ಬಾರ್ಬಡೋಸ್: ಸೂಪರ್-8 ಪಂದ್ಯವನ್ನಾಡಲು ವೆಸ್ಟ್ ಇಂಡೀಸ್ ತಲುಪಿರುವ ಟೀಮ್ ಇಂಡಿಯಾದ(Team India) ಆಟಗಾರರು ಪಂದ್ಯಕ್ಕೂ ಮುನ್ನ ಇಲ್ಲಿನ ಪ್ರಸಿದ್ಧ ಬಾರ್ಬಡೋಸ್(Barbados) ಬೀಚ್ನಲ್ಲಿ ವಾಲಿಬಾಲ್(Beach Volleyball) ಆಡಿ ಎಂಜಾಯ್ ಮಾಡಿದ್ದಾರೆ. 2 ತಂಡಗಳಾಗಿ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಗಳು ಶರ್ಟ್ ಲೆಸ್ ಆಗಿ ವಾಲಿಬಾಲ್ ಆಡಿರುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ವಿರಾಟ್ ಕೊಹ್ಲಿ, ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್ ಸೇರಿ ಕೆಲ ಆಟಗಾರರು ಜತೆಯಾಗಿ ಆಡಿದರೆ, ಮತ್ತೊಂದು ತಂಡದಲ್ಲಿ ಚಹಲ್, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಆಡಿದ್ದಾರೆ. ಎಲ್ಲರು ಮೋಜು ಮಸ್ತಿ ಮಾಡಿ ಆಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿರುವ ಭಾರತ ಸೂಪರ್-8ನಲ್ಲಿ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಿಲಿದೆ. ಕೆನಡಾ ವಿರುದ್ಧದ ಅಂತಿಮ ಲೀಗ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಭಾರತಕ್ಕೆ ಮೂರು ಲೀಗ್ ಪಂದ್ಯವನ್ನಾಡುವ ಅವಕಾಶ ಮಾತ್ರ ಲಭಿಸಿತ್ತು. ವಿರಾಟ್ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಇದರಲ್ಲೊಂದು ಗೋಲ್ಡನ್ ಡಕ್ ಕೂಡ ಒಳಗೊಂಡಿದೆ. ಮಹತ್ವದ ಸೂಪರ್-8 ಸುತ್ತಿನ ಪಂದ್ಯದಲ್ಲಾದರೂ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಬೇಕಿದೆ.
ಇದನ್ನೂ ಓದಿ Smriti Mandhana: ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಸ್ಮೃತಿ ಮಂಧಾನ
ಸೂಪರ್ 8 ಹಂತದ ಮೊದಲ ಪಂದ್ಯ ಜೂನ್ 19ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್ 20ರಂದು ಬಾರ್ಬಡೋಸ್ನಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್ ಪಂದ್ಯ ಜೂನ್ 24 ಭಾನುವಾರದಂದು ನಡೆಯಲಿದೆ. ಟೀಮ್ ಇಂಡಿಯಾದ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.
ಭಾರತದ ಸೂಪರ್-8 ಪಂದ್ಯದ ವೇಳಾಪಟ್ಟಿ
ಎದುರಾಳಿ | ದಿನಾಂಕ | ತಾಣ | ಪ್ರಸಾರ |
ಭಾರತ-ಅಫಘಾನಿಸ್ತಾನ | ಜೂನ್ 20 | ಬಾರ್ಬಡೋಸ್ | ರಾತ್ರಿ 8ಕ್ಕೆ |
ಭಾರತ-ಬಾಂಗ್ಲಾದೇಶ | ಜೂನ್ 22 | ಆಂಟಿಗುವಾ | ರಾತ್ರಿ 8ಕ್ಕೆ |
ಭಾರತ-ಆಸ್ಟ್ರೇಲಿಯಾ | ಜೂನ್ 24 | ಸೇಂಟ್ ಲೂಸಿಯಾ | ರಾತ್ರಿ 8ಕ್ಕೆ |
ಕೊಹ್ಲಿ ವೈಫಲ್ಯಕ್ಕೆ ನಿಧಾನಗತಿ ಪಿಚ್ ಕಾರಣ!
ಟಿ20 ವಿಶ್ವಕಪ್ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್ ಪಿಚ್ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವುದು ಎನ್ನುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.