ದುಬೈ : ಆರು ತಂಡಗಳ ನಡುವೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದರೂ ಎಲ್ಲರ ಗಮನ ಇರುವುದು ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳ ನಡುವಿನ ಹಣಾಹಣಿಯ ಕಡೆಗೆ. ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾಗಿರುವ ಈ ಉಭಯ ತಂಡಗಳ ನಡುವಿನ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದೇ ಕ್ರಿಕೆಟ್ ಪ್ರೇಮಿಗಳ ಕೌತುಕ. ಅರಬರ ನಾಡಲ್ಲಿ ಭಾನುವಾರ ಸಂಜೆಯ ವೇಳೆಗೆ ಕಳೆಗಟ್ಟಲಿರುವ ಈ ಭರ್ಜರಿ ಫೈಟ್‌ನಲ್ಲಿ ನಮ್ಮ ತಂಡವೇ ಗೆಲ್ಲಲಿ ಎಂಬುದು ಎರಡೂ ದೇಶಗಳ ಕ್ರಿಕೆಟ್ ಪ್ರಿಯರ ಪ್ರಾರ್ಥನೆ.
ಏಷ್ಯಾ ಕಪ್ -೨೦೨೨ರ ಅತ್ಯಂತ ರೋಚಕ ಹಾಗೂ ಕೌತುಕದ ಪಂದ್ಯವಾಗಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಗುಂಪು ಹಂತದ ಪಂದ್ಯ ಆಗಸ್ಟ್ ೨೮ರಂದು ಸಂಜೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ರೋಹಿತ್ ಶರ್ಮ ನೇತೃತ್ವದ ಹೊಡೆಬಡಿಯ ದಾಂಡಿಗರನ್ನು ಹೊಂದಿರುವ ಭಾರತ ಹಾಗೂ ಸ್ವತಃ ನಂಬರ್ ಒನ್ ಬ್ಯಾಟರ್ ಆಗಿರುವ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಗೆಲುವಿಗಾಗಿ ಜಿದ್ದಿಗೆ ಬಿದ್ದು ಹೋರಾಟ ನಡೆಸಲಿವೆ.
ಎಲ್ಲದಕ್ಕಿಂತ ಮುಖ್ಯವಾಗಿ ಕಳೆದ ವರ್ಷ ಇದೇ ಸ್ಟೇಡಿಯಮ್‌ನಲ್ಲಿ ನಡೆದ ಟಿ೨೦ ವಿಶ್ವ ಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ ೧೦ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಹೀಗಾಗಿ ಟೀಮ್ ಇಂಡಿಯಾದೊಳಗೆ ಹಳೆಯ ದ್ವೇಷವೊಂದು ಬುಸುಗುಡುತ್ತಿದ್ದು, ಅದನ್ನು ಈ ಬಾರಿ ಚುಕ್ತಾ ಮಾಡುವ ಲೆಕ್ಕಾಚಾರದಲ್ಲಿ ಕಣಕ್ಕಿಳಿಯಲಿದೆ.
