ಮುಂಬಯಿ: ಟಿ20 ವಿಶ್ವಕಪ್ ತಂಡದ ಸದ್ಯಸರಾಗಿದ್ದ ಮುಂಬೈಯ ರೋಹಿತ್ ಶರ್ಮ(Rohit Sharma), ಸೂರ್ಯಕುಮಾರ್ ಯಾದವ್(Suryakumar Yadav), ಶಿವಂ ದುಬೆ(Shivam Dube) ಮತ್ತು ಯಶಸ್ವಿ ಜೈಸ್ವಾಲ್(Yashasvi Jaiswal) ಅವರಿಗೆ ಶುಕ್ರವಾರ ಮಹಾರಾಷ್ಟ ಮುಖ್ಯಮಂತ್ರಿ ಏಕನಾಥ್ ಶಿಂಧೆ(Maharashtra CM Eknath Shinde) ಅವರು ತಮ್ಮ ಕಚೇರಿಯಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಶುಕ್ರವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಶಿಂಧೆ ಅವರು ಮುಂಬೈ ಆಟಗಾರಿಗೆ ಗಣೇಶನ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಿದರು. ಬಳಿಕ ಕೆಲ ಕಾಲ ಆಟಗಾರರೊಂದಿಗೆ ಮಾತು ಕತೆ ನಡೆಸಿ ಟಿ20 ವಿಶ್ವಕಪ್ನ ಅನುಭವಗಳನ್ನು ಆಲಿಸಿದರು.
ಗುರುವಾರ ಟೀಮ್ ಇಂಡಿಯಾ(Team India) ನವದೆಹಲಿಗೆ ಬಂದಿಳಿಯುತ್ತಿದ್ದಂತೆ ರೋಹಿತ್ ಶರ್ಮ ವಿಶ್ವಕಪ್ ಮೇಲೆತ್ತಿ ಪ್ರದರ್ಶಿಸಿದ್ದರು. ಈ ವೇಳೆ ನೆರದಿದ್ದ ಜನಸ್ತೋಮ ರೋಹಿತ್ ಪಡೆಗೆ ಜೈಕಾರ, ಡೊಳ್ಳು, ತಮಟೆ ಬಾರಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯ ಸ್ವೀಕರಿಸಿ ಮಧ್ಯಾಹ್ನ 3.42ಕ್ಕೆ ತಂಡ ಮುಂಬೈಗೆ ಪ್ರಯಾಣ ಬೆಳೆಸಿತ್ತು. ಸಂಜೆ ಐದು ಗಂಟೆಯ ಮುಂಬೈ ತಲುಪಿದ ತಂಡಕ್ಕೆ ಭರ್ಜರಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಗರೋಪಾದಿಯಲ್ಲಿ ಸೇರಿದ್ದ ಅಭಿಮಾನಿಗಳ ಗುಂಪಿನಲ್ಲಿ ಆಟಗಾರರು ತೆರೆದ ಬಸ್ನಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ರೋಡ್ ಶೋ ನಡೆಸಿದ್ದರು. ದಕ್ಷಿಣ ಮುಂಬೈನ ಮರೀನ್ ಡ್ರೈವ್ ಪ್ರದೇಶ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ಹೋಗಿತ್ತು.
ಎಲ್ಲ ಕಾರ್ಯಕ್ರಮ ಮುಗಿದ ಬಳಿಕ ರೋಹಿತ್ ಅವರು ತಮ್ಮ ಬಾಲ್ಯದ ಗೆಳೆಯರನ್ನು ಭೇಟಿ ಮಾಡಿದರು. ಈ ವೇಳೆ ಗೆಳೆಯರು ಸೆಲ್ಯೂಟ್ ಹೊಡೆದು, ರೋಹಿತ್ ಅವರನ್ನು ಭುಜದ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಈ ವೇಳೆ ಟೀಮ್ ಇಂಡಿಯಾ ಆಟಗಾರ, ರೋಹಿತ್ ಅವರ ಆಪ್ತರಾಗಿರುವ ತಿಲಕ್ ವರ್ಮಾ ಕೂಡ ಜತೆಗಿದ್ದರು. ಇವರು ಕೂಡ ಸೆಲ್ಯೂಟ್ ಹೊಡೆದು ರೋಹಿತ್ಗೆ ಗೌರವಿಸಿದ್ದಾರೆ.
ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ ರೋಹಿತ್
ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್ ಗೆದ್ದ ರೋಹಿತ್ ಗೆಲುವಿನ ಬಳಿಕ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್, 4231 ರನ್ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಐತಿಹಾಸಿಕ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮ(Rohit Sharma) ಅವರು ಬಾರ್ಬಡೋಸ್ ಕ್ರೀಡಾಂಗಣದ ಪಿಚ್ನಲ್ಲಿನ ಮಣ್ಣನ್ನು ತಿಂದು ಧನ್ಯತಾ ಭಾವ ವ್ಯಕ್ತಪಡಿಸಿದ್ದರು. ‘ಆ ವಿಷಯಗಳನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಏಕೆಂದರೆ, ಯಾವುದನ್ನೂ ನಾನು ಸ್ಕ್ರಿಪ್ಟ್ ಮಾಡಿಲ್ಲ. ನಾನು ಮೈದಾನಕ್ಕೆ ಇಳಿದಾಗ ಆ ಕ್ಷಣವನ್ನು ಅನುಭವಿಸುತ್ತಿದ್ದೆ. ಗೆಲುವು ತಂದು ಕೊಟ್ಟ ಈ ಪಿಚ್ನ ಋಣವನ್ನು ಮರೆಯಲು ಸಾಧ್ಯವಿಲ್ಲ. ನನ್ನ ಜೀವನದುದ್ದಕ್ಕೂ ಈ ಪಿಚ್ನ ಮಣ್ಣಿನ ನೆನಪನ್ನು ಇಟ್ಟು ಕೊಳ್ಳುವ ಸಲುವಾಗಿ ನಾನು ಪಿಚ್ನ ಮಣ್ಣು ತಿಂದೆ” ಎಂದು ಹೇಳಿದ್ದರು.