ಅಹಮದಾಬಾದ್: ತಿಂಗಳಾಂತ್ಯದಲ್ಲಿ ಐಪಿಎಲ್ 16ನೇ ಆವೃತ್ತಿ (IPL 2023) ಆರಂಭವಾಗಲಿದೆ. ಹೀಗಾಗಿ ಎಲ್ಲ ಫ್ರಾಂಚೈಸಿಗಳು ಮುಂದಿನ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿವೆ. ಅಂತೆಯೇ ಕಳೆದ ಬಾರಿಯ ಚಾಂಪಿಯನ್ ತಂಡ ಗುಜರಾತ್ ಟೈಟನ್ಸ್ ಹೊಸ ಜೆರ್ಸಿಯನ್ನು ಅನಾವರಣ ಮಾಡಿದೆ. ಜೆರ್ಸಿ ಅನಾವರಣ ಮಾಡಿರುವ ಸುದ್ದಿಯನ್ನು ಗುಜರಾತ್ ಟೈಟನ್ಸ್ ತಂಡ ಟ್ವೀಟ್ ಮೂಲಕ ಪ್ರಕಟಿಸಿದೆ. ಹೊಸ ಜೆರ್ಸಿಯ ವಿಡಿಯೊವನ್ನು ಕೂಡ ಅದರಲ್ಲಿ ಸೇರಿಸಿಕೊಂಡಿದೆ.
ಜೆರ್ಸಿಯ ಮೂಲಕ ವಿನ್ಯಾಸವನ್ನು ಫ್ರಾಂಚೈಸಿ ಹಾಗೆಯೇ ಉಳಿಸಿಕೊಂಡಿದೆ. ಅದೇ ರೀತಿ ಬಣ್ಣವನ್ನು ಬದಲಾಯಿಸಿಲ್ಲ. ಆದರೆ ತಂಡದ ಲೋಗೋ ಪಕ್ಕದಲ್ಲಿ ಒಂದು ಸ್ಟಾರ್ ಸೇರಿಸಿದೆ. ಈ ಮೂಲಕ ಒಂದು ಬಾರಿ ಚಾಂಪಿಯನ್ಪಟ್ಟ ಅಲಂಕರಿಸಿರುವುದನ್ನು ತೋರಿಸಿದೆ. ಗುಜರಾತ್ ಟೈಟನ್ಸ್ ತಂಡವು ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಜೆರ್ಸಿಯನ್ನು ಹೊಲಿಯುತ್ತಿರುವ ಸಂದರ್ಭವನ್ನು ತೋರಿಸಲಾಗಿದೆ. ಕೊನೆಯಲ್ಲಿ ಜಿಟಿ ತಂಡ ನಾಯಕ ಹಾರ್ದಿಕ್ ಪಾಂಡ್ಯ ಅದನ್ನು ಧರಿಸಿಕೊಂಡಿದ್ದನ್ನು ತೋರಿಸಲಾಗಿದೆ.
ಗುಜರಾತ್ ತಂಡದ ಟ್ವೀಟ್ ಇಲ್ಲಿದೆ
ನಮ್ಮ ಜೆರ್ಸಿಯಲ್ಲಿ ಸ್ಟಾರ್ ಸೇರಿಸಲು ನಮಗೆ ಹೆಮ್ಮೆಯಾಗುತ್ತಿದೆ. ಈ ಪ್ರೀತಿಯ ಜೆರ್ಸಿ ಮತ್ತೊಮ್ಮೆ ಬಂದಿದ್ದು ನಮ್ಮ ಘನತೆಯನ್ನು ಎತ್ತಿ ತೋರಿಸುತ್ತಿದೆ. ಲೈವ್ ಆಗಿ ವೀಕ್ಷಿಸಿ ಎಂದು ಬರೆದುಕೊಂಡಿದೆ.
ಇದನ್ನೂ ಓದಿ : WPL 2023 : ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್ಸಿಬಿ ಬಳಗ, ನಾಲ್ಕನೇ ಪಂದ್ಯದಲ್ಲಿ ಯುಪಿ ಎದುರಾಳಿ
ಅಭಿಮಾನಿಗಳು ಈಗಾಗಲೇ ಜೆರ್ಸಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಕಾರಣ ಬಣ್ಣವನ್ನು ಬದಲಾಯಿಸುವ ಸಾಧ್ಯತೆಗಳು ಕಡಿಮೆ ಎಂದು ಮೊದಲೇ ಹೇಳಲಾಗಿತ್ತು. ಯಾಕೆಂದರೆ ಕೆಲವು ದಿನಗಳ ಹಿಂದೆ ಲಖನೌ ಸೂಪರ್ ಜಯಂಟ್ಸ್ ತಂಡದ ತನ್ನ ಜೆರ್ಸಿಯ ಬಣ್ಣವನ್ನು ಬದಲಾಯಿಸಿದಾಗ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.