ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳೆಯರ(WPL 2023) ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆರಂಭಕ್ಕೂ ಮುನ್ನವೇ ತೀವ್ರ ಕುತೂಹಲ ಮೂಡಿಸಿದೆ. ಟೆನಿಸ್ ಬಾಳ್ವೆಯ ವಿದಾಯದ ಬಾಗಿಲಲ್ಲಿರುವ ಸಾನಿಯಾ ಮಿರ್ಜಾ(Sania Mirza) ಅವರು ಆರ್ಸಿಬಿ(RCB) ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ.
ಸಾನಿಯಾ ಮಿರ್ಜಾ ಅವರು ಆರ್ಸಿಬಿ ತಂಡದ ಮೆಂಟರ್ ಆಗಿ ಆಯ್ಕೆಯಾಗಿರುವ ವಿಚಾರವನ್ನು ಪ್ರಾಂಚೈಸಿ ಟ್ವಿಟರ್ನಲ್ಲಿ ಖಚಿತಪಡಿಸಿದೆ. “ನಮಸ್ಕಾರ ಸಾನಿಯಾ ಮಿರ್ಜಾ” ಎಂದು ಅವರಿಗೆ ಸ್ವಾಗತ ಕೋರಿದೆ. ಆರ್ಸಿಬಿ ತಂಡದ ಮೆಂಟರ್ ಆಗಿ ನೇಮಕಗೊಂಡ ಸಾನಿಯಾ ಮಿರ್ಜಾ ಸಂತಸ ವ್ಯಕ್ಯಪಡಿಸಿದ್ದು, ಕ್ರಿಕೆಟ್ ಆಟದ ಬಗ್ಗೆ ಏನೂ ತಿಳಿಯದಿದ್ದರೂ ನನಗೆ ಈ ಹುದ್ದೆ ನೀಡಿರುವುದು ಅಚ್ಚರಿ ತಂದಿದೆ. ಇದೊಂದು ದೊಡ್ಡ ಜವಾಬ್ದಾರಿ ಎಂದು ಹೇಳಿದ್ದಾರೆ.
6 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತೆ ಸಾನಿಯಾ ಮಿರ್ಜಾ ದುಬಾೖ ಟೆನಿಸ್ ಚಾಂಪಿಯನ್‌ಶಿಪ್ ಬಳಿಕ ವಿದಾಯ ಹೇಳಲಿದ್ದಾರೆ. ಈ ಟೂರ್ನಿ ಫೆ. 19ರಂದು ಆರಂಭವಾಗಲಿದೆ. ಸಾನಿಯಾ ಮಿರ್ಜಾಗೆ ಗ್ರ್ಯಾನ್‌ಸ್ಲಾಮ್‌ನಲ್ಲಿ ಗೆಲುವಿನ ವಿದಾಯ ಹೇಳುವ ಸುವರ್ಣಾವಕಾಶವಿತ್ತು. ಆಸ್ಟ್ರೇಲಿಯನ್ ಓಪನ್ ಮಿಕ್ಸೆಡ್ ಡಬಲ್ಸ್‌ನಲ್ಲಿ ಅವರು ರೋಹನ್ ಬೋಪಣ್ಣ ಜತೆಗೂಡಿ ಫೈನಲ್ ತಲುಪಿದ್ದರು. ಆದರೆ ಅಲ್ಲಿ ರನ್ನರ್ ಅಪ್‌ಗೆ ಸಮಾಧಾನಪಡಬೇಕಾಯಿತು.
ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧನಾ ಅತ್ಯಧಿಕ 3.4 ಕೋಟಿ ರೂ. ಮೊತ್ತಕ್ಕೆ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಪಾಲಾಗುವ ಮೂಲಕ ದಾಖಲೆ ನಿರ್ಮಿಸಿದ್ದರು.