ಮುಂಬಯಿ: 2007ರ ಟಿ20 ವಿಶ್ವ ಕಪ್ (T20 World Cup) ಉದ್ಘಾಟನಾ ಆವೃತ್ತಿಯಲ್ಲೇ ಚಾಂಪಿಯನ್ ಆಗಿ ಭಾರತ ಹೊರಹೊಮ್ಮಿತು. ಇದರ ಬಳಿಕ ಭಾರತ ಮತ್ತೆ ಚಾಂಪಿಯನ್ ಆಗಲೇ ಇಲ್ಲ. ಇದೀಗ 15 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆಗುವ ಇರಾದೆಯೊಂದಿಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಕಣಕ್ಕಿಳಿಯಲಿದೆ.
ಟಿ20 ವಿಶ್ವ ಕಪ್ನಲ್ಲಿ ಭಾರತ ಸಾಧನೆ
2007 | ಚಾಂಪಿಯನ್ |
2009 | 2ನೇ ಸುತ್ತು |
2010 | 2ನೇ ಸುತ್ತು |
2012 | 2ನೇ ಸುತ್ತು |
2014 | ರನ್ನರಪ್ |
2016 | ಸೆಮಿಫೈನಲ್ |
2021 | 2ನೇ ಸುತ್ತು |
ರೋಹಿತ್, ಅಶ್ವಿನ್ ಮತ್ತು ಕೊಹ್ಲಿಗೆ ನಿರ್ಣಾಯಕ ಕೂಟ
ಈ ಕೂಟದಲ್ಲಿ ಭಾರತ ನೀಡುವ ಪ್ರದರ್ಶನದ ಮೇಲೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಮತ್ತು ಆರ್.ಅಶ್ವಿನ್ ಟಿ20 ಭವಿಷ್ಯ ಅಡಗಿದೆ. ಈ ಕೂಟ ಮುಗಿದ ಮೇಲೆ ಯಾರ್ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗಳೂ ಇವೆ. ಹೀಗಾಗಿ ಭಾರತದ ಮಟ್ಟಿಗೆ ಇದೊಂದು ಮಹತ್ವದ ಕೂಟ ಎನ್ನಲಡ್ಡಿಯಿಲ್ಲ.
ಭಾರತ ಬಲಿಷ್ಠ ಆದರೆ ಎಚ್ಚರ ಅಗತ್ಯ
ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಸೂರ್ಯಕುಮಾರ್, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಇರುವ ಭಾರತ ತಂಡವನ್ನು ಬಲಿಷ್ಠ ಎನ್ನಲೇಬೇಕು. ನವೋತ್ಸಾಹದಿಂದ ಆರ್ಭಟಿಸುತ್ತಿರುವ ಸೂರ್ಯಕುಮಾರ್ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಾರೆ. ಆದರೆ ಭಾರತ ಪೂರ್ಣ ಎಚ್ಚರವಾಗಿಯೇ ಪ್ರತೀ ಪಂದ್ಯದಲ್ಲಿ ಕಣಕ್ಕಿಳಿಯಬೇಕು. ಎದುರಾಳಿಯನ್ನು ಒಮ್ಮೆಯೂ ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರು ಯಾರನ್ನು ಕೆಡವಿ ಬೀಳಿಸುತ್ತಾರೆ ಎಂಬುದು ಟಿ20 ಮಾದರಿಯಲ್ಲಿ ಅಂದಾಜಿಸುವುದಕ್ಕೆ ಕಷ್ಟ ಸಾಧ್ಯ. ಇದಕ್ಕೆ ಉತ್ತಮ ನಿದರ್ಶನ ಶುಕ್ರವಾರದ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವಿನ ಪಂದ್ಯ. ಎರಡು ಬಾರಿಯ ಟಿ20 ಚಾಂಪಿಯನ್ ವಿಂಡೀಸ್ ತಂಡ ಅನನುಭವಿ ಐರ್ಲೆಂಡ್ ವಿರುದ್ಧ ಸೋತು ಟಿ20 ವಿಶ್ವ ಕಪ್ ಟೂರ್ನಿಯಿಂದಲೇ ಹೊರಬಿದ್ದಿದೆ. ಆದ್ದರಿಂದ ಭಾರತ ಎಚ್ಚರ ತಪ್ಪಬಾರದು. ಕೆಲವೇ ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗುವುದು ಟಿ20 ಪಂದ್ಯಗಳ ಶಕ್ತಿ.
ದ್ರಾವಿಡ್ ಮುಂದಿದೆ ಸವಾಲು
ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ಕೋಚ್ ಆದ ಬಳಿಕ ಕನ್ನಡಿಗ ರಾಹುಲ್ ದ್ರಾವಿಡ್ಗೆ ಇದು ಮೊದಲ ಐಸಿಸಿ ಟೂರ್ನಿ. ಈಗಾಗಲೇ ದ್ರಾವಿಡ್ ಮಾರ್ಗದರ್ಶದಲ್ಲಿ ಏಷ್ಯಾಕಪ್ನಲ್ಲಿ ಭಾರತ ಸೋಲು ಕಂಡಿತ್ತು. ಇದೀಗ ಈ ಟೂರ್ನಿಯಲ್ಲಿ ಭಾರತ ಎಡವದಂತೆ ದ್ರಾವಿಡ್ ನಿಗಾ ವಹಿಸಬೇಕು. ಅದರಂತೆ ಮುಂದಿನ ವರ್ಷ ಏಕ ದಿನ ವಿಶ್ವ ಕಪ್ ಟೂರ್ನಿಯನ್ನು ಗಮನದಲ್ಲಿರಿಸಿ, ಬಲಿಷ್ಠ ತಂಡವನ್ನು ಈ ಕೂಟದಿಂದ ರಚಿಸಬೇಕಾದ ಸವಾಲು ಅವರ ಮುಂದಿದೆ. ಆದ್ದರಿಂದ ದ್ರಾವಿಡ್ಗೂ ಈ ಕೂಟ ಮಹತ್ವದಾಗಿದೆ.
ಇದನ್ನೂ ಓದಿ | T20 World Cup | ಕವಿತೆ ಮೂಲಕ ಟೀಮ್ ಇಂಡಿಯಾಗೆ ಶುಭ ಹಾರೈಸಿದ ಬಿಗ್ ಬಿ