Site icon Vistara News

IND vs PAK: ಮೋದಿ ಸ್ಟೇಡಿಯಂನಿಂದಲೂ ಇಸ್ರೇಲ್‌ಗೆ ಬೆಂಬಲ; ಥ್ಯಾಂಕ್ಯೂ ಇಂಡಿಯಾ ಎಂದ ‘ಮಿತ್ರ’

Pro Israel Poster

Thank You India: Israel Posts, Again For Support Straight From Narendra Modi Stadium

ಗಾಂಧಿನಗರ: ಗುಜರಾತ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧದ (IND vs PAK) ಪಂದ್ಯದಲ್ಲಿ ಭಾರತ ತಂಡವು ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ವಿಶ್ವಕಪ್‌ನಲ್ಲಿ (ICC World Cup 2023) ಸೋಲಿಲ್ಲದ ಸರದಾರ ಎನಿಸಿಕೊಂಡಿದೆ. ಪಾಕ್‌ ವಿರುದ್ಧ ರೋಹಿತ್‌ ಶರ್ಮಾ ಪಡೆ ಗೆಲುವು ಸಾಧಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಬಹುತೇಕ ಗಣ್ಯರೂ ಶುಭಕೋರಿದ್ದಾರೆ. ಹಾಗೆಯೇ, ಪಂದ್ಯದ ವೇಳೆ ಅಭಿಮಾನಿಯೊಬ್ಬರು ಇಸ್ರೇಲ್‌ ಪರವಾಗಿ ಪೋಸ್ಟರ್‌ ಪ್ರದರ್ಶಿಸಿದ್ದು, ಇದಕ್ಕೆ ಇಸ್ರೇಲ್‌, “ಥ್ಯಾಂಕ್‌ ಯು ಇಂಡಿಯಾ” ಎಂದು ಪ್ರತಿಕ್ರಿಯಿಸಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯದ ವೇಳೆ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿರುವ ಫೋಟೊ ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲ, “ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಇಸ್ರೇಲ್‌ ಜತೆ ಭಾರತ ನಿಲ್ಲುತ್ತದೆ” ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಭಾರತದ ವ್ಯಕ್ತಿ ಪ್ರದರ್ಶಿಸಿದ ಪೋಸ್ಟರ್‌ ವೈರಲ್‌ ಆಗುತ್ತಲೇ, ಇಸ್ರೇಲ್‌ ದೇಶದ ಅಧಿಕೃತ ಎಕ್ಸ್‌ ಖಾತೆಯಿಂದ ಪ್ರತಿಕ್ರಿಯೆ ನೀಡಲಾಗಿದ್ದು, “ಥ್ಯಾಂಕ್‌ ಯು ಇಂಡಿಯಾ” ಎಂದಿದೆ.

ಭಾರತದಲ್ಲಿರುವ ಇಸ್ರೇಲ್‌ ರಾಯಭಾರಿ ಸಂತಸ

ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸಿರುವುದಕ್ಕೆ ಭಾರತದಲ್ಲಿರುವ ಇಸ್ರೇಲ್‌ ರಾಯಭಾರಿ ನಾವೋರ್‌ ಗಿಲೋನ್‌ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. “ಪಾಕ್‌ ವಿರುದ್ಧ ಭಾರತ ಗೆದ್ದಿದ್ದು ಖುಷಿ ತಂದಿದೆ. ಹಾಗೊಂದು ವೇಳೆ ಪಾಕಿಸ್ತಾನ ಗೆದ್ದಿದ್ದರೆ ಗೆಲುವನ್ನು ಹಮಾಸ್‌ ಉಗ್ರರಿಗೆ ಅರ್ಪಣೆ ಮಾಡಲಾಗುತ್ತಿತ್ತು” ಎಂದು ಪಾಕಿಸ್ತಾನದ ಕಾಲೆಳೆದಿದ್ದಾರೆ.

