ದುಬೈ : ಏಷ್ಯಾ ಕಪ್‌ನ ಸೂಪರ್-೪ ಹಂತದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಎದುರಾಳಿ ಶ್ರೀಲಂಕಾ ತಂಡಕ್ಕೆ ೧೭೪ ರನ್‌ಗಳ ಗೆಲುವಿನ ಗುರಿಯನ್ನೊಡ್ಡಿದೆ. ಭಾರತ ತಂಡದ ಪರ ನಾಯಕ ರೋಹಿತ್ ಶರ್ಮ (೭೨) ಸ್ಫೋಟಕ ಅರ್ಧ ಶತಕ ಬಾರಿಸಿದ್ದರೆ, ಸೂರ್ಯಕುಮಾರ್ ಯಾದವ್ ೩೪ ರನ್ ಬಾರಿಸುವ ಮೂಲಕ ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಭಾರತ ತಂಡಕ್ಕೆ ನೆರವಾದರು. ಟೀಮ್ ಇಂಡಿಯಾಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿದ್ದು, ಬೌಲರ್‌ಗಳು ಶ್ರೀಲಂಕಾ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಬೇಕಾಗಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ಟಾಸ್ ಸೋತರು. ಎದುರಾಳಿ ತಂಡದ ನಾಯಕ ದಸುನ್ ಶನಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಕೆ. ಎಲ್. ರಾಹುಲ್ (೬) ಹಾಗೂ ವಿರಾಟ್ ಕೊಹ್ಲಿ (೦) ವಿಕೆಟ್ ಪಡೆಯುವ ಮೂಲಕ ಆರಂಭಿಕ ಮುನ್ನಡೆ ಪಡೆದುಕೊಂಡರು. ಈ ವೇಳೆ ರನ್ ಗತಿ ಕುಸಿಯದಂತೆ ತಡೆದ ರೋಹಿತ್ ಶರ್ಮ ಹಾಗೂ ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟ್‌ಗೆ ೧೦೯ ರನ್‌ಗಳ ಜತೆಯಾಟ ನೀಡಿದರು. ರೋಹಿತ್ ಶರ್ಮ ೩೨ ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರಲ್ಲದೆ, ೪೧ ಎಸೆತಗಳಲ್ಲಿ ೭೨ ರನ್ ಬಾರಿಸಿದರು. ಸೂರ್ಯಕುಮಾರ್ ೨೯ ಎಸೆತಗಳಲ್ಲಿ ೩೪ ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ತಲಾ ೧೭ ರನ್‌ಗಳ ಕೊಡುಗೆ ಕೊಟ್ಟರು. ಅಂತಿಮವಾಗಿ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೧೭೩ ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಸ್ಕೋರ್ ವಿವರ
ಭಾರತ : ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೭೩ (ರೋಹಿತ್ ಶರ್ಮ ೭೨, ಸೂರ್ಯಕುಮಾರ್ ಯಾದವ್ ೩೪; ದಿಲ್ಶನ್ ಮಧುಶನಕ ೨೪ಕ್ಕೆ ೩, ಚಾಮಿಕಾ ಕರುಣಾರತ್ನೆ ೨೭ಕ್ಕೆ೨).