ಕೋಲ್ಕೊತಾ: ಐಪಿಎಲ್ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ಅಬ್ಬರದ ಪ್ರದರ್ಶನದ ಮೂಲಕವೇ ಕ್ರಿಕೆಟ್ ಪ್ರಿಯರ ಗಮನ ಸೆಳೆಯುತ್ತಿದೆ. ದಿನಕ್ಕೊಂದು ರೀತಿಯಲ್ಲಿ ಅಚ್ಚರಿಯ ಫಲಿತಾಂಶ ಮೂಡಿ ಬರುತ್ತಿದೆ. ಅಷ್ಟರಲ್ಲಿ ಈ ಬಾರಿಯ ಅತ್ಯಮೋಘ ಪ್ರದರ್ಶನವೆಂದರೆ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಬ್ಯಾಟರ್ ರಿಂಕು ಸಿಂಗ್ ಕೊನೇ ಓವರ್ನಲ್ಲಿ ಬಾರಿಸಿದ್ದ ವಿಜಯದ ಐದು ಸಿಕ್ಸರ್ಗಳು. ಗೆಲುವಿಗಾಗಿ ಕೆಕೆಆರ್ ತಂಡಕ್ಕೆ ಕೊನೇ ಓವರ್ನಲ್ಲಿ ಬೇಕಾಗಿದ್ದ 29 ರನ್ಗಳನ್ನು ರಿಂಕು ಸಿಂಗ್ ಐದು ಸಿಕ್ಸರ್ ಸಿಡಿಸುವ ಮೂಲಕ ಪೇರಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಇನಿಂಗ್ಸ್ ಎಂದು ಹೇಳಲಾಗುತ್ತಿದೆ. ಅಚ್ಚರಿಯೆಂದರೆ ಇಂಥದ್ದೊಂದು ಅಬ್ಬರದ ಪ್ರದರ್ಶನ ನೀಡಲು ಅವರು ಬಳಸಿಕೊಂಡಿದ್ದು ತಮ್ಮ ಬ್ಯಾಟನ್ನಲ್ಲ. ಬದಲಾಗಿ ನಾಯಕ ನಿತೀಶ್ ರಾಣಾ ಅವರದ್ದು.
ರಿಂಕು ಸಿಕ್ಸರ್ ಬಾರಿಸಿದ ಈ ಬ್ಯಾಟ್ ನನ್ನದು. ಕಳೆದ ಎರಡೂ ಪಂದ್ಯಗಳಲ್ಲಿ ನಾನು ಇದೇ ಬ್ಯಾಟ್ನಿಂದ ಆಡಿದ್ದೇನೆ. ಕಳೆದ ಅವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯಗಳಲ್ಲಿಯೂ ಇದೇ ಬ್ಯಾಟ್ ಬಳಸಿದ್ದೆ. ಅದೇ ರೀತಿ ಕಳೆದ ವರ್ಷವೂ ಇದೇ ಬ್ಯಾಟ್ ಬಳಸಿ ಆಡಿದ್ದೆ ಎಂಬುದಾಗಿ ಪಂದ್ಯದ ಬಳಿಕ ನಾಯಕ ನಿತೀಶ್ ರಾಣಾ ಹೇಳಿದ್ದಾರೆ.
ರಿಂಕು ಸಿಂಗ್ ಹೇಳಿಕೆ ಇಲ್ಲಿದೆ
ಗುಜರಾತ್ ವಿರುದ್ಧದ ಪಂದ್ಯದಲ್ಲಿ ನಾನು ಬ್ಯಾಟ್ ಬದಲಿಸಿದೆ. ಆಗ ರಿಂಕು ಸಿಂಗ್ ಬ್ಯಾಟ್ ತಮಗೆ ನೀಡುವಂತೆ ಕೋರಿಕೊಂಡರು. ಆರಂಭದಲ್ಲಿ ಆ ಬ್ಯಾಟ್ ನೀಡುವುದಕ್ಕೆ ನನಗೆ ಇಷ್ಟವಿರಲಿಲ್ಲ. ಆದರೆ, ಯಾವುದಕ್ಕೂ ಇರಲಿ ಅಂಥ ಡ್ರೆಸಿಂಗ್ ರೂಮ್ಗೆ ತಂದಿಟ್ಟಿದ್ದೆ ಎಂದು ನಿತೀಶ್ ವಿಡಿಯೊವೊಂದರಲ್ಲಿ ಹೇಳಿದ್ದಾರೆ.