ಅಕ್ಟೋಬರ್‌ 7ರಿಂದ ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಕೂಡ ಗಾಜಾಪಟ್ಟಿ ಮೇಲೆ ದಾಳಿ ನಡೆಸುತ್ತಿದೆ. ರಾಕೆಟ್‌, ಗುಂಡಿನ ದಾಳಿಗೆ ಎರಡೂ ದೇಶಗಳಲ್ಲಿ ಸುಮಾರು 4 ಸಾವಿರ ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಮತ್ತೊಂದೆಡೆ, ಗಾಜಾ ನಗರವನ್ನು ಅಳಿಸಿಹಾಕಿ, ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಬೇಕು ಎಂದು ಪಣತೊಟ್ಟಿರುವ ಇಸ್ರೇಲ್‌ ಪಡೆಗಳು, ಗಾಜಾ ನಗರದ ಗಡಿಯಲ್ಲಿ ಲಕ್ಷಾಂತರ ಸೈನಿಕರನ್ನು ನಿಯೋಜಿಸಿವೆ. ನೂರಾರು ಯುದ್ಧ ಟ್ಯಾಂಕರ್‌ಗಳಿಂದ ಗಾಜಾ ಮೇಲೆ ದಾಳಿ ನಡೆಸಲಾಗುತ್ತಿದೆ. ಒಂದೇ ದಿನದಲ್ಲಿ ಹಮಾಸ್‌ನ ಇಬ್ಬರು ಹಿರಿಯ ಕಮಾಂಡರ್‌ಗಳನ್ನು ಹೊಡೆದುರುಳಿಸಿವೆ.

ಇದನ್ನೂ ಓದಿ: Shehla Rashid: ಮೋದಿಯನ್ನು ಹಾಡಿ ಹೊಗಳಿದ ಶೆಹ್ಲಾ ರಶೀದ್; ಒಂದು ಕಾಲದ ಕಟ್ಟರ್‌ ವಿರೋಧಿ ಇವರು!

ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂ​ನಲ್ಲಿ ನಡೆದ ಹೈವೋಲ್ಟೇಜ್​ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಪಾಕ್ ತಂಡದ ಭಾರತ ಬೌಲಿಂಗ್ ದಾಳಿಗೆ ತತ್ತರಿಸಿ 42.5 ಓವರ್​ಗಳಲ್ಲಿ 191 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 30.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟಮಾಡಿಕೊಂಡು 193 ರನ್ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ: Ind vs Pak: ಪಾಕ್‌ ಎದುರು ಭಾರತ ಜಯಭೇರಿ; ವಿವಿಧೆಡೆ ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮಾಚರಣೆ

ಇದರೊಂದಿಗೆ ಹಾಲಿ ವಿಶ್ವ ಕಪ್​ನಲ್ಲಿ ಭಾರತ ತಂಡ ಅತ್ಯುತ್ತಮ ಆರಂಭ ಪಡೆದಿದ್ದು ಹ್ಯಾಟ್ರಿಕ್​ ಜಯ ಭಾರತದ ಪಾಲಾಗಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಭಾರತ ತಂಡ ನಂತರದ ಪಂದ್ಯದಲ್ಲಿ ಅಪಘಾನಿಸ್ತಾನ ತಂಡದ ವಿರುದ್ಧ ಸವಾರಿ ಮಾಡಿತ್ತು. ಇದೀಗ ಪಾಕ್ ವಿರುದ್ಧವೂ ನಿರಾಯಾಸ ಗೆಲುವು ತನ್ನದಾಗಿಸಿಕೊಂಡಿದೆ. ಈ ವಿಜಯದೊಂದಿಗೆ ಪಾಕ್​ ವಿರುದ್ಧ ವಿಶ್ವ ಕಪ್​ ಇತಿಹಾಸದಲ್ಲಿನ ತನ್ನ ಮುನ್ನಡೆಯನ್ನು 8-0 ಅಂತರಕ್ಕೆ ಮುಂದುವರಿಸಿಕೊಂಡಿತು ಟೀಮ್ ಇಂಡಿಯಾ.

Exit mobile version