ಚಿತ್ತಗಾಂಗ್ : ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ 2 ವಿಕೆಟ್ಗೆ 258 ರನ್ ಬಾರಿಸಿದ ಭಾರತ ತಂಡ ಡಿಕ್ಲೇರ್ ಘೋಷಿಸಿದೆ. ಇದರೊಂದಿಗೆ ಆತಿಥೇಯ ಪಡೆಗೆ 513 ರನ್ ಗೆಲುವಿನ ಗುರಿ ನೀಡಲಾಗಿದೆ. ದ್ವಿತೀಯ ಇನಿಂಗ್ಸ್ನಲ್ಲಿ ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ (110) ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅಜೇಯ (102) ಶತಕಗಳನ್ನು ಬಾರಿಸಿ ಎದುರಾಳಿ ತಂಡಕ್ಕೆ ಬೃಹತ್ ಮೊತ್ತದ ಸವಾಲು ಒಡ್ಡಲು ನೆರವಾದರು.
ಪಂದ್ಯದ ಮೂರನೇ ದಿನವಾದ ಶುಕ್ರವಾರ ಬೆಳಗ್ಗಿನ ಅವಧಿಯಲ್ಲಿ ಬಾಂಗ್ಲಾದೇಶ ತಂಡವನ್ನು 150 ರನ್ಗಳಿಗೆ ಆಲ್ಔಟ್ ಮಾಡಿದ ಕೆ. ಎಲ್ ರಾಹುಲ್ ಪಡೆ 254 ರನ್ಗಳ ಮುನ್ನಡೆ ಪಡೆದುಕೊಂಡಿತು. ಸ್ಪಿನ್ನರ್ ಕುಲ್ದೀಪ್ ಯಾದವ್ ಶುಕ್ರವಾರ ಮತ್ತೊಂದು ವಿಕೆಟ್ ಉರುಳಿಸಿ ಐದು ವಿಕೆಟ್ಗಳ ಗೊಂಚಲಿನ ಸಾಧನೆ ಮಾಡಿದರು.
ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಮೊದಲ ವಿಕೆಟ್ಗೆ 70 ರನ್ ಬಾರಿಸಿ ಉತ್ತಮ ಆರಂಭವನ್ನೇ ಪಡೆಯಿತು. ಆದರೆ, ನಾಯಕ ಕೆ. ಎಲ್ ರಾಹುಲ್ 23 ರನ್ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಮತ್ತೊಂದು ತುದಿಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಶುಬ್ಮನ್ ಗಿಲ್ ಶತಕ ಬಾರಿಸಿದರೆ, ಅವರಿಗೆ ಜತೆಯಾದ ಚೇತೇಶ್ವರ್ ಪೂಜಾರ ಕೂಡ ಭಾರತದ ರನ್ ಗಳಿಕೆ ಏರುಮುಖದಲ್ಲಿ ಸಾಗಲು ಕಾರಣರಾದರು. ಅಂತಿಮವಾಗಿ 61.4 ಓವರ್ಗಳಲ್ಲಿ 258 ರನ್ಗಳಿಗೆ ಡಿಕ್ಲೇರ್ ಘೋಷಿಸಿತು. ವಿರಾಟ್ ಕೊಹ್ಲಿ ಔಟಾಗದೇ 19 ರನ್ ಬಾರಿಸಿದರು.
ಬಾಂಗ್ಲಾದೇಶ ತಂಡದ ಬೌಲಿಂಗ್ ಪರ ಮೆಹೆದಿ ಹಸನ್ ಹಾಗೂ ಖಲೀದ್ ಅಹಮದ್ ತಲಾ ಒಂದು ವಿಕೆಟ್ ಪಡೆದರು.