ಬೆಂಗಳೂರು: ಐಪಿಎಲ್ 16ನೇ ಆವೃತ್ತಿಯ (IPL 2023) ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ 81 ರನ್ ಹೀನಾಯ ಸೋಲಿಗೆ ಒಳಗಾಗಿದೆ. ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ ತಂಡ ಆರಂಭದಲ್ಲಿ ಹಿಡಿತ ಸಾಧಿಸಿಕೊಂಡಿತ್ತು. 89 ರನ್ಗಳಿಗೆ ಅಗ್ರ ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ಎದುರಾಳಿ ತಂಡದ ರನ್ ವೇಗಕ್ಕೆ ನಿಯಂತ್ರಣ ಹಾಕಿತ್ತು. ಆದರೆ, ಡೆತ್ ಓವರ್ನಲ್ಲಿ ಅತ್ಯಂತ ಕೆಟ್ಟದಾಗಿ ಬೌಲಿಂಗ್ ಮಾಡಿತು. ಶಾರ್ದುಲ್ ಠಾಕೂರ್ಗೆ ಸರಿಯಾಗಿ ಬೌಲಿಂಗ್ ಮಾಡಲಾಗದೇ ದಂಡಿಸಿಕೊಂಡಿತು. ಸಿರಾಜ್ ಹಾಗೂ ಹರ್ಷಲ್ ಪಟೇಲ್ ಅವರಂಥ ಅನುಭವಿ ಬೌಲರ್ಗಳು ಬೇಕಾಬಿಟ್ಟಿ ರನ್ ಬಿಟ್ಟುಕೊಟ್ಟರು. ಪರಿಣಾಮವಾಗಿ ಕೋಲ್ಕೊತಾ ತಂಡ 200ಕ್ಕೂ ಅಧಿಕ ರನ್ ಪೇರಿಸಿತು.
ಕೆಕೆಆರ್ ತಂಡ ಕೊನೇ ಎಂಟು ಓವರ್ಗಳಲ್ಲಿ 110 ರನ್ ಬಾರಿಸಿರುವುದು ಆರ್ಸಿಬಿಯ ಬೌಲಿಂಗ್ ದೌರ್ಬಲ್ಯಕ್ಕೆ ಸಾಕ್ಷಿ ನೀಡಿತು. ಇದರಿಂದ ಬ್ಯಾಟರ್ಗಳಿಗೆ ದೊಡ್ಡ ಮೊತ್ತವನ್ನು ಪೇರಿಸುವ ಸವಾಲು ಎದುರಾಯಿತು. ಈಗಿನ ಕ್ರಿಕೆಟ್ ಪರಿಸ್ಥಿತಿಯಲ್ಲಿ ಅದೇನೂ ದೊಡ್ಡ ಮೊತ್ತವಾಗಿರಲಿಲ್ಲ. ವಿರಾಟ್ ಕೊಹ್ಲಿ, ಪ್ಲೆಸಿಸ್, ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್, ಬ್ರೇಸ್ವೆಲ್ ಅವರಂಥ ಬ್ಯಾಟರ್ಗಳಿರುವ ತಂಡಕ್ಕೆ ದೊಡ್ಡ ಸವಾಲು ಆಗಿರಲಿಲ್ಲ. ಎಲ್ಲರೂ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ ಸೋಲುಂಟಾಯಿತು. ಈ ಕುರಿತು ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಬೇಸರ ವ್ಯಕ್ರಪಡಿಸಿದ್ದಾರೆ. ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಲವನ್ನೇ ನೆಚ್ಚಿಕೊಂಡಿದ್ದರೆ ನಿಮ್ಮ ತಂಡ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಆರಂಭಿಕ ಬ್ಯಾಟರ್ಗಳಾದ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿಯನ್ನು ನೆಚ್ಚಿಕೊಂಡಿದ್ದರೆ ತಂಡ ಗೆಲ್ಲುತ್ತದೆ ಉಳಿದ ಆಟಗಾರರು ಅಂದುಕೊಳ್ಳಬಾರದು. ಗ್ಲೆನ್ ಮ್ಯಾಕ್ಸ್ವೆಲ್ ಕೂಡ ರನ್ ಬಾರಿಸಬೇಕು. ದಿನೇಶ್ ಕಾರ್ತಿಕ್ ಕೂಡ ರನ್ ಪೇರಿಸಬೇಕು. ಉಳಿದವರು ಕೂಡ ತಮ್ಮ ಕೊಡುಗೆಗಳನ್ನು ಕೊಡಬೇಕು. ಇಂಪ್ಯಾಕ್ಟ್ ಪ್ಲೇಯರ್ ಮೂಲಕ ತಂಡಕ್ಕೆ ಸೇರ್ಪಡೆಗೊಂಡ ಅನುಜ್ ರಾವತ್ ಕೂಡ ಸಿಡಿದೇಳಬೇಕು. ಅದೇ ರೀತಿ ಆರ್ಸಿಬಿ ತಂಡವೂ ತಮಗಿರುವ ಅತ್ಯುತ್ತಮ ಅವಕಾಶಗಳತ್ತ ಕೈ ಚಾಚಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.
