ಬೆಂಗಳೂರು : ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಭಾರತ ಕ್ರಿಕೆಟ್ ತಂಡ 2022ರಲ್ಲಿ ಜಯಾಪಜಯದ ಮಿಶ್ರ ಫಲವನ್ನು ಉಂಡಿದೆ. ದ್ವಿಪಕ್ಷೀಯ ಸರಣಿಯಲ್ಲಿ ಅದರಲ್ಲೂ ತವರು ನೆಲದಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ ತಂಡ ಪ್ರಮುಖ ಟೂರ್ನಿಗಳಲ್ಲಿ ವೈಫಲ್ಯ ಕಂಡಿದೆ. ಆದಾಗ್ಯೂ ತನ್ನ ಪಾರಮ್ಯ ಮುಂದುವರಿಸುವ ಎಲ್ಲ ಸೂಚನೆ ನೀಡಿದೆ. ಆದರೆ, ವಿರಾಟ್ ಕೊಹ್ಲಿ ಅವರಿಂದ ನಾಯಕತ್ವದ ಹೊಣೆಗಾರಿಕೆ ವಹಿಸಿಕೊಂಡ ನಾಯಕ ರೋಹಿತ್ ಶರ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಯಶಸ್ಸು ಕಂಡಿಲ್ಲ. ಗಾಯದ ಸಮಸ್ಯೆ, ಬ್ಯಾಟಿಂಗ್ ವೈಫಲ್ಯ. ಏಷ್ಯಾ ಕಪ್ ಮತ್ತು ಟಿ20 ವಿಶ್ವ ಕಪ್ನ ನಿರಾಸೆ ಅವರ ಮುಂದಾಳತ್ವದ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ.
ವಿರಾಟ್ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ ಬಳಿಕ ಅವರನ್ನು ಏಕದಿನ ಮಾದರಿ ಹಾಗೂ ಟೆಸ್ಟ್ ನಾಯಕತ್ವದಿಂದ ಹೊರಕ್ಕೆ ಇಡಲಾಯಿತು. ಈ ವೇಳೆ ಬಿಸಿಸಿಐ ಆಯ್ಕೆ ಸಮಿತಿಗೆ ರೋಹಿತ್ ಶರ್ಮ ಅತ್ಯುತ್ತಮ ಆಯ್ಕೆ ಎನಿಸಿಕೊಂಡರು. ಐಪಿಎಲ್ನಲ್ಲಿ ಐದು ಟ್ರೋಫಿ ಗೆದ್ದಿರುವ ಅವರಿಗೆ ಹೆಚ್ಚು ಯೋಚಿಸದೇ ಪಟ್ಟ ಕಟ್ಟಲಾಯಿತು. ಆದರೆ, ರೋಹಿತ್ ಅವರ ಸಾಮರ್ಥ್ಯ ಮತ್ತು ಅದೃಷ್ಟ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡ ನಂತರ ಮುಂದುವರಿಯಲಿಲ್ಲ. ಬದಲಾಗಿ ಸೋಲು ಗೆಲುವಿನ ಗ್ರಾಫ್ ಮೇಲೆ ಕೆಳಗೆ ಓಲಾಡಿತು. ಜತೆಗೆ ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿ ಬದಲಾದರು.
ಚೇತನ್ ಶರ್ಮ ನೇತೃತ್ವದ ಆಯ್ಕೆ ಸಮಿತಿ ರೋಹಿತ್ ಶರ್ಮ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದಾಗ ಕ್ರಿಕೆಟ್ ಅಭಿಮಾನಿಗಳು ದೊಡ್ಡ ಭರವಸೆ ಇಟ್ಟುಕೊಂಡಿದ್ದರು. ಆದರೆ ಯಶಸ್ಸು ದ್ವಿಪಕ್ಷೀಯ ಸರಣಿಗಷ್ಟೇ ಸೀಮಿತವಾಯಿತು . ಅದಕ್ಕಿಂತ ಹೆಚ್ಚಾಗಿ ರೋಹಿತ್ ಶರ್ಮ ಅವರು ಗಾಯದ ಸಮಸ್ಯೆ ಹಾಗೂ ವಿಶ್ರಾಂತಿ ಎಂಬ ಕಾರಣಕ್ಕೆ ಹಲವು ಸರಣಿಗಳು ಹಾಗೂ ಪಂದ್ಯಗಳಿಗೆ ಅಲಭ್ಯರಾದರು. ಇದು ತಂಡದ ಸಂಯೋಜನೆಗೆ ಪೆಟ್ಟು ಕೊಟ್ಟಿತು.