ವೇಗಿಗಳ ಅಲಭ್ಯತೆ ವಿಷಯ
ಜಿದ್ದಾಜಿದ್ದಿನ ಹೋರಾಟ ನಡೆಯಬಹುದ ಎಂದು ನಿರೀಕ್ಷೆ ಮಾಡಲಾಗಿರುವ ಈ ಪಂದ್ಯದಲ್ಲಿ ವೇಗದ ಬೌಲರ್‌ಗಳ ಅಲಭ್ಯತೆಯೇ ದೊಡ್ಡ ವಿಷಯ. ಅದರಲ್ಲೂ ಪಾಕಿಸ್ತಾನದ ವೇಗದ ಬೌಲರ್ ಶಾಹಿನ್ ಶಾ ಅಫ್ರಿದಿ ಅವರು ಇಲ್ಲದಿರುವುದನ್ನು ನಾನಾ ಬಗೆಯಲ್ಲಿ ಚರ್ಚಿಸಲಾಗುತ್ತಿದೆ. ಕಳೆದ ವಿಶ್ವ ಕಪ್‌ನಲ್ಲಿ ಭಾರತದ ತಂಡದ ಪ್ರಧಾನ ಮೂರು ವಿಕೆಟ್‌ಗಳನ್ನು ಕಬಳಿಸಿದ್ದ ಅವರು ಪಾಕಿಸ್ತಾನ ತಂಡದ ಗೆಲುವಿನಲ್ಲಿ ಸಿಂಹಪಾಲು ಪಡೆದುಕೊಂಡಿದ್ದರು. ಎಡ ಮೊಣಕಾಲು ನೋವಿನ ಸಮಸ್ಯೆಗೆ ಒಳಗಾಗಿರುವು ಅವರು ಈ ಬಾರಿ ಅಲಭ್ಯರಾಗಿರುವುದರಿಂದ ಭಾರತಕ್ಕೆ ಲಾಭ ಎನ್ನಲಾಗುತ್ತಿದೆ. ಆದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಯಾರೂ ಮಾತನ್ನು ಒಪ್ಪುತ್ತಿಲ್ಲ.
ಭಾರತ ತಂಡದ ಪ್ರಮುಖ ಬೌಲರ್‌ಗಳಾದ ಜಸ್‌ಪ್ರಿತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಕೂಡ ಗಾಯದ ಸಮಸ್ಯೆಯಿಂದಾಗಿ ತಂಡಕ್ಕೆ ಅಲಭ್ಯರಾಗಿದ್ದಾರೆ. ನಮ್ಮಿಬ್ಬರು ಬೌಲರ್‌ಗಳು ಇಲ್ಲದಿರುವ ಕಾರಣ ಪಾಕಿಸ್ತಾನಕ್ಕೂ ಸಾಕಷ್ಟು ಅನುಕೂಲವಾಗಲಿದೆ ಎಂಬುದು ಭಾರತದ ಕ್ರಿಕೆಟ್ ಪ್ರೇಮಿಗಳ ವಾದ.
ಪಾಕಿಸ್ತಾನ ತಂಡದಲ್ಲಿ ಹ್ಯಾರಿಸ್ ರವೂಫ್, ಹಸನ್ ಅಲಿ ಮತ್ತು ನಾಸಿಮ್ ಶಾ ಪ್ರಮುಖ ಬೌಲರ್‌ಗಳಾಗಿದ್ದ, ಅನುಭವಿ ಭುವನೇಶ್ವರ್ ಕುಮಾರ್, ಆವೇಶ್ ಖಾನ್ ಹಾಗೂ ಅರ್ಶ್‌ದೀಪ್ ಸಿಂಗ್ ಭಾರತದ ವೇಗಿಗಳು. ಸ್ಪಿನ್ ವಿಭಾಗದಲ್ಲಿ ಯಜ್ವೇಂದ್ರ ಚಹಲ್ ಮತ್ತು ರವೀಂದ್ರ ಜಡೇಜಾ ಗೆಲುವಿಗಾಗಿ ಪಣ ತೊಡಲಿದ್ದಾರೆ.
