Site icon Vistara News

Team India Captain : ರೋಹಿತ್ ಶರ್ಮಾ ನಂತರ ಟಿ20 ತಂಡದ ನಾಯಕ ಯಾರು? ಇಲ್ಲಿದೆ ಐದು ಮುಂಚೂಣಿ ಹೆಸರುಗಳು

Team India Captain

ಬೆಂಗಳೂರು : 2024 ರ ಟಿ 20 ವಿಶ್ವಕಪ್ ಚಾಂಪಿಯನ್​ ಪಟ್ಟ ಲಭಿಸಿದ ತಕ್ಷಣ ನಾಯಕ ರೋಹಿತ್ ಶರ್ಮಾ (Rohit Sharma) ಶನಿವಾರ ಟಿ20 ಐ ಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಆಟದ ಕಿರು ಸ್ವರೂಪದಲ್ಲಿ ರಾಷ್ಟ್ರೀಯ ತಂಡದ ನಾಯಕತ್ವವು (Team India Captain) ಸ್ಥಾನ ಖಾಲಿ ಬಿದ್ದಿದೆ. 20 ಓವರ್​ಗಳ ಸ್ವರೂಪದಲ್ಲಿ 62 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರೋಹಿತ್​ ಮೊದಲ ಪ್ರಶಸ್ತಿ ಗೆದ್ದ ತಕ್ಷಣ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಬಾರ್ಬಡೋಸ್​​ನಲ್ಲಿ ನಡೆದ ಫೈನಲ್​ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಕ್ಷಣದಲ್ಲಿಯೇ ಅವರು ನಿರ್ಧಾರ ತೆಗೆದುಕೊಂಡರು. ಇವರ ಜತೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಟಿ 20 ಪಂದ್ಯಗಳಲ್ಲಿ ನಿವೃತ್ತಿ ಘೋಷಿಸಿದ್ದರು. ಈ ಎರಡು ಬ್ಯಾಟಿಂಗ್ ದಿಗ್ಗಜರು ಇನ್ನು ಮುಂದೆ ಲಭ್ಯರಿಲ್ಲದ ಕಾರಣ ಭಾರತೀಯ ಕ್ರಿಕೆಟ್​​ ಹೊಸ ಯುಗ ಆರಂಭಿಸಬೇಕಾಗಿದೆ.

ರೋಹಿತ್ ನಿವೃತ್ತಿಯ ಬಳಿಕ ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಚುಟುಕು ಮಾದರಿಯಲ್ಲಿ ಅಬ್ಬರದ ಪ್ರದರ್ಶನ ನೀಡುವ ಜತೆಗೆ ತಂಡದ ಮುಂದಾಳತ್ವ ವಹಿಸಲು ಯಾರು ಸಮರ್ಥರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ತಂಡದಲ್ಲಿ ಹಿರಿಯ ಆಟಗಾರರ ಸಂಖ್ಯೆ ಕಡಿಮೆ ಇರುವ ಕಾರಣ ಇರುವವರಲ್ಲೇ ಇವರಾಗಬಹುದು ಎಂಬ ಊಹಾಪೋಗಳು ಹೆಚ್ಚಾಗಿದೆ. ಹೀಗಾಗಿ ಯಾರಿಗೆ ಹೆಚ್ಚಿನ ಅವಕಾಶ ಇದೆ ಎಂಬುದನ್ನು ನೋಡೋಣ.

ಹಾರ್ದಿಕ್ ಪಾಂಡ್ಯ

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಿ 20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲು ಇರುವ ಮುಂಚೂಣಿ ಹೆಸರು. ಅವರು ಭಾರತದ ಟಿ 20 ವಿಶ್ವಕಪ್ 2024 ಅಭಿಯಾನಕ್ಕೆ ಉಪನಾಯಕರಾಗಿದ್ದರು. ಪ್ರಶಸ್ತಿ ಗೆಲುವಿನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದ ಅವರು ಮುಂದಿನ ಋತುವಿನಲ್ಲಿ ಫ್ರಾಂಚೈಸಿಯನ್ನು ಫೈನಲ್​ಗೆ ಕೊಂಡೊಯ್ದಿದ್ದರು. ಹೀಗಾಗಿ ಹಾರ್ದಿಕ್ ಈ ಸ್ವರೂಪದಲ್ಲಿ ನಾಯಕತ್ವದ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ. ಅದರ ಜತೆಗೆ 2022-23ರ ಅವಧಿಯಲ್ಲಿ 16 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು.

