ಮುಂಬಯಿ: ವಿಶ್ವ ವಿಜೇತ ಟೀಮ್ ಇಂಡಿಯಾ ಆಟಗಾರರನ್ನು ನಿನ್ನೆ (ಗುರುವಾರ) ಸಂಜೆ ಮುಂಬೈನಲ್ಲಿ ಅಭೂತಪೂರ್ವವಾಗಿ ಅಭಿನಂದಿಸಲಾಯಿತು. ಲಕ್ಷಾಂತರ ಜನರು ಮರೀನ್ ಡ್ರೈವ್ ನಿಂದ ವಾಂಖಡೆ ಕ್ರೀಡಾಂಗಣದ ವರೆಗೆ ಅದ್ದೂರಿ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ನಡೆಸಿದ್ದರು. ಟ್ರೋಫಿ ಪರೇಡ್ ನಡೆಸಿದ ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ವಿಜೇತ ಆಟಗಾರರು ಅಭಿಮಾನಿಗಳ ಮುಂದೆ ‘ವಂದೇ ಮಾತರಂ'(Vande Mataram) ಹಾಡನ್ನು ಹಾಡಿದ್ದಾರೆ. ಈ ವಿಡಿಯೊವನ್ನು ಭಾರತದ ಮ್ಯೂಸಿಕ್ ಲೆಜೆಂಡ್ ಎ.ಆರ್. ರೆಹಮಾನ್ ತಮ್ಮ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆಯಿಂದಲೇ ಜಮಾಯಿಸಿ ಕಾತರದಿಂದ ಕಾಯುತ್ತಿದ್ದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಪರ ಜಯಘೋಷ ಕೂಗಿದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಜನ ಸಾಗರ ಮಧ್ಯೆ ಅರಬ್ಬಿ ಸಮುದ್ರ ಕೂಡ ಕೆಲ ಕಾಲ ಸ್ಥಬ್ಧವಾಗಿತ್ತು.
2007 ರ ಟಿ 20 ವಿಶ್ವಕಪ್‌ನ ವಿಜಯೋತ್ಸವದ ಮೆರವಣಿಗೆ, 2011 ರಲ್ಲಿ ಭಾರತದ ಏಕದಿನ ವಿಶ್ವಕಪ್ ವಿಜಯೋತ್ಸವ ನಡೆಸಿದ 13 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಯನ್ನು ಮುಂಬೈ ನಗರ ಹೊಸ ಉತ್ಸವವಾಗಿ ಆಚರಿಸಿತು.
ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಳಿಕ ಮುಂಬೈಗೆ ಆಗಮಿಸಿದ ಭಾರತ ತಂಡದ ಆಟಗಾರರು ಮರೀನಾ ಡ್ರೈವ್ ಬಳಿ ವಿಶೇಷ ವಿನ್ಯಾಸದ ತೆರೆದ ವಾಹನದಲ್ಲಿ ವಿಶ್ವಕಪ್ ಟ್ರೋಫಿ ಹಿಡಿದು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬೂಮ್ರಾ, ಪಾಂಡ್ಯ, ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲ ಆಟಗಾರರು ವಿಜಯಯಾತ್ರೆಯ ಮೆರವಣಿಗೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಸಾವಿರಾರು ಅಭಿಮಾನಿಗಳು ಘೋಷಣೆ ಕೂಗಿ ಅಭಿನಂದನೆಗಳ ಸಲ್ಲಿಸಿದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಚಾಂಪಿಯನ್ ಭಾರತ ತಂಡಕ್ಕೆ ಘೋಷಿಸಿದ್ದ 125 ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ಜಯ್ ಶಾ ಹಸ್ತಾಂತರಿಸಿದರು.
ಇದನ್ನೂ ಓದಿ Team India : ಮುಂಬೈನಲ್ಲಿ ನಡೆದ ಭಾರತ ತಂಡದ ವಿಜಯೋತ್ಸವ ನೋಡಿದರೆ ರೋಮಾಂಚನ ಖಾತರಿ
ಆಟಗಾರರು ಮುಂಬೈಗೆ ತಲುಪಿದೊಡನೆ ‘ಮುಂಬೈನ ನರೀಮನ್ ಪಾಯಿಂಟ್‌ನಿಂದ ರೋಡ್ ಶೋ ಆರಂಭವಾಯಿತು. ಅದಾದ ಮೇಲೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರನ್ನು ಮತ್ತು ಮತ್ತು ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಯಿತು.
ಮುಂಬೈಗೆ ತೆರಳುವ ಮುನ್ನ ಟೀಮ್ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ(Team India Arrival) ಭೇಟಿ ನೀಡಿ ವಿಶ್ವಕಪ್ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜತೆಗೆ ಗ್ರೂಫ್ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟವನ್ನು ಕೂಡ ಏರ್ಪಡಿಸಲಾಗಿತ್ತು.