ಮೆಲ್ಬೋರ್ನ್ : ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ತಂಡದ ವಿರುದ್ಧದ ಟಿ೨೦ ವಿಶ್ವ ಕಪ್‌ನ ಪಂದ್ಯದಲ್ಲಿ ಭಾರತ ತಂಡದ ನಾಯಕ ಟಾಸ್ ಗೆದ್ದಿದ್ದು, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಗುಂಪು ೨ರಲ್ಲಿರುವ ಭಾರತ ಹಾಗೂ ಪಾಕಿಸ್ತಾನ ತಂಡಕ್ಕೆ ಇದು ಸೂಪರ್-೧೨ ಹಂತದ ಮೊದಲ ಪಂದ್ಯವಾಗಿದೆ. ಚೇಸಿಂಗ್ ತಂಡಕ್ಕೆ ಇಲ್ಲಿ ಹೆಚ್ಚಿನ ಗೆಲುವು ಲಭಿಸಿದ ಕಾರಣ ನಾಯಕ ರೋಹಿತ್ ಶರ್ಮ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದ್ದಾರೆ.
ಆಡುವ ಹನ್ನೊಂದರ ಬಳಗದಲ್ಲಿ ದಿನೇಶ್ ಕಾರ್ತಿಕ್ ಅವಕಾಶ ಪಡೆದುಕೊಂಡಿದ್ದು, ರಿಷಭ್ ಪಂತ್‌ಗೆ ಅವಕಾಶ ನೀಡಿಲ್ಲ. ವೇಗಿಗಳ ವಿಭಾಗದಲ್ಲಿ ಹರ್ಷಲ್ ಪಟೇಲ್‌ಗೂ ಅವಕಾಶ ನೀಡಿಲ್ಲ. ಆರ್. ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಸ್ಪಿನ್ನ ಜವಾಬ್ದಾರಿ ವಹಿಸಿಕೊಂಡಿದ್ದು, ಯಜ್ವೇಂದ್ರ ಚಹಲ್‌ಗೆ ಅವಕಾಶ ನೀಡಿಲ್ಲ. ದೀಪಕ್ ಹೂಡ ಅವರೂ ೧೧ರ ತಂಡದಲ್ಲಿ ಅವಕಾಶ ಗಿಟ್ಟಿಸಿಲ್ಲ.
ಪಿಚ್ ಹೇಗಿದೆ?
ಪಂದ್ಯ ನಡೆಯಲಿರುವ ಎಮ್‌ಸಿಜಿ ಪಿಚ್ ಪಂದ್ಯದುದ್ದಕ್ಕೂ ಏಕ ರೀತಿಯಲ್ಲಿ ವರ್ತಿಸಲಿದೆ. ಹೀಗಾಗಿ ದುಬೈ ಪಿಚ್‌ನಂತೆ ಇಲ್ಲಿ ಟಾಸ್ ಗೆದ್ದವರೇ ಪಂದ್ಯದ ಬಾಸ್ ಎನ್ನುವಂತಿಲ್ಲ. ವೇಗದ ಬೌಲಿಂಗ್‌ಗೆ ಇದು ಹೆಚ್ಚು ಪೂರಕವಾಗಿ ಇರಲಿದೆ ಎಂದು ಪಿಚ್ ಕ್ಯುರೇಟರ್ ಹೇಳಿದ್ದಾರೆ. ಹೊಸ ಚೆಂಡಿನಲ್ಲಿ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಸತತವಾಗಿ ಪ್ರಯತ್ನ ಮಾಡಲಿದ್ದಾರೆ. ೨೦೨೦ರ ಅಂಕಿ ಅಂಶಗಳನ್ನು ನೋಡುವುದಾದರೆ ಚೇಸಿಂಗ್ ಮಾಡುವ ತಂಡ ಶೇಕಡ ೫೦ರಷ್ಟು ಗೆಲುವು ಸಾಧಿಸಿದೆ.
ತಂಡಗಳು
ಭಾರತ : ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ , ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್.
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಶಾನ್ ಮಸೂದ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ನಸೀಮ್ ಶಾ, ಶಾಹಿನ್ ಶಾ ಅಫ್ರಿದಿ, ಹ್ಯಾರಿಸ್ ರವೂಫ್.
ಇದನ್ನೂ ಓದಿ | IND-PAK | ಪಾಕಿಸ್ತಾನ ವಿರುದ್ಧ ಭಾರತ ತಂಡದ ಡಜನ್ ಗೆಲುವು ಸಾಧನೆ