Site icon Vistara News

ಇಂಗ್ಲೆಂಡ್​ ಎದುರು ಟಿ20 ಫೇಲ್ ಆದ ಭಾರತ ಮಹಿಳಾ ಕ್ರಿಕೆಟ್​ ತಂಡಕ್ಕೆ​ ಈಗ ‘ಟೆಸ್ಟ್’ ಪರೀಕ್ಷೆ​

Smriti Mandhana

ಮುಂಬಯಿ: ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಕ್ರಿಕೆಟ್​ ಸರಣಿಯಲ್ಲಿ ಈಗಾಗಲೇ ಭಾರತ ಮಹಿಳಾ ತಂಡ ಟಿ20 ಸರಣಿಯಲ್ಲಿ ಸೋಲು ಕಂಡಿದೆ. ಇದೀಗ ಏಕೈಕ ಟೆಸ್ಟ್(India Women vs England Women)​ ಪಂದ್ಯ ಆಡಲು ಸಿದ್ಧವಾಗಿದೆ. ಇತ್ತಂಡಗಳ ಈ ಪಂದ್ಯ ಗುರುವಾರದಿಂದ ಆರಂಭವಾಗಲಿದೆ. ಪಂದ್ಯಕ್ಕೆ ಡಿ.ವೈ ಪಾಟೀಲ್​ ಕ್ರೀಡಾಂಗಣ ಅಣಿಯಾಗಿದೆ. ಪಂದ್ಯ ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ.

ಇತ್ತಂಡಗಳ ಮೊದಲ ಮುಖಾಮುಖಿ

ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡ ಚೊಚ್ಚಲ ಟೆಸ್ಟ್​ ಪಂದ್ಯ ಆಡಿದ್ದು 1986ರಲ್ಲಿ. ಈ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು. ಮೊದಲ ಇನಿಂಗ್ಸ್​ನಲ್ಲಿ ಭಾರತ 323 ರನ್​ ಬಾರಿಸಿದೆ ಇಂಗ್ಲೆಂಡ್ ​198 ಕುಸಿಯಿತು. ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ 128ಕ್ಕೆ ಆಲೌಟ್​ ಆಯಿತು. ಇಂಗ್ಲೆಂಡ್​ 5ಕ್ಕೆ 229 ರನ್​ ಗಳಿಸಿ ಪಂದ್ಯವನ್ನು ಡ್ರಾ ಮಾಡಿತು.

ಒಟ್ಟು ಮುಖಾಮುಖಿ

ಉಭಯ ತಂಡಗಳು ಇದುವರೆಗೆ ಟೆಸ್ಟ್​ನಲ್ಲಿ ಒಟ್ಟು 14 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಒಂದು ಪಂದ್ಯ ಸೋಲು ಮತ್ತು ಎರಡರಲ್ಲಿ ಗೆದ್ದಿದೆ. ಇಂಗ್ಲೆಂಡ್​ ಕೇವಲ ಒಂದು ಪಂದ್ಯಲ್ಲಿ ಮಾತ್ರ ಗೆಲುವು ಕಂಡಿದೆ. ಉಳಿದ 11 ಪಂದ್ಯಗಳು ಡ್ರಾದಲ್ಲಿ ಅಂತ್ಯಕಂಡಿದೆ. ಇತ್ತಂಡಗಳು ಕೊನೆಯ ಬಾರಿ ಟೆಸ್ಟ್​ ಆಡಿದ್ದು 2021ರಲ್ಲಿ. ಬ್ರಿಸ್ಟಲ್‌ನಲ್ಲಿ ನಡೆದ ಈ ಪಂದ್ಯದ ಡ್ರಾ ಆಗಿತ್ತು. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸ್ಮೃತಿ ಮಂದಾನ 78 ರನ್‌, ಶಫಾಲಿ ವರ್ಮಾ 96 ರನ್ ಹೊಡೆದಿದ್ದರು. ಈ ಬಾರಿಯೂ ಉಭಯ ಆಟಗಾರ್ತಿಯರು ತಂಡದಲ್ಲಿದ್ದು ಫಾರ್ಮ್​ ಮಾತ್ರ ಕೈಕೊಟ್ಟಿದೆ.

