ದುಬೈ : ವಿರಾಟ್ ಕೊಹ್ಲಿಯ (೧೨೨) ದಾಖಲೆಯ ಶತಕ ಹಾಗೂ ಭುವನೇಶ್ವರ್ ಕುಮಾರ್ (೪ ಓವರ್, ೧ ಮೇಡನ್, ೪ ರನ್, ೫ ವಿಕೆಟ್) ಮಾರಕ ದಾಳಿಯ ನೆರವಿನಿಂದ ಮಿಂಚಿದ ಭಾರತ ತಂಡ, ಅಫಘಾನಿಸ್ತಾನ ವಿರುದ್ಧದ ಏಷ್ಯಾ ಕಪ್ (Asia Cup)ಸೂಪರ್-೪ ಹಂತದ ಪಂದ್ಯದಲ್ಲಿ ೧೦೧ ರನ್‌ಗಳ ಬೃಹತ್ ಅಂತರದ ಜಯ ದಾಖಲಿಸಿತು. ಆದರೆ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡದ ವಿರುದ್ಧ ಸೋತ ವೇಳೆಯೇ ಫೈನಲ್‌ಗೇರುವ ಅವಕಾಶ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಈ ಜಯದ ಖುಷಿಯೊಂದಿಗೆ ಏಷ್ಯಾ ಕಪ್ ಅಭಿಯಾನ ಮುಗಿಸಿತು.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಭಾರತ ತಂಡ ಟಾಸ್ ಸೋತಿತು. ಹೀಗಾಗಿ ಎದುರಾಳಿ ತಂಡ ಮೊದಲು ಬ್ಯಾಟ್ ಮಾಡುವಂತೆ ಆಹ್ವಾನ ನೀಡಿತು. ಅಂತೆಯೇ ವಿರಾಟ್ ಕೊಹ್ಲಿಯ ಸ್ಫೋಟಕ ಶತಕ ಹಾಗೂ ಹಂಗಾಮಿ ನಾಯಕ ಕೆ. ಎಲ್ ರಾಹುಲ್ (೬೨) ಅವರ ಉಪಯುಕ್ತ ಅರ್ಧ ಶತಕದ ನೆರವು ಪಡೆದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೨೧೨ ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಅಫಘಾನಿಸ್ತಾನ ತಂಡ ಭಾರತೀಯ ಬೌಲರ್‌ಗಳ ದಾಳಿಗೆ ಬೆಚ್ಚಿ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೧೧ ರನ್ ಮಾತ್ರ ಬಾರಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು.
ಭರ್ಜರಿ ಆರಂಭ
ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ರಾಹುಲ್ ಹಾಗೂ ವಿರಾಟ್ ಕೊಹ್ಲಿಯ ಅಮೋಘ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಈ ಜೋಡಿ ೫.೫ ಓವರ್‌ಗಳಲ್ಲಿ ೫೦ ರನ್‌ಗಳನ್ನು ಪೇರಿಸಿತು. ಅದೇ ಲಯದಲ್ಲಿ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ ಅವರು ೧೧.೨ ಓವರ್‌ಗಳಲ್ಲಿ ೧೦೦ ರನ್ ಬಾರಿಸಿದರು. ಏತನ್ಮಧ್ಯೆ, ೩೨ ಎಸೆತಗಳಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಪೂರೈಸಿದರು. ಅಂತೆಯೇ ೫೩ ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಅವರ ೭೧ನೇ ಅಂತಾರಾಷ್ಟ್ರೀಯ ಶತಕವಾಗಿದ್ದು, ೧೦೧೯ ದಿನಗಳ ಬಳಿಕ ವೈಯಕ್ತಿಕ ಮೂರಂಕಿ ಮೊತ್ತ ದಾಟಿದರು. ೨೦೧೯ರ ನವೆಂಬರ್ ೨೩ರಂದು ಅವರು ಕೊನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು.
