Site icon Vistara News

WPL 2023 : ಆರ್​ಸಿಬಿಗೆ ಮಗದೊಂದು ಹೀನಾಯ ಪರಾಜಯ, ಯುಪಿ ವಿರುದ್ಧ 10 ವಿಕೆಟ್​ ಸೋಲು

That humiliating defeat for Rcub, that 10-wicket loss against up

#image_title

ಮುಂಬಯಿ: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್​ ಲೀಗ್​ನ (WPL 2023) ಆರಂಭದಿಂದಲೂ ಕಳಪೆ ಪ್ರದರ್ಶನ ನೀಡುತ್ತಾ ಬಂದಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮತ್ತೆ ತನ್ನ ಚಾಳಿ ಮುಂದುವರಿಸಿತು. ಹೀಗಾಗಿ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್​ಗಳ ಹೀನಾಯ ಸೋಲಿಗೆ ಒಳಗಾಯಿತು. ಸ್ಮೃತಿ ಮಂಧಾನಾ ನೇತೃತ್ವದ ತಂಡಕ್ಕೆ ಟೂರ್ನಿಯಲ್ಲಿ ಇದು ನಾಲ್ಕನೇ ಸತತ ನಾಲ್ಕನೇ ಸೋಲು ಹಾಗೂ ಗೆಲುವಿನ ಖಾತೆ ತೆರೆಯಲು ಇನ್ನೂ ಸಾಧ್ಯವಾಗಲಿಲ್ಲ. ಅಲ್ಲದೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನವನ್ನೇ ನೆಚ್ಚಿಕೊಂಡಿತು.

ಇಲ್ಲಿನ ಬ್ರಬೋರ್ನ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ತಂಡ 19.3 ಓವರ್​ಗಳಲ್ಲಿ 138 ರನ್​ಗಳಿಗೆ ಆಲ್​ಔಟ್ ಆಯಿತು. ಸಾಧಾರಣ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್​ ಬಳಗ 13 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 139 ರನ್​ ಬಾರಿಸಿತು. ಯುಪಿ ತಂಡದ ನಾಯಕಿ ಅಲಿಸಾ ಹೀಲಿ 47 ಎಸೆತಗಳಲ್ಲಿ ಅಜೇಯ 96 ಬಾರಿಸಿ ಗೆಲವಿನ ರೂವಾರಿ ಎನಿಸಿಕೊಂಡರು. ಆದರೆ, ನಾಲ್ಕು ರನ್​ಗಳ ಕೊರತೆಯಿಂದ ಡಬ್ಲ್ಯುಪಿಎಲ್​ನ ಮೊದಲ ಶತಕಧಾರಿ ಎಂಬ ಸಾಧನೆ ಮಾಡುವ ಅವಕಾಶದಿಂದ ವಂಚಿತರಾದರು. ಅವರಿಗೆ ಉತ್ತಮ ನೆರವು ಕೊಟ್ಟ ದೇವಿಕಾ ವೈದ್ಯ 36 ರನ್​ ಬಾರಿಸಿದರು.

ಇಲ್ಲಿನ ಬ್ರಬೊರ್ನ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟಾಸ್​ ಗೆದ್ದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನಾ ದೊಡ್ಡ ಮೊತ್ತ ಪೇರಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಅವರ ಯೋಜನೆ ಉಲ್ಟಾ ಹೊಡೆಯಿತು. 19.3 ಓವರ್​ಗಳಲ್ಲಿ 138 ರನ್​ಗಳಿಗೆ ಆಲ್​ಔಟ್​ ಆಯಿತು. 12.4 ಓವರ್​ಗಳಲ್ಲಿ 100 ರನ್​ ಬಾರಿಸಿದ್ದ ಆರ್​ಸಿಬಿ ಬಳಿಕ ಏಕಾಏಕಿ ಕುಸಿತ ಕಂಡಿತು. ಯುಪಿ ವಾರಿಯರ್ಸ್​ ಬಳಗ ಶಿಸ್ತಿನ ಬೌಲಿಂಗ್​ ದಾಳಿ ಸಂಘಟಿಸಿ ದುರ್ಬಲ ಆರ್​ಸಿಬಿ ಬ್ಯಾಟಿಂಗ್ ಪಡೆಯನ್ನು ಹಿಮ್ಮೆಟ್ಟಿಸಿತು. ಯುಪಿ ತಂಡ ಒಂದೇ ಒಂದು ಇತರ ರನ್ ನೀಡದಿರುವುದು ಅವರ ಬೌಲಿಂಗ್​ ಶಿಸ್ತಿಗೆ ಸಾಕ್ಷಿ ಎನಿಸಿಕೊಂಡಿತು. ಎಲಿಸ್​ ಪೆರಿ (52) ಅರ್ಧ ಶತಕ ಬಾರಿಸಿದ್ದೇ ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಸಮಾಧಾನಕರ ಸಂಗತಿ.

