ಮುಂಬಯಿ: ಭಾರತ ಕ್ರಿಕೆಟ್ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋತರೂ ಕೂಡ ಬಿಡುವಿಲ್ಲದ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದೆ. ಈ ವರ್ಷ ಟೀಮ್ ಇಂಡಿಯಾ ಯಾವ ದೇಶದೊಂದಿಗೆ ಎಷ್ಟು ಸರಣಿ ಆಡಲಿದೆ ಎಂಬ ಸಂಪೂರ್ಣ ವೇಳಾಪಟ್ಟಿಯ(Team India Cricket Schedule 2023) ಮಾಹಿತಿ ಇಲ್ಲಿದೆ.
ಭಾರತ-ವಿಂಡೀಸ್ ಸರಣಿ
ಟೆಸ್ಟ್ ವಿಶ್ವ ಕಪ್ ಬಳಿಕ ಭಾರತ ಮೊದಲ ಸರಣಿಯನ್ನು ವೆಸ್ಟ್ ಇಂಡೀಸ್(INDvsWI) ವಿರುದ್ಧ ಆಡಲಿದೆ. ಉಭಯ ತಂಡಗಳ ಈ ಸರಣಿಯಲ್ಲಿ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ವಿಂಡೀಸ್ಗೆ ಪ್ರವಾಸಗೈಯಲಿರುವ ಭಾರತ ತಂಡ ಮೊದಲು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜು. 12-16) ಮತ್ತು ಪೋರ್ಟ್ ಆಫ್ ಸ್ಪೇನ್ (ಜು. 20-24). ಪೋರ್ಟ್ ಆಫ್ ಸ್ಪೇನ್‌ನ “ಕ್ವೀನ್ಸ್‌ಪಾರ್ಕ್ ಓವಲ್’ನಲ್ಲಿ ನಡೆಯಲಿದೆ.
ಏಷ್ಯಾ ಕಪ್ 2023
ವೆಸ್ಟ್ ಇಂಡೀಸ್ ಪ್ರವಾಸ ಮುಕ್ತಾಯದ ಬೆನ್ನಲ್ಲೇ ಭಾರತ ತಂಡ ಪ್ರತಿಷ್ಠಿತ ಏಷ್ಯಾ ಕಪ್(asia cup 2023) ಆಡಲಿದೆ. ಈ ಟೂರ್ನಿ ಸದ್ಯದ ಮಾಹಿ ಪ್ರಕಾರ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಭಾರತ ತಂಡ ತನ್ನ ಪಾಲಿನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಟೂರ್ನಿಯ ಆತಿಥ್ಯ ಪಾಕಿಸ್ತಾನ ವಹಿಸಿಕೊಂಡಿದೆ. ಭದ್ರತೆಯ ಕಾರಣದಿಂದ ಭಾರತ ತಂಡ ಪಾಕ್ ನೆಲದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸಿತ್ತು. ಹೀಗಾಗಿ ಮೊದಲ ಹಂತದಲ್ಲಿ 4 ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಉಳಿದೆಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.
ಆಸ್ಟ್ರೇಲಿಯ VS ಭಾರತ
ವರ್ಷಾಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವ ಕಪ್ ಟೂರ್ನಿಗೆ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಭಾರತ ತಂಡ ಏಷ್ಯಾ ಕಪ್ ಮುಗಿದ ತಕ್ಷಣ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಈ ಸರಣಿ ನಡೆಯಲಿದೆ. ಉಭಯ ತಂಡಗಳ ಮಧ್ಯೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಭಾರತದ VS ಅಫಘಾನಿಸ್ತಾನ
ಪೂರ್ವ ನಿಗದಿಯಂತೆ ಭಾರತ ಮತ್ತು ಅಫಘಾನಿಸ್ತಾನ ತಂಡಗಳ ಸರಣಿ ಐಪಿಎಲ್ ಮುಗಿದ ತಕ್ಷಣ ನಡೆಯಬೇಕಿತ್ತು. ಆದರೆ ಅಂತಿಮ ಹಂತದಲ್ಲಿ ಕಾರಣಾಂತರಗಳಿಂದ ಭಾರತ ತಂಡ ಈ ಸರಣಿಯಿಂದ ಹಿಂದೆ ಸರಿದಿತ್ತು. ಇದೀಗ ಈ ಸರಣಿ ಆಸೀಸ್ ಪ್ರವಾಸದ ಬಳಿಕ ನಡೆಯುವ ಸಾಧ್ಯತೆ ಇದೆ. ಆದರೆ ಇದು ದೃಢಪಟ್ಟಿಲ್ಲ.
ಏಕದಿನ ವಿಶ್ವ ಕಪ್
ಪ್ರತಿಷ್ಠಿತ ಏಕದಿನ ವಿಶ್ವ ಕಪ್ ಟೂರ್ನಿಯು(icc odi world cup 2023) ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಸಲು ಎಲ್ಲ ಸಿದ್ಧತೆ ನಡೆಸಲಾಗಿದೆ. ಟೂರ್ನಿಯ ಅಧಿಕೃತ ವೇಳಾಪಟ್ಟಿ ಪ್ರಕಟವಾಗದಿದ್ದರೂ ಸದ್ಯದ ಪ್ರಕಾರ ಅಕ್ಟೋಬರ್ 5ರಿಂದ ಆರಂಭಗೊಂಡು ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ VS ಭಾರತ
ಏಕದಿನ ವಿಶ್ವ ಸಮರ ಮುಗಿದ ಕೂಡಲೇ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಆಸೀಸ್ ತಂಡ ಭಾರತ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಲಿದೆ.
ಇದನ್ನೂ ಓದಿ ICC Test Rankings: ಅಗ್ರಸ್ಥಾನ ಉಳಿಸಿಕೊಂಡ ಅಶ್ವಿನ್, ಪ್ರಗತಿ ಸಾಧಿಸಿದ ರಹಾನೆ
ಭಾರತ VS ದಕ್ಷಿಣ ಆಫ್ರಿಕಾ
ವರ್ಷದ ಕೊನೆಯ ಸರಣಿಯನ್ನು ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದೊಂದಿಗೆ ಕೊನೆಗೊಳಿಸಲಿದೆ. ಆದರೆ ಈ ಸರಣಿ ಡಿಸೆಂಬರ್‌ನಿಂದ ಆರಂಭಗೊಂಡು ಹೊಸ ವರ್ಷದ ಮೊದಲ ವಾರದವರೆಗೆ ಸಾಗಲಿದೆ. ಉಭಯ ತಂಡಗಳ ನಡುವೆ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ.