ಬ್ರಿಸ್ಬೇನ್ : ಟಿ೨೦ ವಿಶ್ವ ಕಪ್‌ನ (T20 World Cup) ಪೂರ್ವಭಾವಿಯಾಗಿ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ೬ ರನ್‌ಗಳಿಂದ ಜಯ ಸಾಧಿಸಿತು. ಬ್ಯಾಟಿಂಗ್‌ನಲ್ಲಿ ಭಾರತ ಪರ ಕೆ. ಎಲ್. ರಾಹುಲ್ (೫೭) ಮತ್ತು ಸೂರ್ಯಕುಮಾರ್ ಯಾದವ್ (೫೦) ಅರ್ಧ ಶತಕಗಳನ್ನು ಬಾರಿಸಿ ಮಿಂಚಿದರೆ, ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ೪ ರನ್‌ಗಳಿಗೆ ೩ ವಿಕೆಟ್ ಹಾಗೂ ಭುವನೇಶ್ವರ್ ಕುಮಾರ್ (೨೦ಕ್ಕೆ೨) ತಂಡದ ಜಯಕ್ಕೆ ತಮ್ಮ ಕೊಡುಗೆಗಳನ್ನು ಕೊಟ್ಟರು.
ಬ್ರಿಸ್ಬೇನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಸೋಮವಾರ ಬೆಳಗ್ಗೆ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೮೬ ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಬಳಗ ತಮ್ಮ ಪಾಲಿನ ಓವರ್‌ಗಳು ಮುಕ್ತಾಯಗೊಂಡಾಗ ೧೮೦ ರನ್‌ಗಳಿಗೆ ಆಲ್‌ಔಟ್ ಆಗಿ ಸೋಲೊಪ್ಪಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಕೆ. ಎಲ್ ರಾಹುಲ್ ಅವರ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಆದರೆ, ನಾಯಕ ರೋಹಿತ್ ಶರ್ಮ ೧೫ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ವಿರಾಟ್ ಕೊಹ್ಲಿ ೧೯ ರನ್‌ಗಳಿಗೆ ಪೆವಿಲಿಯನ್‌ಗೆ ವಾಪಸಾದರು. ಆದರೆ, ಮಧ್ಯಮ ಕ್ರಮಾಂಕದ ಅಧಾರ ಸ್ತಂಭವಾಗಿರುವ ಸೂರ್ಯಕುಮಾರ್ ಯಾದವ್ ೩೩ ಎಸೆತಗಳಲ್ಲಿ ೫೦ ರನ್ ಬಾರಿಸಿ ಮಿಂಚಿದರು. ದಿನೇಶ್ ಕಾರ್ತಿಕ್ ೨೦ ರನ್ ಬಾರಿಸಿದರೆ ಹಾರ್ದಿಕ್ ಪಾಂಡ್ಯ (೨) ವೈಫಲ್ಯ ಕಂಡರು.
ಗುರಿ ಬೆನ್ನಟ್ಟಿದ ಆತಿಥೇಯ ಆಸ್ಟ್ರೇಲಿಯಾ ತಂಡ ಭರ್ಜರಿ ಆರಂಭ ಪಡೆಯಿತು. ಮಿಚೆಲ್ ಮಾರ್ಷ್ (೩೫) ಹಾಗೂ ನಾಯಕ ಆರೋನ್ ಫಿಂಚ್ (೭೯) ಅವರ ಉತ್ತಮ ಬ್ಯಾಟಿಂಗ್‌ನಿಂದಾಗಿ ಮೊದಲ ವಿಕೆಟ್‌ಗೆ ೬೪ ರನ್ ಬಾರಿಸಿತು. ಆ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ೨೩ ರನ್ ಬಾರಿಸಿದ್ದು ಬಿಟ್ಟರೆ ಉಳಿದವರು ಬೇಗನೆ ವಿಕೆಟ್ ಒಪ್ಪಿಸಿದರು. ಹೀಗಾಗಿ ನಾಯಕ ಫಿಂಚ್ ಅವರ ಏಕಾಂಗಿ ಅರ್ಧ ಶತಕದ ಹೋರಾಟ ವ್ಯರ್ಥವಾಯಿತು.
ಬುಧವಾರ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಇದೇ ಗ್ರೌಂಡ್‌ನಲ್ಲಿ ಅಭ್ಯಾಸ ಪಂದ್ಯ ನಡೆಯಲಿದೆ.
ಸ್ಕೋರ್ ವಿವರ
ಭಾರತ : ೨೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೮೬ (ಕೆ. ಎಲ್ ರಾಹುಲ್ ೫೭, ಸೂರ್ಯಕುಮಾರ್ ಯಾದವ್ ೫೦, ದಿನೇಶ್ ಕಾರ್ತಿಕ್ ೨೦; ಕೇನ್ ರಿಚರ್ಡ್ಸನ್ ೩೦ಕ್ಕೆ೪).
ಆಸ್ಟ್ರೇಲಿಯಾ: ೨೦ ಓವರ್‌ಗಳಲ್ಲಿ ೧೮೦ ( ಆರೋನ್ ಫಿಂಚ್ ೭೬, ಮಿಚೆಲ್ ಮಾರ್ಷ್ ೩೫; ಮೊಹಮ್ಮದ್ ಶಮಿ ೪ಕ್ಕೆ೩, ಭುನವೇಶ್ವರ್ ಕುಮಾರ್ ೨೦ಕ್ಕೆ೨).
ಇದನ್ನೂ ಓದಿ | T20 World Cup | ಬ್ಯಾಟಿಂಗ್ ವೈಫಲ್ಯ; ಅಭ್ಯಾಸ ಪಂದ್ಯದಲ್ಲಿ ಭಾರತ ತಂಡಕ್ಕೆ ಹೀನಾಯ ಸೋಲು