ಇಂಗ್ಲೆಂಡ್​ ವಿರುದ್ಧದ ಈ ಟೆಸ್ಟ್​ ಪಂದ್ಯ ಮುಕ್ತಾಯದ ಬಳಿಕ ಹರ್ಮನ್​ಪ್ರೀತ್​ ಕೌರ್​ ಬಳಗ ಇದೇ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯ ಆಡಲಿದೆ. ಬಲಿಷ್ಠವಾಗಿರುವ ಆಸೀಸ್​ ಎದುರಿಸಲು ಈ ಪಂದ್ಯ ಕೌರ್​ ಪಡೆಗೆ ಒಂದು ಉತ್ತಮ ವೇದಿಕೆಯಾಗಿದೆ.

ಇಂಗ್ಲೆಂಡ್​ ಬಲಿಷ್ಠ

ಹೀಥರ್ ನೈಟ್ ಸಾರಥ್ಯದ ಇಂಗ್ಲೆಂಡ್​ ತಂಡ ಈ ಬಾರಿ ಉತ್ತಮವಾಗಿ ಗೋಚರಿಸಿದೆ. ಇದಕ್ಕೆ ಟಿ20 ಸರಣಿಯೇ ಸಾಕ್ಷಿ. ಅನುಭವಿ ಮತ್ತು ಯುವ ಆಟಗಾರ್ತಿಯರು ತಂಡದಲ್ಲಿ ಎಲ್ಲ ವಿಭಾಗಲ್ಲಿಯೂ ಸಮತೋಲನವಾಗಿದೆ. ಕಳೆದ ಜೂನ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದ ಟ್ಯಾಮಿ ಬೆಮೌಂಟ್‌ ಪಂದ್ಯ ಪ್ರಮುಖ ಆಕರ್ಷಣೆಯಾಗಿದ್ದಾರೆ.

ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ) ಸ್ಮೃತಿ ಮಂಧಾನ (ಉಪನಾಯಕಿ) ಜೆಮಿಮಾ ರಾಡ್ರಿಗಸ್ ಶಫಾಲಿ ವರ್ಮಾ ದೀಪ್ತಿ ಶರ್ಮಾ ಯಾಸ್ತಿಕಾ ಭಾಟಿಯಾ ರಿಚಾ ಘೋಷ್, ಸ್ನೇಹಾ ರಾಣಾ ಶುಭಾ ಸತೀಶ್ ಹರ್ಲೀನ್ ಡಿಯೊಲ್ ಸೈಕಾ ಇಷಾಕಿ ರೇಣುಕಾ ಸಿಂಗ್ ತಿತಾಸ್ ಸಾಧು ಮೇಘನಾ ಸಿಂಗ್ ರಾಜೇಶ್ವರಿ ಗಾಯಕ್ವಾಡ್​ ಪೂಜಾ ವಸ್ತ್ರಕರ್.

ಇಂಗ್ಲೆಂಡ್: ಹೀಥರ್ ನೈಟ್ (ನಾಯಕಿ) ಎಮಾ ಲ್ಯಾಂಬ್ ನ್ಯಾಟ್ ಸೀವರ್ ಬ್ರಂಟ್ ಡ್ಯಾನೀಲೆ ವೈಟ್ ಟ್ಯಾಮಿ ಬೆಮಾಂಟ್ ಲಾರೆನ್ ಬೆಲ್ ಅಲೈಸ್ ಕ್ಯಾಪ್ಸಿ ಕೇಟ್ ಕ್ರಾಸ್ ಚಾರ್ಲೀ ಟೀನ್ ಸೋಫಿಯಾ ಡಂಕ್ಲಿ ಸೋಫಿ ಎಕ್ಸೆಲ್‌ಸ್ಟೋನ್ ಲಾರೆನ್ ಫೈಲರ್ ಬೆಸ್ ಹೀತ್ ಎಮಿ ಜೋನ್ಸ್ .

Exit mobile version