋಲ್ಸ್​(42) ಅವರ ವಿಕೆಟ್​ ಪತನದ ಬಳಿಕ ತಂಡ ನಾಟಕೀಯ ಕುಸಿತ ಕಂಡಿತು. ನಿಕೋಲ್ಸ್​ ಮತ್ತು ಕಾನ್ವೆ ದ್ವಿತೀಯ ವಿಕೆಟ್​ಗೆ 106 ರನ್​ ಜತೆಯಾಟ ನಡೆಸಿದರು. ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಡೆವೋನ್​ ಕಾನ್ವೆ ಏಕಾಂಗಿಯಾಗಿ ಹೋರಾಟ ನಡೆಸಿದರು. ಇದೇ ವೇಳೆ ಅವರು ಶತಕವನ್ನು ಪೂರೈಸಿದರು. ಒಟ್ಟು 100 ಎಸೆತ ಎದುರಿಸಿ 138 ರನ್ ಬಾರಿಸಿದರು. ಆದರೆ ಉಳಿದ ಆಟಗಾರರಿಂದ ನಿರೀಕ್ಷಿತ ಬ್ಯಾಟಿಂಗ್​ ಪ್ರದರ್ಶನ ಕಂಡು ಬಾರದೆ ಅಂತಿಮವಾಗಿ ಕಿವೀಸ್​ ಸೋಲು ಕಂಡಿತು.

ಶಾರ್ದೂಲ್​-ಕುಲ್​ದೀಪ್​ ಘಾತಕ ಬೌಲಿಂಗ್​

ಭಾರತ ಪರ ಆಲ್​ರೌಂಡರ್​ ಶಾರ್ದೂಲ್​ ಠಾಕೂರ್​ ಮತ್ತು ಕುಲ್​ದೀಪ್​ ಯಾದವ್​ ಉತ್ತಮ ಬೌಲಿಂಗ್​ ನಿರ್ವಹಣೆ ತೋರಿದರು. ಅದರಲ್ಲೂ ಶಾರ್ದೂಲ್​ ಠಾಕೂರ್​ 45 ರನ್​ ವೆಚ್ಚದಲ್ಲಿ ಪ್ರಮುಖ ಮೂರು ವಿಕೆಟ್​ ಕಿತ್ತು ಮಿಂಚಿದರು. ಕುಲ್​ದೀಪ್​ ಕೂಡ ಮೂರು ವಿಕೆಟ್​ ಉರುಳಿಸಿದರು. ಉಳಿದಂತೆ ಚಹಲ್​ 2 ವಿಕೆಟ್​ ಪಡೆದರು.

ರೋಹಿತ್​-ಗಿಲ್​ ಶತಕದ ಆರ್ಭಟ​

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಭಾರತ ಪರ ರೋಹಿತ್​ ಮತ್ತು ಶುಭಮನ್​ ಗಿಲ್​ ಶತಕ ಬಾರಿಸಿ ಮಿಂಚಿದರು. ಕಿವೀಸ್​ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ ತಮ್ಮ ಪರಾಕ್ರಮವನ್ನು ಈ ಪಂದ್ಯದಲ್ಲಿಯೂ ಮುಂದುವರಿಸಿದರು. ಆದರೆ ಈ ಪಂದ್ಯದಲ್ಲಿ ಉಭಯ ಆಟಗಾರರ ಬ್ಯಾಟಿಂಗ್​ ಆರ್ಭಟ ಹಿಂದಿನ ಎರಡು ಪಂದ್ಯಕ್ಕಿಂತಲೂ ಜೋರಾಗಿತ್ತು. ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ರೋಹಿತ್​ ಮತ್ತು ಗಿಲ್​ ಸಿಕ್ಸರ್​, ಬೌಂಡರಿ ಮೂಲಕ ಕಿವೀಸ್​ ಬೌಲರ್​ಗಳ ಬೆವರಿಳಿಸಿದರು.

ಒಂದು ಹಂತದಲ್ಲಿ ಈ ಜೋಡಿಯ ಬ್ಯಾಟಿಂಗ್​ ಗಮನಿಸುವಾಗ ಭಾರತ ತಂಡ 500ರ ಗಡಿ ದಾಟುವ ಸೂಚನೆ ಇತ್ತು. ಟಿ20 ಮಾದರಿಯಲ್ಲಿ ಬ್ಯಾಟ್​ ಬೀಸಿದ ಉಭಯ ಆಟಗಾರರು 20 ಓವರ್​ ವೇಳೆಗೆ ಬರೋಬ್ಬರಿ 200 ರನ್​ ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇದೇ ವೇಳೆ ರೋಹಿತ್​ ಮತ್ತು ಶುಭಮನ್​ ಗಿಲ್​ ಶತಕವನ್ನೂ ಪೂರೈಸಿದರು.

ಕಳೆದ ಒಂದುವರೆ ವರ್ಷಗಳಿಂದ ಶತಕದ ಬರ ಅನುಭವಿಸುತ್ತಿದ್ದ ರೋಹಿತ್​ ಶರ್ಮಾ ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ತಮ್ಮ ಏಕದಿನ ವೃತ್ತಿಜೀವನದ 30ನೇ ಶತಕವನ್ನು ಪೂರೈಸಿದರು. ಒಟ್ಟು 85 ಎಸೆತ ಎದುರಿಸಿದ ರೋಹಿತ್​ 6 ಸಿಕ್ಸರ್​ ಮತ್ತು 9 ಬೌಂಡರಿ ನೆರವಿನಿಂದ 101 ರನ್​ ಗಳಿಸಿ ಬ್ರೇಸ್​ವೆಲ್​ಗೆ ವಿಕೆಟ್​ ಒಪ್ಪಿಸಿದರು. ಗಿಲ್​ ಮತ್ತು ರೋಹಿತ್​ ಮೊದಲ ವಿಕೆಟ್​ಗೆ ಬರೋಬ್ಬರಿ 212 ರನ್​ ಜತೆಯಾಟ ನಡೆಸಿದರು.

