ಹರಾರೆ: ಕೆ. ಎಲ್ ರಾಹುಲ್ ನೇತೃತ್ವದ ಭಾರತ ತಂಡ ಜಿಂಬಾಬ್ವೆ ವಿರುದ್ಧದ ಏಕ ದಿನ ಸರಣಿಯ (IND vs ZIM ODI) ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ೧೩ ರನ್‌ಗಳಿಂದ ವಿಜಯ ಸಾಧಿಸಿದೆ. ಈ ಮೂಲಕ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು (IND vs ZIM) ೩-೦ ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸೋಮವಾರ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಶುಬ್ಮನ್ ಗಿಲ್ (೧೩೦) ಅವರ ಅಮೋಘ ಶತಕದ ನೆರವಿನಿಂದ ನಿಗದಿತ ೫೦ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೨೮೯ ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ ಸಿಕಂದರ್ ರಾಜಾ (೧೧೫) ಅವರ ಶತಕದ ಹೋರಾಟದ ಹೊರತಾಗಿಯೂ ೪೯.೩ ಓವರ್‌ಗಳಲ್ಲಿ ೨೭೬ ರನ್‌ಗಳಿಗೆ ಆಲ್‌ಔಟ್ ಆಯಿತು.
ಉತ್ತಮ ಆರಂಭ, ಕೊನೆಯಲ್ಲಿ ಕುಸಿತ
ಬ್ಯಾಟ್ ಮಾಡಲು ಆರಂಭಿಸಿದ ಭಾರತ ತಂಡಕ್ಕೆ ಶಿಖರ್ ಧವನ್ (೪೦) ಮತ್ತು ಕೆ. ಎಲ್ ರಾಹುಲ್ (೩೦) ಅವರ ಮೂಲಕ ಉತ್ತಮ ಆರಂಭ ದೊರೆಯಿತು. ಈ ಜೋಡಿ ಮೊದಲ ವಿಕೆಟ್‌ಗೆ ೬೩ ರನ್ ಬಾರಿಸಿತು. ಅದೇ ರೀತಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಶುಬ್ಮನ್ ಗಿಲ್ ಶತಕ ಬಾರಿಸಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಇಶಾನ್ ಕಿಶನ್ (೫೦) ಅರ್ಧ ಶತಕ ಬಾರಿಸಿ ರನ್ಔಟ್‌ಗೆ ಬಲಿಯಾದರು. ಈ ಜೋಡಿ ಮೂರನೆ ವಿಕೆಟ್‌ಗೆ ೧೪೦ ರನ್ ಬಾರಿಸಿತು. ಇವರಿಬ್ಬರ ವಿಕೆಟ್ ಪತನಗೊಂಡ ಬಳಿಕ ದೀಪಕ್ ಹೂಡ (೧), ಸಂಜು ಸ್ಯಾಮ್ಸನ್ (೧೫), ಅಕ್ಷರ್ ಪಟೇಲ್ (೧), ಶಾರ್ದುಲ್ ಠಾಕೂರ್ (೯) ಬೇಗನೆ ವಿಕೆಟ್ ಒಪ್ಪಿಸುವ ಮೂಲಕ ಕೊನೆ ಹಂತದಲ್ಲಿ ಕುಸಿತು ಕಂಡಿತು. ಹೀಗಾಗಿ ಭಾರತಕ್ಕೆ ೩೦೦ ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಜಿಂಬಾಬ್ವೆ ಪರ ಬ್ರಾಡ್ ಎವಾನ್ಸ್ ೫೪ ರನ್‌ಗಳಿಗೆ ೫ ವಿಕೆಟ್ ಪಡೆದರು.
ಸಿಕಂದರ್ ಶತಕ
ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ ಉತ್ತಮ ಪೈಪೋಟಿ ಕೊಟ್ಟಿತು. ಸೀನ್ ವಿಲಿಯನ್ಸ್ ಮಧ್ಯಮ ಕ್ರಮಾಂಕದಲ್ಲಿ ೪೫ ರನ್ ಬಾರಿಸಿದರೆ, ಸಿಕಂದರ್ ರಾಜಾ ೧೧೫ ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರು. ಆದರೆ, ಅವರ ಪ್ರಯತ್ನಕ್ಕೆ ಕೊನೇ ಹಂತದಲ್ಲಿ ಭಾರತದ ಬೌಲರ್‌ಗಳು ಕಡಿವಾಣ ಹಾಕಿದರು. ಆವೇಶ್ ಖಾನ್ ೩ ವಿಕೆಟ್ ಪಡೆದರೆ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ದೀಪಕ್ ಚಾಹರ್ ತಲಾ ಎರಡು ವಿಕೆಟ್ ಪಡೆದರು.
ಸ್ಕೋರ್ ವಿವರ
ಭಾರತ : ೫೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೨೮೯ (ಶುಬ್ಮನ್ ಗಿಲ್ ೧೩೦, ಇಶಾನ್ ಕಿಶನ್ ೫೦; ಬ್ರಾಡ್ ಎವಾನ್ಸ್ ೫೪ಕ್ಕೆ೫).
ಜಿಂಬಾಬ್ವೆ : ೪೯. ೩ ಓವರ್‌ಗಳಲ್ಲಿ ೨೭೬ (ಸಿಕಂದರ್ ರಾಜಾ ೧೧೫, ಸೀನ್ ವಿಲಿಯಮ್ಸ್ ೪೫, ಆವೇಶ್ ಖಾನ್ ೬೬ಕ್ಕೆ ೩).