Site icon Vistara News

Team India: ರೋಹಿತ್​ ಬಳಿಕ ಭಾರತ ತಂಡಕ್ಕೆ ಈತನೇ ನಾಯಕ; ರವಿ ಶಾಸ್ತ್ರಿ ಸೂಚಿಸಿದ ಆಟಗಾರ ಯಾರು?

team india

ಮುಂಬಯಿ: ವಿರಾಟ್​ ಕೊಹ್ಲಿ(virat kohli) ನಾಯಕತ್ವದಲ್ಲಿ ಭಾರತ ತಂಡ(Team India) ಐಸಿಸಿ(ICC) ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಅವರನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್​ ಶರ್ಮ(rohit sharma) ಅವರಿಗೆ ನಾಯಕನ ಪಟ್ಟ ನೀಡಲಾಗಿತ್ತು. ಐಪಿಎಲ್​ನಲ್ಲಿ ಮುಂಬೈ ತಂಡವನ್ನು 5 ಬಾರಿ ಚಾಂಪಿಯನ್​ ಮಾಡಿದ್ದ ಅವರ ಮೇಲೆ ಭಾರಿ ನಿರೀಕ್ಷೆಯೊಂದನ್ನು ಇಡಲಾಗಿತ್ತು. ಆದರೆ ಅವರ ನಾಯಕತ್ವದಲ್ಲಿಯೂ ತಂಡ ಯಾವುದೇ ಏಳಿಗೆ ಕಾಣಲಿಲ್ಲ. ಟಿ20 ಮತ್ತು ಟೆಸ್ಟ್​ ವಿಶ್ವ ಕಪ್​ಗಳಲ್ಲಿ ಸೋಲು ಕಂಡಿತ್ತು.

ಸದ್ಯ ರೋಹಿತ್​ಗೆ ಅಂತಿಮ ಅವಕಾಶವಾಗಿ ಉಳಿದಿರುವುದು ಏಕದಿನ ವಿಶ್ವ ಕಪ್​ ಟೂರ್ನಿ ಮಾತ್ರ. ಇದರಲ್ಲಿ ಯಶಸ್ಸು ಸಾಧಿಸಿದರೂ ಅವರು ನಾಯಕನಾಗಿ ಮುಂದುವರೆಯುವುದು ಅನುಮಾನ. ಏಕೆಂದೆ ಅವರಿಗೆ ಈಗಾಗಲೇ 36 ವರ್ಷ ವಯಸ್ಸು. ಹೀಗಾಗಿ ರೋಹಿತ್​ ಬಳಿಕ ಭಾರತ ತಂಡಕ್ಕೆ ಮುಂದಿನ ಸಾರಥಿ ಯಾರೆಂಬ ಚರ್ಚೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಮಾಜಿ ಆಟಗಾರ ರವಿಶಾಸ್ತ್ರಿ (Ravi Shastri)ಸೂಕ್ತ ಆಟಗಾರನೊಬ್ಬನನ್ನು ಸೂಚಿಸಿದ್ದಾರೆ.

ಟಿ 20 ಸೇರಿ ಕೆಲ ಏಕದಿನ ಪಂದ್ಯಗಳಲ್ಲಿ ಹಂಗಾಮಿಯಾಗಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್​ ಪಾಂಡ್ಯ(hardik pandya) ಅವರನ್ನು ರೋಹಿತ್​ ಬಳಿಕ ಟೀಮ್​ ಇಂಡಿಯಾಕ್ಕೆ ನಾಯಕನನ್ನಾಗಿ ಮಾಡಬೇಕೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

“ಪಾಂಡ್ಯ ಅವರ ನಾಯಕತ್ವವನ್ನು ನಾವು ಈಗಾಗಲೇ ಹಲವು ಪಂದ್ಯಗಳಲ್ಲಿ ನೋಡಿದ್ದೇವೆ. ಮಹೇಂದ್ರ ಸಿಂಗ್​ ಧೋನಿ ಅವರ ಗರಡಿಯಲ್ಲಿ ಪಳಗಿದ ಪಾಂಡ್ಯ ಅವರು ಧೋನಿಯಂತೆಯೇ ಕೆಲ ನಾಯಕತ್ವದ ಗುಣವನ್ನು ಹೊಂದಿದ್ದಾರೆ. ತಂಡದ ಆಯ್ಕೆ ಮತ್ತು ಆಟಗಾರರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬ ಬಗ್ಗೆ ಸರಿಯಾದ ಅರಿವು ಅವರಿಗಿದೆ. ಹೀಗಾಗಿ ರೋಹಿತ್​ ಬಳಿಕ ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಅವರಿಗೆ ಭಾರತ ತಂಡದ ನಾಯಕತ್ವ ನೀಡಬೇಕು” ಎಂದು ಬಿಸಿಸಿಐಗೆ ಸಲಹೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ Sourav Ganguly: ಹಾರ್ದಿಕ್​ ಪಾಂಡ್ಯಗೆ ವಿಶೇಷ ಮನವಿ ಮಾಡಿದ ದಾದಾ

ಆಲ್​ರೌಂಡರ್​ ಆಗಿರುವ ಹಾರ್ದಿಕ್​ ಪಾಂಡ್ಯ ಐಪಿಎಲ್​ನಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದು ಅವರ ಸಾಧನೆಯಾಗಿದೆ. ಈ ಬಾರಿಯೂ ಅವರ ತಂಡ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿ ಫೈನಲ್​ ಪ್ರವೇಶಿಸಿತ್ತು. ಆದರೆ ಅಂತಿಮ ಹಂತದಲ್ಲಿ ಎಡವಿ ಚೆನ್ನೈ ವಿರುದ್ಧ ಸೋಲು ಕಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

Exit mobile version