ಪೋರ್ಟ್ ಆಫ್ ಸ್ಪೇನ್ : ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈ ವಶಮಾಡಿಕೊಂಡು ಸಂಭ್ರಮದಲ್ಲಿದ್ದ ಭಾರತ ತಂಡದ ಸದಸ್ಯರಿಗೆ ಮ್ಯಾಚ್ ರೆಫರಿ ಕಹಿ ಸುದ್ದಿ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ತಮ್ಮ ೫೦ ಓವರ್‌ಗಳ ಬೌಲಿಂಗ್ ಕೋಟಾವನ್ನು ನಿಗದಿತ ಅವಧಿಯಲ್ಲಿ ಮುಗಿಸದ ತಪ್ಪಿಗೆ ತಂಡದ ಸದಸ್ಯರಿಗೆ ನೀಡಲಾಗುವ ಪಂದ್ಯದ ಶುಲ್ಕದಲ್ಲಿ ಶೇಕಡಾ ೨೦ ಕಡಿತ ಮಾಡಲಾಗುವುದು ಎಂದು ಹೇಳಿದ್ದಾರೆ.
ಮೊದಲ ಪಂದ್ಯದಲ್ಲಿ ಭಾರತ ತಂಡ ರೋಚಕ ಮೂರು ರನ್‌ಗಳ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ೩೦೮ ರನ್ ಬಾರಿಸಿತ್ತು. ಬಳಿಕ ಎದುರಾಳಿ ತಂಡವನ್ನು ೩೦೫ ರನ್‌ಗಳಿಂದ ಕಟ್ಟಿ ಹಾಕಿ ಅಮೋಘ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡದ ಪರ ಶಿಖರ್ ಧವನ್, ಶುಬ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅರ್ಧ ಶತಕ ಬಾರಿಸಿದ್ದರು. ನಂತರ ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಎಲ್ಲ ಸಂಘಟಿತ ಹೋರಾಟದ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಜಯ ಲಭಿಸಿತ್ತು.
ಒಂದು ಓವರ್ ನಿಧಾನ
೩೦೯ ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡವೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿತ್ತು. ಕೈಲ್ ಮೇಯರ್ಸ್ (೭೫ ರನ್), ಶಮ್ರಾ ಬ್ರೂಕ್ಸ್ (೪೬ ರನ್), ಬ್ರೆಂಡನ್ ಕಿಂಗ್ (೫೪ ರನ್) ಅವರ ಸಂಘಟಿತ ಬ್ಯಾಟಿಂಗ್ ನೆರವಿನಿಂದ ಗುರಿಯ ಸಮೀಪಕ್ಕೆ ಬಂದಿತ್ತು. ಎದುರಾಳಿ ತಂಡ ಗುರಿಯ ಸಮೀಪಕ್ಕೆ ಬರುತ್ತಿದ್ದಂತೆ ಎಚ್ಚರಿಕೆ ವಹಿಸಿದ ನಾಯಕ ಶಿಖರ್ ಧವನ್ ಸ್ಥಳದಲ್ಲೇ ರಣತಂತ್ರ ರೂಪಿಸಲು ಆರಂಭಿಸಿದ್ದರು. ಹೀಗಾಗಿ ನಿಗದಿತ ಅವಧಿಯೊಳಗೆ ತಮ್ಮ ೫೦ ಓವರ್‌ಗಳ ಕೋಟಾವನ್ನು ಮುಗಿಸಲು ಸಾಧ್ಯವಾಗಿರಲಿಲ್ಲ. ತಂಡಕ್ಕೆ ನೀಡಿರುವ ಅವಧಿಯಲ್ಲಿ ೪೯ ಓವರ್‌ಗಳನ್ನು ಮಾತ್ರ ಮುಗಿಸಿದ್ದರು. ಹೀಗಾಗಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಅವರು ಪಂದ್ಯದ ಶುಲ್ಕದಲ್ಲಿ ಶೇಕಡ ೨೦ ಕಡಿತ ಮಾಡುವ ಶಿಕ್ಷೆ ನೀಡಿದ್ದಾರೆ.
ಶೇಕಡ ೪೦ ದಂಡ ಹಾಕಿಸಿಕೊಂಡಿದ್ದರು
ತಿಂಗಳ ಆರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಏಕೈಕ ಪಂದ್ಯದಲ್ಲೂ ಭಾರತ ಇದೇ ಮಾದರಿಯ ತಪ್ಪು ಮಾಡಿತ್ತು. ಆ ಪಂದ್ಯದಲ್ಲಿ ಓವರ್‌ಗಳನ್ನು ತಡವಾಗಿ ಮುಗಿಸಿದ್ದಕ್ಕೆ ಪಂದ್ಯದ ಶುಲ್ಕದಲ್ಲಿ ಶೇಕಡ ೪೦ರಷ್ಟು ಕಡಿತ ಮಾಡಿತ್ತು.
ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಗ್ರೆಗ್ ಚಾಪೆಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ನಿಧಾನಗತಿಯ ಓವರ್‌ರೇಟ್‌ಗಳ ದಂಡ ಪದ್ಧತಿ ಸರಿ ಇಲ್ಲ ಎಂದಿದ್ದಾರೆ. ಪಂದ್ಯದ ಶುಲ್ಕದಲ್ಲಿ ಕಡಿತ ಮಾಡುವುದನ್ನು ಆಟಗಾರರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು ತಪ್ಪು ಮಾಡಿದ ನಾಯಕನನ್ನು ಮುಂದಿನ ಪಂದ್ಯಕ್ಕೆ ನಿಷೇಧ ಹೇರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ | Team India ವಿಶ್ವ ದಾಖಲೆ, ಪಾಕಿಸ್ತಾನದ ರೆಕಾರ್ಡ್ ಮುರಿದ ಭಾರತ ತಂಡ