ರಜತ್ ಅಲಭ್ಯತೆ ಪ್ರಭಾವ
ರಜತ್ ಪಾಟೀದಾರ್ ಅಲಭ್ಯತೆಯೂ ಆರ್ಸಿಬಿ ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ ಎಂಬುದಾಗಿ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಆವೃತ್ತಿಯಲ್ಲಿ ರಜತ್ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ್ದರು. ಅವರು ಶತಕ ಬಾರಿಸುವ ಜತೆಗೆ ತಂಡದ ಗೆಲುವಿಗೆ ತಮ್ಮ ಕೊಡುಗೆ ಕೊಟ್ಟಿದ್ದರು. ಈ ಬಾರಿ ಗಾಯದ ಸಮಸ್ಯೆಯಿಂದ ಆಡದೇ ಇರುವುದು ತಂಡದ ಹಿನ್ನೆಡೆಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Virender Sehwag: ನಾಯಕತ್ವ ನೀಡುವುದಾಗಿ ನಂಬಿಕೆ ದ್ರೋಹ; ಸೆಹ್ವಾಗ್ ಸ್ಫೋಟಕ ಹೇಳಿಕೆ
ಇದೇ ವೇಳೆ ಸೆಹ್ವಾಗ್, ಟೂರ್ನಿಯ ಅರಂಭದಲ್ಲಿ ಕೆಲವೊಂದು ತಂಡಗಳು ಇಂಥ ಪ್ರದರ್ಶನಗಳನ್ನು ಕಾಣುತ್ತವೆ. ತಂಡದ ಸಮತೋಲನ ಉತ್ತಮವಾಗದೇ ಇರುವುದು ಅದಕ್ಕೆ ಕಾರಣ. ಆರ್ಸಿಬಿಗೆ ತಿರುಗಿ ಬೀಳುವ ಎಲ್ಲ ಅವಕಾಶಗಳಿವೆ ಎಂದು ಅವರು ಹೇಳಿದ್ದಾರೆ.
ಎಲ್ಲ ತಂಡಗಳೂ ಇಂಥ ಪರಿಸ್ಥಿತಿಯನ್ನು ಎದುರಿಸುತ್ತವೆ. ಐಪಿಎಲ್ ಇತಿಹಾಸದಲ್ಲಿ ಇಂಥ ಹಲವಾರು ಉದಾಹರಣೆಗಳಿವೆ. ಕೆಲವೊಂದು ತಂಡಗಳು ಆರಂಭದಲ್ಲಿ ಇಂಥ ಪರಿಸ್ಥಿತಿಯನ್ನು ಎದುರಿಸಿದರೆ ಕೊನೇ ಹಂತದಲ್ಲಿ ಇನ್ನಲವು ತಂಡಗಳು ಇಂಥ ಪರಿಸ್ಥಿತಿ ಎದುರಿಸುತ್ತವೆ. ಆರ್ಸಿಬಿಗೆ ಎರಡನೇ ಪಂದ್ಯದಲ್ಲಿ ಈ ಸ್ಥಿತಿ ಎದುರಾಗಲಿದೆ. ಹೀಗಾಗಿ ಅವರಿಗೆ ಮುಂದಿನ ಪಂದ್ಯದಲ್ಲಿ ಸುಧಾರಿಸಿಕೊಳ್ಳುವುದಕ್ಕೆ ಅವಕಾಶವಿದೆ. ಇನ್ನು ಯೋಚನೆ ಮಾಡುವುದಕ್ಕೆ ಯಾವುದೇ ಅವಕಾಶ ಇಲ್ಲ. ತಕ್ಷಣವೇ ಸುಧಾರಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.