ಮುಂಬೈ: ಕಳೆದ ವರ್ಷ ಅಪೂರ್ಣವಾಗಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯವನ್ನಾಡಲು ಭಾರತ ತಂಡ ಇಂಗ್ಲೆಂಡ್‌ಗೆ ತೆರಳಿದೆ. ಜುಲೈ 1ರಿಂದ 5ರವರೆಗೆ ಟೆಸ್ಟ್ ಪಂದ್ಯ ನಡೆಯಲಿದೆ. ಕಳೆದ ವರ್ಷ ಟೆಸ್ಟ್ ಸರಣಿ ನಡೆಯುತ್ತಿದ್ದಾಗ ಭಾರತ ತಂಡದ (ಟೀಂ ಇಂಡಿಯಾ) ಸದಸ್ಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು, ಹೀಗಾಗಿ ಅಂತಿಮ ಪಂದ್ಯವನ್ನು ಮುಂದೂಡಲಾಗಿತ್ತು.
ಗುರುವಾರ ಮುಂಬೈನಿಂದ ಇಂಗ್ಲೆಂಡ್‌ಗೆ ಭಾರತ ತಂಡ ಪ್ರಯಾಣ ಬೆಳೆಸಿದೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ಚೆತೇಶ್ವರ್ ಪೂಜಾರ, ರವೀಂದ್ರ ಜಡೇಜಾ, ಶುಭ್‌ಮನ್ ಗಿಲ್, ಪ್ರಸಿದ್ಧ ಕೃಷ್ಣ ಮತ್ತಿತರ ಆಟಗಾರರು ತೆಗೆದುಕೊಂಡಿರುವ ಫೋಟೊವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯವನ್ನು ಈ ಹಿಂದೆ ಓಲ್ಡ್ ಟ್ರಫೋರ್ಡ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಈಗ ಪಂದ್ಯವನ್ನು ಬರ್ಮಿಂಗ್ ಹ್ಯಾಂನ ಎಡ್ಜ್‌ಬಾಸ್ಟನ್‌ಗೆ ಸ್ಥಳಾಂತರಿಸಲಾಗಿದೆ. ಸರಣಿಯಲ್ಲಿ ಭಾರತ ತಂಡ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದು, ಕೊನೆಯ ಪಂದ್ಯ ಡ್ರಾ ಆದರೂ ಸರಣಿ ಭಾರತದ ಕೈವಶವಾಗಲಿದೆ. ಆದರೆ ಭಾರತ ತಂಡ ಸೋತರೆ ಇಂಗ್ಲೆಂಡ್ ಸರಣಿಯನ್ನು ಸಮಬಲಗೊಳಿಸಲಿದೆ.
ಪ್ರಸ್ತುತ ಇಂಗ್ಲೆಂಡ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಈ ತಂಡ ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಈಗಾಗಲೇ ಸರಣಿ ವಶಪಡಿಸಿಕೊಂಡು ಆತ್ಮವಿಶ್ವಾಸದಲ್ಲಿದೆ. ಹೀಗಾಗಿ ಭಾರತ ತಂಡಕ್ಕೆ ಈ ಪ್ರವಾಸ ಸವಾಲಿನಿಂದ ಕೂಡಿರಲಿದೆ ಎಂಬುವುದರಲ್ಲಿ ಅನುಮಾನವಿಲ್ಲ.
ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ಈ ಸರಣಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಕೋಚ್ ರಾಹುಲ್ ದ್ರಾವಿಡ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಅಜಿಂಕ್ಯಾ ರಹಾನೆ ಹಾಗೂ ಚೆತೇಶ್ವರ್ ಪೂಜಾರ ಶ್ರೀಲಂಕಾ ವಿರುದ್ಧದ ಸರಣಿಯ ವೇಳೆ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಆದರೆ ಪೂಜಾರ ಕೌಂಟಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಗಾಯದಿಂದ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರೂ ಕೆ.ಎಲ್.ರಾಹುಲ್ ಈ ಪ್ರವಾಸದಿಂದ ದೂರ ಉಳಿಯುವ ಸಾಧ್ಯತೆ ಇದೆ.
ಭಾರತ ತಂಡಕ್ಕೆ ಇದೇ ಜೂನ್ 24ರಿಂದ 27ರವರೆಗೆ(4ದಿನ) ಲೈಸೆಸ್ಟರ್‌ಶೈರ್ ತಂಡದ ವಿರುದ್ಧ ಅಭ್ಯಾಸ ಪಂದ್ಯವಿರಲಿದೆ. ಜುಲೈ 1ರಿಂದ 5ರವರೆಗೆ ಭಾರತ ತಂಡ ಇಂಗ್ಲೆಂಡ್ ತಂಡದೊಂದಿಗೆ ಟೆಸ್ಟ್ ಪಂದ್ಯವಾಡಲಿದೆ. ಈ ಪಂದ್ಯಕ್ಕೂ ಮೊದಲು(ಜು.1) ಡೆರ್ಬಿಶೈರ್ ವಿರುದ್ಧ ಟಿ20 ಅಭ್ಯಾಸ ಪಂದ್ಯವಿರಲಿದೆ. ಬಳಿಕ ಜುಲೈ 7ರಿಂದ 10ರವೆರೆಗೆ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ನಂತರ ಜುಲೈ 12ರಿಂದ 17ರವರೆಗೆ ಮೂರು ಏಕದಿನ ಪಂದ್ಯಗಳನ್ನಾಡಲಿದೆ.
ಭಾರತ ಟೆಸ್ಟ್ ತಂಡದ ಆಟಗಾರರು: ರೋಹಿತ್ ಶರ್ಮಾ(ನಾಯಕ), ಕೆ.ಎಲ್.ರಾಹುಲ್ (ಉಪನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್, ಹನುಮ ವಿಹಾರಿ, ಚೆತೇಶ್ವರ್ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಸ್.ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ .
ಇದನ್ನೂ ಓದಿ | Mithali raj | ಆಟಗಾರ್ತಿಯಾಗಿ ಇನಿಂಗ್ಸ್ ಅಂತ್ಯಗೊಳಿಸಿದ ಮಿಥಾಲಿ ರಾಜ್, ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