ಭಾರ ಕಡಿಮೆಯಿದೆ ಹಾಗೂ ದೊಡ್ಡ ಹೊಡೆತಗಳನ್ನು ಬಾರಿಸಲು ಅನುಕೂಲಕರವಾಗಿದೆ ಎಂಬ ಕಾರಣಕ್ಕೆ ಈ ಬ್ಯಾಟ್ ಅನ್ನು ರಿಂಕು ಆಯ್ಕೆ ಮಾಡಿಕೊಂಡಿರಬಹುದು ಎಂದು ನಾನು ಅಂದುಕೊಳ್ಳುತ್ತಿದ್ದೇನೆ. ಈಗ ಆ ಬ್ಯಾಟ್ ರಿಂಕು ಸಿಂಗ್ಗೆ ಸೇರಿದ್ದು ನನ್ನದಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಕೋಚ್ ಚಂದ್ರಕಾಂತ್ ಪಂಡಿತ್ ಕೂಡ ರಿಂಕು ಸಿಂಗ್ ಸಾಧನೆಯನ್ನು ಕೊಂಡಾಡಿದ್ದಾರೆ.
43 ವರ್ಷಗಳ ನನ್ನ ಕ್ರಿಕೆಟ್ ವೃತ್ತಿಯಲ್ಲಿ ನಾನು ನೋಡಿದ ಕೆಲವೇ ಕೆಲವು ಅತ್ಯುತ್ತಮ ಕ್ರಿಕೆಟ್ ಇನಿಂಗ್ಸ್ಗಳಲ್ಲಿ ಇದೂ ಒಂದು. ರಣಜಿ ಟ್ರೋಫಿ ಪಂದ್ಯದಲ್ಲಿ ರವಿ ಶಾಸ್ತ್ರಿ ಸತತ ಆರು ಸಿಕ್ಸರ್ಗಳನ್ನು ಬಾರಿಸಿದ್ದು, ಜಾವೇದ್ ಮಿಯಾಂದಾದ್ ಕೊನೇ ಎಸತಕ್ಕೆ ಸಿಕ್ಸರ್ ಬಾರಿಸಿದ್ದು ಇವತ್ತಿನವರೆಗೆ ಅತ್ಯುತ್ತಮ ಇನಿಂಗ್ಸ್ ಎನಿಸಿತ್ತು. ಆ ಸಾಲಿಗೆ ಈಗ ರಿಂಕು ಸಿಂಗ್ ಸೇರಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ರಿಂಕು ದಾಖಲೆ ಈ ರೀತಿ ಇತ್ತು
ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಬ್ಯಾಟರ್ ರಿಂಕು ಸಿಂಗ್ ಐಪಿಎಲ್ (IPL 2022) ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅವರೀಗ ತಂಡವೊಂದರ ಗೆಲುವಿಗಾಗಿ ಕೊನೇ ಓವರ್ನಲ್ಲಿ ಸತತವಾಗಿ ಐದು ಸಿಕ್ಸರ್ ಬಾರಿಸಿದ ಬ್ಯಾಟರ್. ಐಪಿಎಲ್ 16ನೇ ಆವೃತ್ತಿಯ ಭಾನುವಾರದ ಡಬಲ್ ಹೆಡರ್ನ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಪಂದ್ಯದ ಕೊನೇ ಓವರ್ನಲ್ಲಿ ಕೆಕೆಆರ್ ಗೆಲುವಿಗೆ 29 ರನ್ಗಳು ಬೇಕಾಗಿದ್ದವು. ಯಶ್ ದಯಾಳ್ ಎಸೆದ ಮೊದಲ ಎಸೆತದಲ್ಲಿ ಒಂದು ರನ್ ಗಳಿಸಿದ ಕೋಲ್ಕೊತಾ ಗೆಲುವಿಗೆ ಉಳಿದ ಐದು ಎಸೆತಗಳಲ್ಲಿ 28 ರನ್ ಬೇಕಾಗಿತ್ತು. ಸ್ಟ್ರೈಕ್ನಲ್ಲಿದ್ದ ರಿಂಕು ಸಿಂಗ್ ಮುಂದಿನ ಐದು ಎಸೆತಗಳಲ್ಲಿ ಸತತವಾಗಿ ಐದು ಸಿಕ್ಸರ್ ಸಿಡಿಸಿದರು. ಬೌಲರ್ ಯಶ್ ದಯಾಳ್ ಕುಸಿತು ಕುಳಿತರು.
ಅದೇ ರೀತಿ ರಿಂಕು ಸಿಂಗ್ ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದ್ದರು. ಆದರೆ ಕೊನೇ ಏಳು ಎಸೆತದಲ್ಲಿ 40 ರನ್ ಬಾರಿಸಿದರು. ಅದರಲ್ಲಿ ಆರು ಸಿಕ್ಸರ್ ಹಾಗೂ ಫೋರ್ ಸೇರಿಕೊಂಡಿವೆ. (6, 4, 6, 6, 6, 6, 6) ಈ ಮೂಲಕ ಅವರು ವಿರೋಚಿತ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದರು.