ಚೆಪಾಕ್: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಷೇತ್ರದಲ್ಲಿ ಇರುವುದಕ್ಕಿಂತ ಹೆಚ್ಚು ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಅಭಿಮಾನಿಗಳು ಇದ್ದಾರೆ. ಲಕ್ನೊ ಸೂಪರ್ ಜಯಂಟ್ಸ್ ವಿರುದ್ದದ ಪಂದ್ಯದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ಪಂದ್ಯದ ಕೊನೇ ಓವರ್ನಲ್ಲಿ ಬ್ಯಾಟ್ ಮಾಡಲು ಬಂದಿದ್ದ ಅವರು ಸತತ ಎರಡು ಸಿಕ್ಸರ್ ಬಾರಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಅವರು ಈ ಸಿಕ್ಸರ್ ಬಾರಿಸಿದ್ದು ಇಂಗ್ಲೆಂಡ್ ತಂಡದ ವೇಗದ ಬೌಲರ್ ಮಾರ್ಕ್ ವುಡ್ ಎಸೆತಕ್ಕೆ.
ಧೋನಿಯ ಆ ಎರಡು ಸಿಕ್ಸರ್ಗೆ ಕ್ರಿಕೆಟ್ ಕ್ಷೇತ್ರದಲ್ಲಿದೊಡ್ಡ ಮಟ್ಟದ ಹೊಗಳಿಕೆ ಲಭಿಸಿದೆ. ಹಲವು ಹಿರಿಯ ಕ್ರಿಕೆಟಿಗರು ಧೋನಿಯ ಸಿಕ್ಸರ್ ಬಾರಿಸುವ ಸಾಮರ್ಥ್ಯವನ್ನು ಹೊಗಳಿದ್ದರು. ವಿಶ್ವದ ಅತ್ಯಂತ ವೇಗದ ಬೌಲರ್ ಮಾರ್ಕ್‍ವುಡ್ ಅವರ ಎಸೆತಕ್ಕೆ 41 ವರ್ಷದ ಧೋನಿ ಸಿಕ್ಸರ್ ಬಾರಿಸುವುದು ದೊಡ್ಡ ಸಂಗತಿ ಎಂದೆಲ್ಲ ಬಣ್ಣಿಸಿದ್ದರು. ಏತನ್ಮಧ್ಯೆ, ಧೋನಿಯಿಂದ ದಂಡಿಕೊಂಡಿದ್ದ ಮಾರ್ಕ್ ವುಡ್ ಕೂಡ ಆ ಎರಡು ಸಿಕ್ಸರ್ಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
ನಾಯಕ ಕೆ. ಎಲ್ ರಾಹುಲ್ ಮತ್ತು ಧೋನಿಯನ್ನು ಔಟ್ ಮಾಡುವ ಬಗ್ಗೆಯೇ ಯೋಜನೆ ಹಾಕಿಕೊಂಡಿದ್ದೆವು. ಆದರೆ ನಾನು ರನ್ ನೀಡದೇ ಇರುವ ಬಗ್ಗೆ ಚಿಂತಿಸುತ್ತಿದ್ದೆ. ಆದರೆ, ಧೋನಿ ನಮ್ಮ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದರು. ಅದರಲ್ಲೂ ಅವರು ಬಾರಿಸಿದ ಎರಡನೇ ಸಿಕ್ಸರ್ ಮಾತ್ರ ಅದ್ಭುತ. ನಾವು ವೈಡ್ ಮೂಲಕ ಚೆಂಡನ್ನು ಬೌನ್ಸ್ ಮಾಡುವ ಯೋಜನೆ ರೂಪಿಸಿಕೊಂಡಿದ್ದೆವು. ಆದರೆ ಧೋನಿ ಅದ್ಭುತ ಹೊಡೆತದ ಮೂಲಕ ಅದನ್ನು ಸಿಕ್ಸರ್ಗೆ ಅಟ್ಟಿದರು ಎಂದು ಮಾರ್ಕ್ ವುಡ್ ಹೇಳಿದ್ದಾರೆ.
ಚೆಪಾಕ್ ಸ್ಟೇಡಿಯಮ್ನಲ್ಲಿ ನನ್ನ ಎಸೆತಕ್ಕೆ ಧೋನಿ ಸಿಕ್ಸರ್ ಬಾರಿಸುವ ವೇಳೆ ಬ್ಯಾಟ್ನಿಂದ ಹೊರ ಬಂದ ಸದ್ದು ನಾನು ಇದುವರೆಗೆ ನಾನು ಆಲಿಸಿದ ಅತ್ಯಂತ ಪ್ರಭಾವಶಾಲಿ ಸದ್ದು ಎಂಬುದಾಗಿಯೂ ಮಾರ್ಕ್‍ವುಡ್ ಹೇಳಿದ್ದಾರೆ.