ಆರಂಭಿಕರಾಗಿ ಕಣಕ್ಕಿಳಿದ ಅವರು ಸತತವಾಗಿ ಬ್ಯಾಟ್ ಬೀಸಿ ಅಜೇಯರಾಗಿ ಉಳಿದು ೧೨೨ ರನ್ ಬಾರಿಸಿದರು. ಕೊಹ್ಲಿಗೆ ಉತ್ತಮ ಜತೆಯಾಟ ನೀಡಿದ ಕೆ. ಎಲ್ ರಾಹುಲ್ ೪೧ ಎಸೆತಗಳಲ್ಲಿ ೬೨ ರನ್ ಬಾರಿಸಿ ಫಾರ್ಮ್ ಕಂಡುಕೊಂಡರು. ಸೂರ್ಯಕುಮಾರ್ ಯಾದವ್ ೬ ರನ್ ಗಳಿಸಿ ಔಟಾದರೆ, ರಿಷಭ್ ಪಂತ್ ೧೬ ಎಸೆಗಳಿಗೆ ೨೦ ರನ್ ಗಳಿಸಿದರು.
ಭುವಿ ಮ್ಯಾಜಿಕ್ ಸ್ಪೆಲ್
ದೊಡ್ಡ ಮೊತ್ತದ ಗುರಿ ಬೆನ್ನಟ್ಟಲು ಆರಂಭಿಸಿದ ಅಫಘಾನಿಸ್ತಾನ ತಂಡಕ್ಕೆ ಭುವನೇಶ್ವರ್ ಕುಮಾರ್ ಆಘಾತ ಕೊಟ್ಟರು. ಆರಂಭಿಕ ಇಬ್ಬರು ಬ್ಯಾಟರ್‌ಗಳನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ಕಳುಹಿಸಿದ ಅವರು ಅವರು ಐದು ವಿಕೆಟ್ ಪಡೆಯುವ ಮೂಲಕ ಆಫ್ಘನ್ ತಂಡದ ಆಟಗಾರರು ಚೇತರಿಸಿಕೊಳ್ಳದಂತೆ ನೋಡಿಕೊಂಡರು. ಆದರೆ, ಇಬ್ರಾಹಿಮ್ ಜದ್ರಾನ್ ಕೊನೇ ತನಕ ಬ್ಯಾಟ್ ಮಾಡಿ ೬೪ ರನ್ ಬಾರಿಸಿ ತಂಡದ ಮೊತ್ತ ಮೂರಂಕಿ ದಾಟುವಂತೆ ನೋಡಿಕೊಂಡರು. ರಶೀದ್ ಖಾನ್ (೧೫) ಹಾಗೂ ಮುಜೀಬ್ ಉರ್ ರಹಮಾನ್ (೧೮) ತಮ್ಮ ಕೊಡುಗೆಗಳನ್ನು ಕೊಟ್ಟರು.
ಸ್ಕೋರ್ ವಿವರ
ಭಾರತ : ೨೦ ಓವರ್‌ಗಳಲ್ಲಿ ೨ ವಿಕೆಟ್‌ಗೆ ೨೧೨ (ವಿರಾಟ್ ಕೊಹ್ಲಿ ೧೨೨*, ಕೆ. ಎಲ್ ರಾಹುಲ್ ೬೨, ಫರೀದ್ ಅಹಮದ್ ೫೭ಕ್ಕೆ೨).
ಅಫಘಾನಿಸ್ತಾನ: ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೧೧ (ಇಬ್ರಾಹಿಮ್ ಜದ್ರಾನ್ ೬೪*, ಮುಜೀಬ್ ಉರ್ ರಹ್ಮಾನ್ ೧೮’ ಭುವನೇಶ್ವರ್ ಕುಮಾರ್ ೪ಕ್ಕೆ೫).
ಇದನ್ನೂ ಓದಿ | ವಿರಾಟ್ ದರ್ಶನ, ಟಿ20 ಮಾದರಿಯಲ್ಲಿ ಮೊದಲ ಸೆಂಚುರಿ, ಇನ್ನೂ ಹಲವು ದಾಖಲೆಗಳನ್ನು ಸೃಷ್ಟಿಸಿದ ಕೊಹ್ಲಿ