2022 ರ ಟಿ 20 ವಿಶ್ವಕಪ್​​ನ ಸೆಮಿಫೈನಲ್​ನಲ್ಲಿ ಭಾರತ ನಿರ್ಗಮಿಸಿದ ನಂತರ ನ್ಯೂಜಿಲೆಂಡ್​​ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಗೆ ಪಾಂಡ್ಯ ನಾಯಕರಾಗಿದ್ದರು. ಶ್ರೀಲಂಕಾ ವಿರುದ್ಧ 3-0 ವೈಟ್ವಾಶ್ ಮತ್ತು ತವರಿನಲ್ಲಿ ಕಿವೀಸ್ ವಿರುದ್ಧ 2-1 ಅಂತರದ ಗೆಲುವು ಸಾಧಿಸಿದ ತಂಡದ ಮುಂದಾಳತ್ವ ವಹಿಸಿದ್ದರು. ನಾಯಕನಾಗಿ ಅವರ ಕೊನೆಯ ಟಿ 20 ಐ ಸರಣಿ ಕಳೆದ ವರ್ಷ ಆಗಸ್ಟ್​​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2-3 ಅಂತರದಲ್ಲಿ ಸರಣಿ ಸೋಲಿನೊಂದಿಗೆ ಕೊನೆಗೊಂಡಿತ್ತು. ಹಾರ್ದಿಕ್ ಪಾಂಡ್ಯ ಏಕದಿನ ತಂಡದ ಪ್ರಮುಖ ಆಟಗಾರನಾಗಿರುವುದರಿಂದ ಎರಡು ಸ್ವರೂಪಗಳನ್ನು ಹೇಗೆ ಸಮತೋಲನಗೊಳಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ವಿಶ್ವದ ಪ್ರಮುಖ ಟಿ 20 ಬ್ಯಾಟರ್​ಗಳಲ್ಲಿ ಒಬ್ಬರು. ಈ ಮಾದರಿಯಲ್ಲಿ ಬ್ಯಾಟ್​ನೊಂದಿಗೆ ಭಾರತದ ಪರ ಆಕ್ರಮಣಕಾರಿಯಾಗಿದ್ದಾರೆ. ಕಳೆದ ವರ್ಷ ಏಕದಿನ ವಿಶ್ವಕಪ್ ನಂತರ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಅವರು ಭಾರತವನ್ನು ಮುನ್ನಡೆಸಿದ್ದರು. ನಂತರ ಡಿಸೆಂಬರ್​​ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ 20 ಐಗಳಲ್ಲಿ ತಂಡದ ನಾಯಕರಾಗಿದ್ದರು. ನಾಯಕನಾಗಿದ್ದ ತಮ್ಮ ಕೊನೆಯ ಪಂದ್ಯದಲ್ಲಿ, ಸೂರ್ಯಕುಮಾರ್ 56 ಎಸೆತಗಳಲ್ಲಿ ಶತಕ ಬಾರಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ 106 ರನ್​ಗಳ ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

ಟೆಸ್ಟ್ ಮತ್ತು ಏಕದಿನ ತಂಡಗಳಲ್ಲಿ ಇನ್ನೂ ಕಾಯಂ ಸ್ಥಾನ ಪಡೆಯದ ಕಾರಣ, ಸೂರ್ಯಕುಮಾರ್ ತಮ್ಮ ಗಮನವನ್ನು ಆಟದ ಕಿರು ಸ್ವರೂಪಕ್ಕೆ ಮೀಸಲಿಡುವ ಸರ್ವ ಅವಕಾಶ ಹೊಂದಿದ್ದಾರೆ.

ಜಸ್ಪ್ರೀತ್ ಬುಮ್ರಾ

ಭಾರತದ ಆಲ್-ಫಾರ್ಮ್ಯಾಟ್ ವೇಗದ ಬೌಲರ್ ಆಧುನಿಕ ಯುಗದ ​​ ಅತ್ಯುತ್ತಮ ಕ್ರಿಕೆಟಿಗ. ಭಾರತ ತಂಡದ ಯಶಸ್ಸಿನ ರೂವಾರಿ ಕೂಡ. ಸೀಮಿತ ನಾಯಕತ್ವ ಅನುಭವವನ್ನು ಹೊಂದಿದ್ದರೂ, ಬುಮ್ರಾ ತಮ್ಮ ತೀಕ್ಷ್ಣ ಚಾತುರ್ಯ ಮತ್ತು ಆಟದ ಅರಿವಿಗೆ ಪ್ರಖ್ಯಾತರು. ಅವರು ಹಲವು ಬಾರಿ ತಂಡದ ಉಪನಾಯಕರೂ ಆಗಿದ್ದಾರೆ. ಕಳೆದ ವರ್ಷ ಐರ್ಲೆಂಡ್ ವಿರುದ್ಧ ಎರಡು ಟಿ 20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು. ಆದಾಗ್ಯೂ, ಎಲ್ಲಾ ಮೂರು ಸ್ವರೂಪಗಳಲ್ಲಿ ಅವರ ಬೌಲಿಂಗ್ ಭಾರತಕ್ಕೆ ಮುಖ್ಯ. ಅವರ ಇತ್ತೀಚಿನ ಗಾಯಗಳನ್ನು ಗಮನಿಸಿದರೆ, ತಂಡದ ಆಡಳಿತವು ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡದು.