ಸ್ಮೃತಿ ಮಂಧಾನಾ ಮತ್ತೆ ಫೇಲ್​

ಡಬ್ಲ್ಯುಪಿಎಲ್​ನ (WPL 2023) ದುಬಾರಿ ಬೆಲೆಯ ಆಟಗಾರ್ತಿ ಸ್ಮೃತಿ ಮಂಧಾನಾ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಭಯದಿಂದಲೇ ಬ್ಯಾಟಿಂಗ್ ಆರಂಭಿಸಿದ ಅವರು 4 ರನ್​ ಗಳಿಸಿ ಪೆವಿಲಿಯನ್​ಗೆ ಮರಳಿದರು. 3.4 ಕೋಟಿ ರೂಪಾಯಿ ಪಡೆದಿದ್ದ ಅವರು ಈ ಪಂದ್ಯದಲ್ಲಾದರೂ ಉತ್ತಮ ಪ್ರದರ್ಶನ ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಮತ್ತೊಬ್ಬರು ಆರಂಭಿಕ ಬ್ಯಾಟರ್ ಸೋಫಿ ಡಿವೈನ್​ 34 ರನ್​ ಬಾರಿಸಿ ತಂಡಕ್ಕೆ ಸ್ವಲ್ಪ ಮಟ್ಟಿಗೆ ನೆರವಾದರು. ಸೋಫಿ ಮತ್ತು ಎಲಿಸ್​ ಹೊರತುಪಡಿಸಿ ಉಳಿದ ಬ್ಯಾಟರ್​ಗಳು ರನ್​ ಗಳಿಸಲು ಪ್ರಯತ್ನವೇ ಪಡಲಿಲ್ಲ.

ಕನಿಕಾ ಅಹುಜಾ (8), ಹೇದರ್ ನೈಟ್​ (2), ರಿಚಾ ಘೋಷ್​ (1), ಕೋಮಲ್​ ಜಂಜಾದ್ (5), ರೇಣುಕಾ ಸಿಂಗ್​ (3) ಒಂದಂಕಿ ಮೊತ್ತಕ್ಕೆ ಸೀಮಿತಗೊಂಡರು. ಶ್ರೇಯಾಂಕಾ ಪಾಟೀಲ್​ (15), ಎರಿನ್​ ಬರ್ನ್ಸ್​​ (12) ಪ್ರಯತ್ನವೂ ಲೆಕ್ಕಕ್ಕೆ ಸಿಗಲಿಲ್ಲ. ಅನಗತ್ಯ ರನ್​ಔಟ್​, ಬೇಕಾಬಿಟ್ಟಿ ಹೊಡೆತಕ್ಕೆ ಆರ್​ಸಿಬಿ ತಂಡ ಬೆಲೆ ತೆರಬೇಕಾಯಿತು.

ಯುಪಿ ವಾರಿಯರ್ಸ್​ ತಂಡ ಪರ ಸೋಫಿಯಾ ಎಕ್ಲೆಸ್ಟೋನ್​ 14 ರನ್​ಗಳಿಗೆ 4 ವಿಕೆಟ್​ ಉರುಳಿಸಿದರೆ ದೀಪ್ತಿ ಶರ್ಮಾ 26 ರನ್​ಗಳಿಗೆ 3 ವಿಕೆಟ್​ ಉರುಳಿಸಿದರು.

Exit mobile version