ಸಿಲ್‌ಹಟ್ : ರೇಣುಕಾ ಸಿಂಗ್ (೫ ರನ್‌ಗಳಿಗೆ ೩ ವಿಕೆಟ್) ಅವರ ಮಾರಕ ದಾಳಿ ಹಾಗೂ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ (೫೧) ಅವರ ಅಜೇಯ ಅರ್ಧ ಶತಕದ ನೆರವು ಪಡೆದ ಭಾರತ ತಂಡ ಏಷ್ಯಾ ಕಪ್‌ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ೮ ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದು ಭಾರತ ವನಿತೆಯರ ತಂಡಕ್ಕೆ ಲಭಿಸಿದ ಏಳನೇ ಏಷ್ಯಾ ಕಪ್ ಟ್ರೋಫಿ. ಅಂತೆಯೇ ಲಂಕಾ ತಂಡವನ್ನು ಐದನೇ ಭಾರಿ ಫೈನಲ್ ಪಂದ್ಯದಲ್ಲಿ ಸೋಲಿಸಿದ ದಾಖಲೆ ಮಾಡಿತು. ಅತ್ತ ಲಂಕಾ ತಂಡ ಐದು ಬಾರಿ ಫೈನಲ್‌ಗೇರಿದರೂ ಭಾರತದ ವಿರುದ್ಧವೇ ಸೋತು ಕೇವಲ ರನ್ನರ್ ಅಪ್ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು.
ಸಿಲ್‌ಹಟ್ ಅಂತಾರಾಷ್ಟ್ರಿಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ ೨೦ ಓವರ್‌ಗಳಲ್ಲಿ ೯ ವಿಕೆಟ್ ಕಳೆದುಕೊಂಡು ೬೫ ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡ ೮.೩ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೭೧ ರನ್ ಬಾರಿಸಿ ಜಯ ಸಾಧಿಸಿತು. ಭಾರತ ತಂಡದ ಪರ ಹರ್ಮನ್‌ಪ್ರೀತ್ ಕೌರ್ ೧೧ ರನ್ ಬಾರಿಸಿದರು.
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡದ ಬ್ಯಾಟರ್‌ಗಳು ಭಾರತದ ಬೌಲಿಂಗ್ ವಿಭಾಗದ ದಾಳಿಗೆ ಸಂಪೂರ್ಣ ಪತರಗುಟ್ಟಿತು. ಓಶಾದಿ ರಣಸಿಂಗೆ (೧೩) ಹಾಗೂ ಇನೋಕಾ ರಣವೀರಾ (೧೮) ಅವರನ್ನು ಬಿಟ್ಟರೆ ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಇದು ಎಂಟನೇ ಆವೃತ್ತಿಯ ಏಷ್ಯಾ ಕಪ್ ಟೂರ್ನಿಯಾಗಿದೆ. ಕಳೆದ ಆವೃತ್ತಿಯಲ್ಲಿ ಭಾರತ ತಂಡ ಬಾಂಗ್ಲಾದೇಶ ತಂಡದ ವಿರುದ್ಧ ಸೋಲುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶ ಕಳೆದುಕೊಂಡಿತ್ತು. ಅದನ್ನು ಹೊರತುಪಡಿಸಿದರೆ ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡದ ಪಾರಮ್ಯ ಮುಂದುವರಿಯಿತು.
ಸ್ಕೋರ್ ವಿವರ
ಶ್ರೀಲಂಕಾ : ೨೦ ಓವರ್‌ಗಳಲ್ಲಿ ೯ ವಿಕೆಟ್‌ಗೆ ೬೫ (ಓಶಾದಿ ರಣಸಿಂಗೆ ೧೩, ಇನೋಕಾ ರಣವೀರಾ ೧೮; ರೇಣುಕಾ ಸಿಂಗ್ ೫ಕ್ಕೆ೩, ರಾಜೇಶ್ವರಿ ಗಾಯಕ್ವಾಡ್ ೧೬ಕ್ಕೆ೨, ಸ್ನೇಹ್ ರಾಣಾ ೧೩ಕ್ಕೆ೨).
ಭಾರತ: ೮.೩ ಓವರ್‌ಗಳಲ್ಲಿ ೨ ವಿಕೆಟ್‌ಗೆ ೭೧ (ಸ್ಮೃತಿ ಮಂಧಾನಾ ೫೧, ಹರ್ಮನ್‌ಪ್ರೀತ್ ಕೌರ್ ೧೧, ಇನೋಕಾ ರಣವೀರ ೧೭ಕ್ಕೆ೧)
ಇದನ್ನೂ ಓದಿ | Women’s FTP | 3 ವರ್ಷದಲ್ಲಿ ಎಷ್ಟು ಪಂದ್ಯ ಆಡಲಿದೆ ಭಾರತ ಮಹಿಳೆಯರ ಕ್ರಿಕೆಟ್ ತಂಡ, ಇಲ್ಲಿದೆ ಮಾಹಿತಿ