ಇದನ್ನೂ ಓದಿ: T20 World Cup 2024 : ವೆಸ್ಟ್​ ಇಂಡೀಸ್​ನಲ್ಲಿ ಅಪಾಯಕಾರಿ ಚಂಡಮಾರುತದಲ್ಲಿ ಸಿಲುಕಿಕೊಂಡ ಚಾಂಪಿಯನ್ ಭಾರತ ತಂಡ

ರಿಷಭ್ ಪಂತ್

ಭೀಕರ ಕಾರು ಅಪಘಾತದಿಂದ ಆದ ಗಾಯಗಳಿಂದ ಚೇತರಿಸಿದ ರಿಷಭ್​ ಪಂತ್ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಗಮನಾರ್ಹ ಪುನರಾಗಮನ ಮಾಡಿದ್ದರು. ಐಪಿಎಲ್ 2024 ರಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಆ ತಂಡ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 2022 ರಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ್ದರು. ಅದು 2-2 ಡ್ರಾದಲ್ಲಿ ಕೊನೆಗೊಂಡಿತ್ತು. ಆದಾಗ್ಯೂ, ಪಂತ್ ಭಾರತದ ಟಿ 20 ಐ ಪ್ಲೇಯಿಂಗ್ ಹನ್ನೊಂದರಲ್ಲಿ ತಮ್ಮ ಸ್ಥಾನವನ್ನು ಇನ್ನೂ ಭದ್ರಪಡಿಸಿಕೊಂಡಿಲ್ಲ. ಅವರನ್ನು ಯಾವ ರೀತಿ ಮ್ಯಾನೇಜ್ಮೆಂಟ್​ ಬಳಸಿಕೊಳ್ಳಲಿದೆ ಎಂದು ನೋಡಬೇಕು. ಅವರ ಬ್ಯಾಟಿಂಗ್​ನಲ್ಲಿ ಅಸ್ಥಿತರೆ ಇರುವ ಕಾರಣ ನಾಯಕತ್ವ ಜವಾಬ್ದಾರಿ ನೀಡುವ ಮೊದಲು ಬಿಸಿಸಿಐ ಇನ್ನೊಮ್ಮೆ ಯೋಚನೆ ಮಾಡಲಿದೆ.

ಶುಬ್ಮನ್ ಗಿಲ್​

ಹಾರ್ದಿಕ್ ಪಾಂಡ್ಯ ಐಪಿಎಲ್​ನಲ್ಲಿ ಮಂಬಯಿ ತಂಡದ ಪಾಲಾದ ಬಳಿಕ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಶುಭ್​​ಮನ್​ ಗಿಲ್ ಜಿಂಬಾಬ್ವೆಯಲ್ಲಿ ಮುಂಬರುವ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. ಟಿ 20 ವಿಶ್ವಕಪ್ 2024 ತಂಡದಲ್ಲಿ ಅವರು ಸ್ಥಾನ ಪಡೆಯದಿದ್ದರೂ ರೋಹಿತ್ ಮತ್ತು ಕೊಹ್ಲಿ ಅವರ ನಿವೃತ್ತಿಯ ನಂತರ ಗಿಲ್ ಟಿ 20 ಐಗಳಲ್ಲಿ ಅಗ್ರ ಕ್ರಮಾಂಕದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅವರು ಇನ್ನೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವದ ಅನುಭವವನ್ನು ಹೊಂದಿಲ್ಲವಾದರೂ, 24 ವರ್ಷದ ಆಟಗಾರ ಏಕದಿನ ಮತ್ತು ಟೆಸ್ಟ್ ತಂಡಗಳ ಪ್ರಮುಖ ಸದಸ್ಯರಾಗಿದ್ದಾರೆ. ಭವಿಷ್ಯಕ್ಕಾಗಿ ನಾಯಕನನ್ನು ರೂಪಿಸುವಲ್ಲಿ ಮ್ಯಾನೇಜ್ಮೆಂಟ್ ಕಣ್ಣಿಟ್ಟಿರುವ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

Exit mobile version