ಬೆಂಗಳೂರು: ಅಮೆರಿಕದ ದೈತ್ಯ ಬಾಕ್ಸರ್ mike tyson ಅವರಿಗೆ ಜೂನ್ ೩೦ರಂದು ಜನುಮ ದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಬಾಲಿವುಡ್‌ನಲ್ಲಿ ಬಾಕ್ಸಿಂಗ್ ಕುರಿತು ತಯಾರಾಗುತ್ತಿರುವ ‘ಲೈಗರ್’ ಸಿನಿಮಾ ತಂಡ ವಿಶೇಷ ವಿಡಿಯೊ ಮಾಡಿ ಶುಭಾಶಯ ತಿಳಿಸಿದೆ.
ಟೈಸನ್ ಅವರು ವಿಶ್ವ ಕಂಡ ಶ್ರೇಷ್ಠ ಹೆವಿ ವೇಟ್ ಬಾಕ್ಸರ್. ಒಟ್ಟಾರೆ ೫೮ ಬೌಟ್‌ಗಳಲ್ಲಿ ಪಾಲ್ಗೊಂಡಿರುವ ಅವರು ೫೦ರಲ್ಲಿ ಗೆಲುವು ದಾಖಲಿಸುವ ಮೂಲಕ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಇದುವರೆಗೆ ಯಾರೂ ಮಾಡದ ದಾಖಲೆ ಸೃಷ್ಟಿಸಿದ್ದಾರೆ. ಹೀಗಾಗಿ ಅವರನ್ನು ‘ಐರನ್ ಮೈಕ್’ ಹಾಗೂ ‘ಬ್ಯಾಡ್ ಮ್ಯಾನ್ ಆಫ್ ದಿ ಪ್ಲಾನೆಟ್’ ಎಂಬುದಾಗಿಯೂ ಕರೆಯುತ್ತಾರೆ. ಜೂನ್ ೩೦ಕ್ಕೆ ೫೬ ವರ್ಷ ತುಂಬಿರುವ ಅವರಿಗೆ ವಿಶ್ವದ ಮೂಲೆ ಮೂಲೆಯಿಂದ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ. ಅಂತೆಯೆ ಲೈಗರ್ ತಂಡವೂ ವಿಶೇಷ ವಿಡಿಯೊ ಮೂಲಕ ಶುಭಾಶಯ ಕೋರಿದೆ.
ಲೈಗರ್ ಸಿನಿಮಾವನ್ನು ಕರಣ್ ಜೋಹರ್, ಪೂರಿ ಜಗನ್ನಾಥ್, ಅಪೂರ್ವ ಮೆಹ್ತಾ ಹಾಗೂ ಚಾರ್ಮಿ ಕೌರ್ ನಿರ್ಮಿಸುತ್ತಿದ್ದಾರೆ. ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ದೃಶ್ಯವೊಂದರಲ್ಲಿ ಮೈಕ್ ಕೂಡಾ ನಟಿಸಿದ್ದಾರೆ. ಆ ಭಾಗದ ಚಿತ್ರೀಕರಣವನ್ನು ಅಮೆರಿಕದಲ್ಲಿ ನಡೆಸಲಾಗಿದೆ. ಹೀಗಾಗಿ ಈ ಚಿತ್ರದ ಬಗ್ಗೆ ಬಾಕ್ಸಿಂಗ್ ಅಭಿಮಾನಿಗಳು ಸಾಕಷ್ಟು ಕೌತುಕ ಉಳಿಸಿಕೊಂಡಿದ್ದಾರೆ.
೨೦೨೨ರ ಆಗಸ್ಟ್ ೨೫ರಂದು ಸಿನೆಮಾ ಬಿಡುಗಡೆಯಾಗಲಿದ್ದು, ಟ್ರೇಲರ್ ಜುಲೈ ೧೦ರಂದು ಬಿಡುಗಡೆಯಾಗುತ್ತದೆ ಎಂದು ಸಿನಿಮಾ ತಂಡ ಹೇಳಿದೆ. ಹಿಂದಿಯಲ್ಲದೆ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಸಿನೆಮಾ ರಿಲೀಸ್ ಆಗಲಿದೆ.
ಇದನ್ನೂ ಓದಿ: ಪ್ರೀ-ಫೈನಲ್ ಪಂದ್ಯವೇ ಮೇರಿ ಕೋಮ್ ʼಫೈನಲ್ʼ ಪಂದ್ಯವಾಗಿಬಿಟ್ಟಿತು!