ರೋಹಿತ್​ ಶರ್ಮಾ ವಿಕೆಟ್​ ಪತನದ ಬಳಿಕ 18 ರನ್​ ಆಗುವ ವೇಳೆಗೆ ಶುಭಮನ್​ ಗಿಲ್​ ವಿಕೆಟ್​ ಕೂಡ ಬಿತ್ತು. ಶುಭಮನ್​ ಗಿಲ್​ 78 ಎಸೆತ ಎದುರಿಸಿ 122 ರನ್​ ಬಾರಿಸುವ ಮೂಲಕ ಶತಕ ಪೂರೈಸಿದರು. ಈ ಇನಿಂಗ್ಸ್​ ವೇಳೆ 13 ಬೌಂಡರಿ ಮತ್ತು 5 ಸಿಕ್ಸರ್​ ಸಿಡಿಯಿತು.

ಹಠಾತ್​ ಕುಸಿತ ಕಂಡ ಭಾರತ

ಶುಭಮನ್​ ಮತ್ತು ರೋಹಿತ್​ ಶರ್ಮಾ ವಿಕೆಟ್​ ಪತನದ ಬಳಿಕ ತಂಡದ ಮೊತ್ತ ಹಠಾತ್​ ಕುಸಿತ ಕಂಡಿತು. ವಿರಾಟ್​ ಕೊಹ್ಲಿ(36), ಸೂರ್ಯಕುಮಾರ್​ ಯಾದವ್(14),​ ಇಶಾನ್​ ಕಿಶನ್(17)​ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಇದರಿಂದ ತಂಡದ ಬೃಹತ್​ ಮೊತ್ತಕ್ಕೆ ಹಿನ್ನಡೆಯಾಯಿತು. ಸೂರ್ಯಕುಮಾರ್​ ಮತ್ತು ಇಶಾನ್​ ಕಿಶನ್​ ಕಿವೀಸ್​ ವಿರುದ್ಧದ ಮೂರು ಪಂದ್ಯಗಳಲ್ಲಿಯೂ ಸಂಪೂರ್ಣ ವೈಫಲ್ಯ ಕಂಡರು.

ಸಿಡಿದು ನಿಂತ ಪಾಂಡ್ಯ

ಒಂದೊಡೆ ತಂಡದ ವಿಕೆಟ್​ ಬೀಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಸಿಡಿದು ನಿಂತ ಉಪನಾಯಕ ಹಾರ್ದಿಕ್​ ಪಾಂಡ್ಯ ಬಿರುಸಿನ ಬ್ಯಾಟಿಂಗ್​ ಮೂಲಕ ಅರ್ಧಶತಕ ಬಾರಿಸಿ ಮಿಂಚಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಪಾಂಡ್ಯ ಮೂರು ಸಿಕ್ಸರ್​ ಮತ್ತು ಮೂರು ಬೌಂಡರಿ ಮೂಲಕ 54 ರನ್​ ಬಾರಿಸಿದರು. ಇವರಿಗೆ ಆಲ್​ರೌಂಡರ್​ ಶಾರ್ದೂಲ್​ ಠಾಕೂರ್​ ಉತ್ತಮ ಸಾಥ್​ ನೀಡಿದರು. ಶಾರ್ದೂಲ್​ ಒಟ್ಟು 17 ಎಸೆತಗಳಿಂದ 25 ರನ್​ ಚಚ್ಚಿದರು.

ಸಂಕ್ಷಿಪ್ತ ಸ್ಕೋರ್​

ಭಾರತ: 50 ಓವರ್​ಗಳಲ್ಲಿ 9 ವಿಕೆಟ್​ಗೆ 385 (ರೋಹಿತ್​ ಶರ್ಮಾ 101, ಶುಭಮನ್​ ಗಿಲ್​ 112, ಹಾರ್ದಿಕ್​ ಪಾಂಡ್ಯ 54)

ನ್ಯೂಜಿಲ್ಯಾಂಡ್​: 41.2 ಓವರ್​ಗಳಲ್ಲಿ 295ಕ್ಕೆ ಆಲೌಟ್( ಡೆವೋನ್​ ಕಾನ್ವೆ 138, ಹೆನ್ರಿ ನಿಕೋಲ್ಸ್​ 42, ಶಾರ್ದೂಲ್​ ಠಾಕೂರ್​ 45ಕ್ಕೆ3, ಕುಲ್​ದೀಪ್​ ಯಾದವ್​ 62ಕ್ಕೆ 3)

ಇದನ್ನೂ ಓದಿ | IND VS NZ: ಆಸ್ಟ್ರೇಲಿಯಾ ಕ್ರಿಕೆಟಿಗ ರಿಕಿ ಪಾಂಟಿಂಗ್​ ದಾಖಲೆ ಸರಿಗಟ್ಟಿದ ರೋಹಿತ್​ ಶರ್ಮಾ

Exit mobile version