Site icon Vistara News

Women’s T20 World Cup: ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭ

icc women's t20 world cup

#image_title

ಕೇಪ್​ಟೌನ್​: ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ (ICC Women’s T20 World Cup) ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು(ಫೆ.10 ಶುಕ್ರವಾರ) ರಾತ್ರಿ ದಕ್ಷಿಣ ಆಫ್ರಿಕಾದಲ್ಲಿ ಈ ಟೂರ್ನಿಗೆ ಅಧಿಕೃತ ಚಾಲನೆ ದೊರೆಯಲಿದೆ.

ಇತ್ತೀಚೆಗಷ್ಟೇ ನಡೆದ ವನಿತೆಯರ ಚೊಚ್ಚಲ ಅಂಡರ್‌-19 ವಿಶ್ವ ಕಪ್‌ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿದ ಬೆನ್ನಲ್ಲೇ ಸೀನಿಯರ್‌ಗಳ ಟಿ20 ವಿಶ್ವ ಕಪ್‌ ಕೂಟವನ್ನು ನಿರ್ವಹಿಸಲು ದಕ್ಷಿಣ ಆಫ್ರಿಕಾ(South Africa Women) ಸಿಂಗರಿಸಿಕೊಂಡು ನಿಂತಿದೆ. ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಟೂರ್ನಿಯ ಆತಿಥ್ಯ ವಹಿಸುತ್ತಿದ್ದು ಇಂದು(ಫೆ.10 ಶುಕ್ರವಾರ) ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ(Sri Lanka Women) ತಂಡದ ಸವಾಲನ್ನು ಎದುರಿಸಲಿದೆ.

2009ರಲ್ಲಿ ಚೊಚ್ಚಲ ಮಹಿಳೆಯರ ಟಿ20 ವಿಶ್ವ ಕಪ್‌ ಆರಂಭವಾಯಿತು. ಈ ಟೂರ್ನಿಯಲ್ಲಿ ಇಂಗ್ಲೆಂಡ್​ ತಂಡ ನ್ಯೂಜಿಲ್ಯಾಂಡ್​ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿತ್ತು. ಇದಾದ ಬಳಿಕ ಆಸ್ಟ್ರೇಲಿಯಾ ತಂಡ ಪಾರುಪತ್ಯ ಮೆರೆಯಿತು 6 ಸಲ ಫೈನಲ್‌ಗೆ ಲಗ್ಗೆಯಿರಿಸಿ ಸರ್ವಾಧಿಕ 5 ಸಲ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಒಂದು ಬಾರಿ ವೆಸ್ಟ್ ಇಂಡೀಸ್​ ಕಪ್ ಗೆದ್ದಿದೆ. ಈ ಟೂರ್ನಿ​ ಭಾರತದ ಆತಿಥ್ಯದಲ್ಲಿ ನಡೆದಿತ್ತು.

10 ತಂಡಗಳ ಪೈಪೋಟಿ

8ನೇ ಆವೃತ್ತಿಯ ಐಸಿಸಿ ಮಹಿಳೆಯರ ಟಿ20 ವಿಶ್ವ ಕಪ್ ಟೂರ್ನಿಯು ಫೆಬ್ರವರಿ 10ರಿಂದ ಫೆಬ್ರವರಿ 26ರ ವರೆಗೆ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 10 ತಂಡಗಳು ಹೋರಾಟ ನಡೆಸಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿದೆ. ದಕ್ಷಿಣ ಆಫ್ರಿಕಾದ ನ್ಯೂಲ್ಯಾಂಡ್ಸ್ ಕ್ರಿಕೆಟ್ ಗ್ರೌಂಡ್ (ಕೇಪ್ ಟೌನ್), ಸೇಂಟ್ ಜಾರ್ಜ್ ಪಾರ್ಕ್ ಕ್ರಿಕೆಟ್ ಗ್ರೌಂಡ್ (ಗ್ಕೆಬರ್ಹಾ) ಮತ್ತು ಬೋಲ್ಯಾಂಡ್ ಪಾರ್ಕ್ (ಪಾರ್ಲ್). ಈ ಮೂರು ಸ್ಥಳಗಳಲ್ಲಿ ಟೂರ್ನಿಯ ಎಲ್ಲ ಪಂದ್ಯಗಳನ್ನು ಆಡಲಾಗುತ್ತದೆ.

ಟೂರ್ನಿಯ ಸ್ವರೂಪ

ಒಟ್ಟು 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಎಲ್ಲ ತಂಡಗಳು ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಿವೆ. ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಭಾರತ ಮಹಿಳಾ ತಂಡವು (India Womens Team) ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಐರ್ಲೆಂಡ್‌ನೊಂದಿಗೆ ಗುಂಪು 2ರಲ್ಲಿದೆ. ಗುಂಪು 1ರಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಸ್ಥಾನ ಪಡೆದಿದೆ.

ಭಾರತದ ಪಂದ್ಯಗಳ ವೇಳಾಪಟ್ಟಿ

ಹರ್ಮನ್​ಪ್ರೀತ್​ ಕೌರ್​ ಸಾರಥ್ಯದ ಭಾರತ ಮಹಿಳೆಯರ ತಂಡ ಫೆಬ್ರವರಿ 12ರಂದು ಪಾಕ್​ ವಿರುದ್ಧ ಮೊದಲ ಪಂದ್ಯ ಆಡಲಿದೆ. ಬಳಿಕ ಫೆಬ್ರವರಿ 15 ರಂದು ವೆಸ್ಟ್ ಇಂಡೀಸ್, ಫೆಬ್ರವರಿ 18 ರಂದು ಇಂಗ್ಲೆಂಡ್, ಫೆಬ್ರವರಿ 20 ರಂದು ಐರ್ಲೆಂಡ್ ವಿರುದ್ಧ ಸೆಣಸಾಡಲಿದೆ.

Exit mobile version