Site icon Vistara News

Team India Coach: ಭಾರತ ತಂಡದ ಕೋಚ್​ ಆಗಿ ಗಂಭೀರ್​ ಆಯ್ಕೆ; ಶೀಘ್ರದಲ್ಲೇ ಅಧಿಕೃತ ಘೋಷಣೆ

Team India Coach

Team India Coach: Gautam Gambhir Set to Replace Rahul Dravid as India Head Coach, BCCI to Announce Soon

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌(Team India Coach) ಆಗಿ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌(Gautam Gambhir) ಅವರನ್ನೇ ನೇಮಕ ಮಾಡಲು ಬಿಸಿಸಿಐ(BCCI) ತೀರ್ಮಾನ ಕೈಗೊಂಡಿದ್ದು ಇದೇ ತಿಂಗಳ ಅಂತ್ಯದಲ್ಲಿ ಅಧಿಕೃತ ಘೋಷಣೆ ಮಾಡಲಿದೆ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ರಾಹುಲ್​ ದ್ರಾವಿಡ್(Rahul Dravid)​ ಅವರು ಟಿ20 ವಿಶ್ವಕಪ್​ ಬಳಿಕ ಕೋಚ್(India Head Coach)​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

ದ್ರಾವಿಡ್​ ಅವರು ಕೋಚ್​ ಹುದ್ದೆಯಿಂದ ಕೆಳಗಿಳಿಯುವುದಾಗಿ ಹೇಳಿದ ಬೆನ್ನಲ್ಲೇ ಗಂಭೀರ್​ ಮುಂದಿನ ಕೋಚ್ ಎನ್ನುವ ಮಾತುಗಳು ಕೇಳಿಬಂದಿತ್ತು. ಐಪಿಎಲ್​ ವೇಳೆ ಇದಕ್ಕಾಗಿ ಜಯ್​ ಶಾ ಮತ್ತು ಬಿಸಿಸಿಐ ಅಧಿಕಾರಿಗಳು ಕೂಡ ಗಂಭೀರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮೂಲಗಳ ಪ್ರಕಾರ ಗಂಭೀರ್​ ಕೂಡ ಕೋಚ್​ ಆಗಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್‌ ತಂಡಕ್ಕೆ ಯಶಸ್ವಿ ಮಾರ್ಗದರ್ಶನ ನೀಡಿ ತಂಡವನ್ನು ಚಾಂಪಿಯನ್​ ಮಾಡಿದ ಗಂಭೀರ್‌, ರಾಹುಲ್‌ ದ್ರಾವಿಡ್‌ ಅವರ ಸ್ಥಾನ ತುಂಬಲು ಅರ್ಹರು ಎಂದು ಬಿಸಿಸಿಐ ಭಾವಿಸಿದೆ ಎಂದು ಮೂಲಗಳು ತಿಳಿಸಿವೆ.  ಮೂಲಗಳ ಪ್ರಕಾರ ಗಂಭೀರ್​ ಕೋಚ್​ ಆಗುವ ದೃಷ್ಟಿಯಿಂದಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎನ್ನಲಾಗಿದೆ.

ಕಳೆದ ತಿಂಗಳು ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಆರಂಭದಲ್ಲಿ ಎನ್​ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಅವರು ಕೊಚ್​ ಹುದ್ದೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದರು. ಈ ವೇಳೆ ಗಂಭೀರ್​ ಕೋಚ್​ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಸದ್ಯ ಅವರೇ ಕೋಚ್​ ಆಗುವುದು ಖಚಿತ ಎನ್ನುತ್ತಿದೆ ಮೂಲಗಳು. ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ India Coach: ಕೋಚ್​ ಆಗುವ ಮುನ್ನವೇ ಗಂಭೀರ್​ಗೆ ಕಿವಿಮಾತು ಹೇಳಿದ ಅನಿಲ್ ಕುಂಬ್ಳೆ

ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಭರ್ತಿ ಮಾಡುವ ಮುನ್ನ ಗಂಭೀರ್​ ಅವರು ​ಒಂದು ಷರತ್ತು ಹಾಕಿದ್ದರು. ‘ಆಯ್ಕೆಯ ಗ್ಯಾರಂಟಿ’ ನೀಡಿದರೆ ಮಾತ್ರ ಗಂಭೀರ್ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧರಿರುವುದಾಗಿ ಹೇಳಿದ್ದರು. ಕೋಚ್​ ಹುದ್ದೆಗಾಗಿ ಎಷ್ಟು ಅರ್ಜಿಗಳು ಬಂದಿದೆ ಎಂಬುದರ ಬಗ್ಗೆ ಸದ್ಯ ಯಾವುದೇ ಮಾಹಿತಿ ಹೊರಬಿದ್ದಿಲ್ಲ ಆದರೆ ಗಂಭೀರ್​ ಕೋಚ್​ ಆಗುವುದು ಖಚಿತ ಎನ್ನಲಾಗಿದೆ.

ದ್ರಾವಿಡ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕವೇ ಕೋಚ್​ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ಟಿ20 ವಿಶ್ವಕಪ್​ ತನಕ ಅವರನ್ನು ಮುಂದುವರಿಯುವಂತೆ ಒತ್ತಾಯ ಮಾಡಿತ್ತು. ಹೀಗಾಗಿ ದ್ರಾವಿಡ್​ ಟಿ20 ವಿಶ್ವಕಪ್ ತನಕ ಈ ಹುದ್ದೆಯಲ್ಲಿ ಮುಂದುವರಿದರು.

Exit mobile version