ಆಕ್ರಮಣಕಾರಿ ಭಾರತ
ಭಾರತ ಟಿ೨೦ ತಂಡ ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ಆಕ್ರಮಣಕಾರಿ ಧೋರಣೆಯೊಂದಿಗೆ ಆಡುತ್ತಿದೆ. ವಿಕೆಟ್ ಬೀಳಲಿ, ಬೀಳದೇ ಹೋಗಲಿ, ರನ್ ವೇಗ ಕುಂಠಿತವಾಗದಂತೆ ನೋಡಿಕೊಳ್ಳುತ್ತದೆ. ಮೊದಲ ಓವರ್‌ನಿಂದಲೇ ಫೋರ್, ಸಿಕ್ಸರ್‌ಗಳನ್ನು ಬಾರಿಸುವುದು ಗ್ಯಾರಂಟಿ. ಈ ಮಾದರಿಯ ಆಟದಿಂದಾಗಿ ಭಾರತ ತಂಡಕ್ಕೆ ಹೆಚ್ಚು ಲಾಭವಾಗುತ್ತಿದೆ. ಕಳೆದ ಹಲವಾರ ಪಂದ್ಯಗಳನ್ನು ಇಂಥದ್ದೇ ಅಕ್ರಮಣಕಾರಿ ಧೋರಣೆಯಿಂದ ಜಯಿಸಿದೆ. ರೋಹಿತ್ ಶರ್ಮ, ಕೆ. ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಸೇರಿದಂತೆ ಎಲ್ಲರೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಪರಾಕ್ರಮ ಮೆರೆಯುತ್ತಿರುವ ಕಾರಣ ಗೆಲುವು ನಮ್ಮದೇ ಎಂಬುದು ಭಾರತ ತಂಡದ ಅಟಗಾರರ ಲೆಕ್ಕಾಚಾರ.
ಸದ್ಯ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಎಲ್ಲ ಮೂರು ಮಾದರಿಗಳಲ್ಲಿ ಅಗ್ರ ಕ್ರಮಾಂಕ ಹೊಂದಿರುವ ಬಾಬರ್ ಅಜಮ್ ಪಾಕಿಸ್ತಾನ ತಂಡದ ಬ್ಯಾಟಿಂಗ್ ಬಲ. ಅಂತೆಯೇ ಮೊಹಮ್ಮದ್ ರಿಜ್ಞಾನ್, ಫಖರ್ ಜಮಾನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತದ ಬೌಲರ್‌ಗಳು ಈ ಮೂವರಿಗೆ ಬೇಗ ಪೆವಲಿಯನ್ ಹಾದಿ ತೋರಿದರೆ ಗೆಲುವು ಭಾರತದ್ದೆ.
ತಂಡಗಳು
ಭಾರತ : ರೋಹಿತ್ ಶರ್ಮ (ನಾಯಕ), ಕೆ ಎಲ್. ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದೀಪಕ್ ಹೂಡ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಯಜ್ವೇಂದ್ರ ಚಹಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶದಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹ್ಯಾರಿಸ್ ರವೂಫ್, ಇಫ್ತಿಕಾರ್ ಅಹಮದ್, ಖುಶ್‌ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ನಾಸಿನ್ ಶಾ, ಮೊಹಮ್ಮದ್ ಹಸ್ನೈನ್, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್.
ಪಂದ್ಯದ ವಿವರ
ಪಂದ್ಯ ಆರಂಭ ಸಮಯ : ರಾತ್ರಿ ೭.೩೦
ಸ್ಥಳ : ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಮ್ ದುಬೈ
ನೇರ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್‌ಗಳು ಹಾಗೂ ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್.
ಇತ್ತಂಡಗಳ ಏಷ್ಯಾ ಕಪ್ ಬಲಾಬಲ
ಭಾರತ ಹಾಗೂ ಪಾಕಿಸ್ತಾನ ಟಿ೨೦ ಮಾದರಿಯಲ್ಲಿ ಇದುವರೆಗೆ ೯ ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಭಾರತ ಏಳು ಬಾರಿ ಗೆದಿದ್ದರೆ ಪಾಕಿಸ್ತಾನ ತಂಡಕ್ಕೆ ಎರಡು ಜಯ ಮಾತ್ರ ಲಭಿಸಿದೆ.
Rank ಎಷ್ಟು?
ಭಾರತ ತಂಡ ಸದ್ಯ ಟಿ೨೦ Rank ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ | Asia Cup- 2022 | ಮ್ಯಾಕ್ಸ್‌ವೆಲ್ ರೀತಿ ರಿವರ್ಸ್ ಸ್ವೀಪ್ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ ವಿರಾಟ್ ಕೊಹ್ಲಿ