ಮಾರ್ಕ್‍ವುಡ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಪಡೆದಿದ್ದರು. ಅದೇ ರೀತಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ಉರುಳಿಸಿದ್ದರು. ಮೊದಲ ಪಂದ್ಯದಲ್ಲಿ ಲಕ್ನೊ ತಂಡ ವಿಜಯ ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲು ಕಂಡಿತ್ತು.
ಜಿಯೊ ಸಿನಿಮಾದಲ್ಲಿ ಧೋನಿ ದಾಖಲೆ
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ಸೋಮವಾರ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್(IPL 2023) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಸಿಡಿಸಿದ ಅವಳಿ ಸಿಕ್ಸರ್‌ಗಳು ಜಿಯೋ ಸಿನಿಮಾದಲ್ಲಿ(JioCinema) 1.7 ಕೋಟಿ ವೀಕ್ಷಣೆ ಕಾಣುವ ಮೂಲಕ ನೂತನ ದಾಖಲೆ ನಿರ್ಮಿಸಿದೆ.
16ನೇ ಆವೃತ್ತಿಯ ಐಪಿಎಲ್ನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಬ್ಯಾಟಿಂಗ್‍ನಲ್ಲಿ ಅಬ್ಬರಿಸಿದ್ದ ಧೋನಿ ಆಟವನ್ನು ಜಿಯೋ ಸಿನಿಮಾದಲ್ಲಿ 1.6 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಜಿಯೋ ಸಿನಿಮಾದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿದ್ದ ಪಂದ್ಯವಾಗಿತ್ತು. ಆದರೆ ಈಗ ಈ ದಾಖಲೆ ಮುರಿದಿದೆ.
ಲಕ್ನೋ ವಿರುದ್ಧದ ಪಂದ್ಯದ ಅಂತಿಮ ಓವರ್ನಲ್ಲಿ ಕ್ರೀಸ್‍ಗೆ ಆಗಮಿಸಿದ ಧೋನಿ ಎದುರಾಳಿ ತಂಡದ ವೇಗಿ ಮಾರ್ಕ್‍ವುಡ್ ಎಸೆದ 3 ಎಸೆತಗಳಿಗೆ ಎರಡು ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ನ ವೀಡಿಯೊ ಜಿಯೋ ಸಿನಿಮಾದಲ್ಲಿ 1.7 ಕೋಟಿ ವೀಕ್ಷಣೆ ಕಂಡಿದೆ.
ಇದನ್ನೂ ಓದಿ IPL 2023: ಗುಜರಾತ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಡೆಲ್ಲಿ ಕ್ಯಾಪಿಟಲ್ಸ್
5 ಸಾವಿರ ರನ್ ಪೂರೈಸಿದ ಧೋನಿ
ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಎಂಟು ರನ್ ಬಾರಿಸಿದ ತಕ್ಷಣ ಐಪಿಎಲ್ನಲ್ಲಿ 5000 ರನ್ಗಳನ್ನು ಬಾರಿಸಿದ ದಾಖಲೆ ಮಾಡಿದರು. ಪಂದ್ಯದಲ್ಲಿ ಅವರು 12 ರನ್ ಬಾರಿಸಿರುವ ಕಾರಣ ಅವರ ಒಟ್ಟು ಗಳಿಕೆ 5004ಕ್ಕೆ ಏರಿದೆ. ಅವರೀಗ ಈ ಮೈಲುಗಲ್ಲು ಸ್ಥಾಪಿಸಿದ ಏಳನೇ ಆಟಗಾರ ಎನಿಸಿಕೊಂಡಿದ್ದಾರೆ.
ಧೋನಿಗಿಂತ ಮೊದಲು ವಿರಾಟ್ ಕೊಹ್ಲಿ, ಶಿಖರ್ ಧವನ್, ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ಸುರೇಶ್ ರೈನಾ ಹಾಗೂ ಎಬಿಡಿ ವಿಲಿಯರ್ಸ್ ಐದು ಸಾವಿರ ರನ್ಗಳ ದಾಖಲೆ ಮಾಡಿದ್ದರು. ಇದೀಗ ರೋಹಿತ್ ಶರ್ಮಾ ಶೀ ದಾಖಲೆ ಮಾಡಿದ ಐದನೇ ಭಾರತೀಯ ಬ್ಯಾಟರ್. ಐಪಿಎಲ್ನಲ್ಲಿ 5000 ರನ್ಗಳ ಗಡಿ ದಾಟಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ 224 ಪಂದ್ಯಗಳಲ್ಲಿ ಆಡಿದ್ದು, 5 ಶತಕ ಹಾಗೂ 45 ಅರ್ಧ ಶತಕಗಳ ನೆರವಿನಿಂದ 6706 ರನ್ ಬಾರಿಸಿದ್ದಾರೆ.