ಏಳು ನಾಯಕರ ಗೊಂದಲ
ರೋಹಿತ್ ಶರ್ಮ ಅವರ ಅಲಭ್ಯತೆಯ ಕಾರಣಕ್ಕೆ ಟೀಮ್ ಇಂಡಿಯಾದ ನಾಯಕನ ಸ್ಥಾನ ಸಂಗೀತ ಕುರ್ಚಿಯಂತಾಯಿತು. ರಾಹುಲ್, ಪಾಂಡ್ಯ, ರಿಷಭ್, ಶಿಖರ್ ಧವನ್, ಬುಮ್ರಾ ಸೇರಿದಂತೆ ಒಟ್ಟಾರೆ ಏಳು ನಾಯಕರನ್ನು ಕಂಡಿತು. ಜತೆಗೆ ತಂಡದ ಸ್ಥಿರತೆಗೂ ಪೆಟ್ಟು ಬಿತ್ತು.
ಭಾರತ ತಂಡ 2022ರಲ್ಲಿ ಒಟ್ಟು 71 ಅಂತಾರಾಷ್ಟ್ರಿಯ ಪಂದ್ಯಗಳನ್ನು ಆಡಿದ್ದರೆ, ರೋಹಿತ್ 39ರಲ್ಲಿ ಮಾತ್ರ ಆಡಿದ್ದಾರೆ. 32 ಪಂದ್ಯಗಳಿಗೆ ಗಾಯ ಹಾಗೂ ಒತ್ತಡ ನಿರ್ವಹಣೆಯ ವಿಶ್ರಾಂತಿಗಾಗಿ ಅಲಭ್ಯರಾಗಿದ್ದಾರೆ. ಈ ಅವಧಿಯಲ್ಲಿ ಬೇರೆಬೇರೆ ನಾಯಕರನ್ನು ಹೀಗಾಗಿ, ಟೆಸ್ಟ್ ಪಂದ್ಯಗಳನ್ನು 4 ನಾಯಕರು ಹಾಗೂ ಸೀಮಿತ ಓವರ್ಗಳ ಕ್ರಿಕೆಟ್ ತಂಡವನ್ನು 5 ನಾಯಕರು ನಿರ್ವಹಿಸಿದರು.
ಫಿಟ್ನೆಸ್ ಸಮಸ್ಯೆ
ನಾಯಕರಾಗಿ ಆಯ್ಕೆಯಾದ 34 ವರ್ಷದ ರೋಹಿತ್ ಶರ್ಮ ಅವರು ಫಿಟ್ನೆಸ್ ಸಮಸ್ಯೆಯನ್ನು ಎದುರಿಸಿದರು. ಅನಾರೋಗ್ಯ ಮತ್ತು ಗಾಯದ ಕಾರಣಕ್ಕೆ 9 ಪಂದ್ಯಗಳಲ್ಲಿ ಆಡಲಿಲ್ಲ. ಪುನಶ್ಚೇತನ ಹಾಗೂ ವಿಶ್ರಾಂತಿ ಎಂದು 22 ಪಂದ್ಯಗಳಿಗೆ ಅಲಭ್ಯರಾದರು. ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿದ್ದ ಏಕೈಕ ಟೆಸ್ಟ್ ಪಂದ್ಯ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅವರು ಅಲಭ್ಯರಾದರು. ಟೀಮ್ ಇಂಡಿಯಾ ಪಾಲಿಗೆ ಇವೆಲ್ಲ ಪ್ರಮುಖ ಟೂರ್ನಿಗಳಾಗಿದ್ದವು. ಎರಡರಲ್ಲೂ ಭಾರತ ನಿರಾಸೆ ಎದುರಿಸಿತು.
ಯಾವ್ಯಾವ ಮಾದರಿಗೆ ರೋಹಿತ್ ಅಲಭ್ಯ?
ಭಾರತ ಆಡಿದ್ದ 7 ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ 5 ಪಂದ್ಯಗಳಲ್ಲಿ ಇರಲಿಲ್ಲ. ಎಲ್ಲವನ್ನೂ ಗಾಯದ ಕಾರಣಕ್ಕೆ ಕಳೆದುಕೊಂಡರು. 24 ಏಕ ದಿನ ಕ್ರಿಕೆಟ್ ಪಂದ್ಯದಲ್ಲಿ 16 ಪಂದ್ಯಗಳಲ್ಲಿ ಆಡಲಿಲ್ಲ. 12 ಪಂದ್ಯಗಳಿಂದ ವಿಶ್ರಾಂತಿ ಪಡೆದುಕೊಂಡರೆ 4 ಪಂದ್ಯಗಳಲ್ಲಿ ಗಾಯದ ಸಮಸ್ಯೆ ಎದುರಿಸಿದರು. 40 ಟಿ20 ಪಂದ್ಯಗಳಲ್ಲಿ 11ರಲ್ಲಿ ಆಡಲಿಲ್ಲ. ಈ ಎಲ್ಲ ಪಂದ್ಯಗಳಲ್ಲಿ ಅವರಿಗೆ ವಿಶ್ರಾಂತಿ ಕಲ್ಪಿಸಲಾಗಿತ್ತು.
ಕೂಲ್ ಕಳೆದುಕೊಂಡ ಕ್ಯಾಪ್ಟನ್
ಐಪಿಎಲ್ನಲ್ಲಿ ಐದು ಟ್ರೋಫಿ ಗೆದ್ದಿರುವ ರೋಹಿತ್ ಶರ್ಮ ಶಾಂತ ಮೂರ್ತಿಯಂತೆ ಕಂಡಿದ್ದರು. ಆದರೆ, ಟೀಮ್ ಇಂಡಿಯಾದಲ್ಲಿ ಅವರು ತಾಳ್ಮೆ ಕಳೆದುಕೊಂಡಿದ್ದರು. ತಂಡ ಸೋಲಿನ ಹಾದಿಯಲ್ಲಿದ್ದಾಗ ಒತ್ತಡಕ್ಕೆ ಬೀಳಲು ಆರಂಭಿಸಿದರು. ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರು. ತಂಡದ ಸಹ ಸದಸ್ಯರನ್ನು ಕೆಟ್ಟ ಪದಗಳಿಂದ ನಿಂದಿಸಿದರು.
ಏಷ್ಯಾ ಕಪ್ನಲ್ಲಿ ಭಾರತ ತಂಡ ಗ್ರೂಪ್ 4ರ ಹಂತದಲ್ಲಿ ಹೊರಕ್ಕೆ ಬಿತ್ತು. ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡದ ವಿರುದ್ಧದವೇ ಸೋತಿತು. ಇದು ರೋಹಿತ್ ನಾಯಕತ್ವದ ಸಾಮರ್ಥ್ಯವನ್ನೇ ಪ್ರಶ್ನಿಸುವಂತೆ ಮಾಡಿತು. ರೋಹಿತ್ ಶರ್ಮ ನಾಯಕತ್ವದೊಂದಿಗೆ ಆಸ್ಟ್ರೇಲಿಯಾಗೆ ವಿಶ್ವ ಕಪ್ಗೆ ತೆರಳಿದ್ದ ಭಾರತ ತಂಡಕ್ಕೂ ನಿರಾಸೆ ಉಂಟಾಯಿತು. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲನುಭವಿಸಿ ದೊಡ್ಡ ಬೆಲೆ ತೆರಬೇಕಾಯಿತು.
ರೋಹಿತ್- ವಿರಾಟ್ ನಡುವಿನ ತುಲನೆ
ವಿರಾಟ್ ಕೊಹ್ಲಿ 68 ಟೆಸ್ಟ್ ಪಂದ್ಯಗಳಿಗೆ ನಾಯಕರಾಗಿದ್ದು, 54.80 ಸರಾಸರಿಯಂತೆ 5864 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, 30 ಸರಾಸರಿಯಂತೆ 90 ರನ್ ಬಾರಿಸಿದ್ದಾರೆ. ವಿರಾಟ್ 95 ಏಕ ದಿನ ಪಂದ್ಯಗಳಲ್ಲಿ ಆಡಿದ್ದು 72.65 ಸರಾಸರಿಯಂತೆ 5449 ರನ್ ಬಾರಿಸಿದ್ದಾರೆ. ರೋಹಿತ್ 8 ಏಕ ದಿನ ಪಂದ್ಯದಲ್ಲಿ 41.50 ಸರಾಸರಿಯಂತೆ 249 ರನ್ ಬಾರಿಸಿದ್ದಾರೆ. ವಿರಾಟ್ 50 ಟಿ20 ಪಂದ್ಯಗಳಿಗೆ ನಾಯಕರಾಗಿದ್ದು 47.57 ಸರಾಸರಿಯಂತೆ 1570 ರನ್ ಬಾರಿಸಿದ್ದಾರೆ. ರೋಹಿತ್ 32 ಪಂದ್ಯಗಳಲ್ಲಿ 27.16 ಸರಾಸರಿಯಂತೆ 815 ರನ್ ಬಾರಿಸಿದ್ದಾರೆ.
ಇದನ್ನೂ ಓದಿ | INDvsBAN | ರೋಹಿತ್ ಶರ್ಮಗೆ ಮನೆಯಲ್ಲೇ ಕುಳಿತುಕೊಳ್ಳಲು ಹೇಳಿ; ಹೀಗೆಂದಿದ್ದು ಯಾರು?