ನವದೆಹಲಿ : ಐಪಿಎಲ್ 16ನೇ ಆವೃತ್ತಿಯ 43ನೇ ಪಂದ್ಯ ಫಲಿತಾಂಶಕ್ಕಿಂತ ಜಗಳದ ಮೂಲಕವೇ ಪ್ರಖ್ಯಾತಿ ಪಡೆದಿದೆ. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ಗಲಾಟೆಯಿಂದಲೇ ಕ್ರಿಕೆಟ್ ಕಾರಿಡಾರ್ನಲ್ಲಿ ಜೋರು ಚರ್ಚೆಗೆ ಕಾರಣವಾಗಿದೆ. ಕೆಲವರು ಗಂಭೀರ್ ಪರ ನಿಂತರೆ ಬಹುತೇಕ ಅಭಿಮಾನಿಗಳು ವಿರಾಟ್ ಕೊಹ್ಲಿಯ ಪರವಾಗಿ ನಿಂತಿದ್ದಾರೆ. ಇನ್ನು ತ್ರಿಕೋನ ಸ್ಪರ್ಧೆಯಂತೆ ನವೀನ್ ಉಲ್- ಹಕ್ ಕೂಡ ಈ ಜಗಳದಲ್ಲಿ ತನ್ನ ಪಾಲು ಎಲ್ಲಿ ಎಂಬಂತೆ ಕೊಹ್ಲಿ ವಿರುದ್ಧ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ ಗಲಾಟೆಯ ಬಗ್ಗೆ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸಿಂಗ್ ಇದು ನಾಚಿಕೆಗೇಡಿನ ವಿಷಯ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಭಜಿ ಖ್ಯಾತಿಯ ಹರ್ಭಜನ್ ಸಿಂಗ್, 2008ರಲ್ಲಿನ ಶ್ರೀಶಾಂತ್ ವಿರುದ್ಧ ಬಲಪ್ರಯೋಗ ಮಾಡಿದ ಘಟನೆ ನೆನೆದುಕೊಂಡರೆ ನನಗೆ ಈಗಲೂ ನಾಚಿಕೆಯಾಗುತ್ತದೆ. ವಿರಾಟ್ ಕೊಹ್ಲಿ ದಂತಕತೆ, ವಿಶ್ವ ವಿಖ್ಯಾತಿ ಪಡೆದ ಕ್ರಿಕೆಟರ್. ಅವರು ಇಂಥ ಸಣ್ಣಪುಟ್ಟ ವಿಚಾರದಲ್ಲಿ ಕಾಣಿಸಿಕೊಳ್ಳಭಾರದು ಎಂದು ಹೇಳಿದ್ದಾರೆ. ಅಲ್ಲದೆ, ಅಂದಹಾಗೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ನಡೆದ ಈ ಪ್ರಸಂಗವೇ ಅನಪೇಕ್ಷಿತ ಎಂದು ಹೇಳಿದ್ದಾರೆ.
2008ರಲ್ಲಿ ಹರ್ಭಜನ್ ಸಿಂಗ್ ಐಪಿಎಲ್ ಪಂದ್ಯ ಮುಗಿದ ಬಳಿಕ ತಮ್ಮನ್ನು ಕಿಚಾಯಿಸಿದ್ದ ಶ್ರೀಶಾಂತ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಈ ವಿಚಾರ ದೊಡ್ಡ ಚರ್ಚಗೆ ಕಾರಣವಾಗಿತ್ತು. ಹರ್ಭಜನ್ ಸಿಂಗ್ ದಂಡನೆಗೂ ಒಳಗಾಗಿದ್ದರು.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಹರ್ಭಜನ್, ಈ ಗಲಾಟೆ ಕಾರಣ ಯಾರೆಂಬ ಚರ್ಚೆ ನಡೆಯುತ್ತಿದೆ. ವಿರಾಟ್ ಕೊಹ್ಲಿ ಅಥವಾ ಗೌತಮ್ ಗಂಭೀರ್ ಅಥವಾ ನವೀನ್ ಉಲ್ ಹಕ್ ಇವರಲ್ಲಿ ಯಾರದು ತಪ್ಪು ಎಂಬ ಬಗ್ಗೆ ವಿಶ್ಲೇಷಣೆ ಆರಂಭಗೊಂಡಿವೆ.. ಪಂದ್ಯದ ವೇಳೆ ಸಾಕಷ್ಟು ಮಾತಿನ ಚಕಮಕಿ ನಡೆದಿದೆ, ಅದರಲ್ಲೂ ವಿಶೇಷವಾಗಿ ಆಟಗಾರರ ಹಸ್ತಲಾಘವ ಸಂದರ್ಭದಲ್ಲಿಯೂ ಮಾತಿಗೆ ಮಾತು ಬೆಳೆದಿದೆ. ಇವೆಲ್ಲವೂ ಉತ್ತಮ ಬೆಳವಣಿಗೆ ಅಲ್ಲ ಎಂದು ಅವರು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಒಂದೇ ನಗರದವರು. ವಿಶ್ವ ಕಪ್ ಗೆದ್ದ ತಂಡದಲ್ಲಿ ಇಬ್ಬರೂ ಜೊತೆಯಾಗಿದ್ದರು. ಇವರಿಬ್ಬರೂ ಜೊತೆಯಾಗಿ ಕ್ರಿಕೆಟ್ ಪ್ರೇಮಿಗಳಿಗೆ ಪ್ರೀತಿ ಹಂಚಬೇಕು. ಅದು ಬಿಟ್ಟು ಜಗಳವಾಡಬಾರದು ಎಂದು ಹೇಳಿದ್ದಾರೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ 2013ರಲ್ಲಿ ನಡೆದಿದ್ದ ಪಂದ್ಯದಲ್ಲಿ ಐಪಿಎಲ್ ಪಂದ್ಯದ ವೇಳೆ ಕೊಹ್ಲಿ ಮತ್ತು ಗಂಭೀರ್ ನಡುವೆ ಗಲಾಟೆ ಆರಂಭವಾಗಿತ್ತು. ಅಲ್ಲಿಂದ ಅವರ ಜಿದ್ದು ಮುಂದುವರಿದಿತ್ತು. ಗೌತಮ್ ಗಂಭೀರ್ ನಡುವಣ ಬಾಂಧವ್ಯ ಹದಗೆಟ್ಟಿತ್ತು. ಅದು ಈಗ ಇನ್ನಷ್ಟು ಕೆರಳಿದೆ.
ಈ ಬಗ್ಗೆಯೂ ಮಾತನಾಡಿದ ವಿರಾಟ್ ಕೊಹ್ಲಿ, ನೀವು ಪಂದ್ಯದ ಹೈಲೈಟ್ಸ್ ನೋಡಿದರೆ ಎಲ್ಲರೂ ತಿಳಿಯುತ್ತದೆ. ಅವರಿಬ್ಬರ ನಡುವೆ ಸ್ಪರ್ಧಾತ್ಮಕ ಪೈಪೋಟಿಗಿಂತ ಮಿಗಿಲಾಗಿ ವೈಯಕ್ತಿಕ ಜಿದ್ದು ಕಂಡು ಬರುತ್ತದೆ. ಇದಕ್ಕೆಲ್ಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗಲಾಟೆಯೇ ಕಾರಣ. ಅಲ್ಲಿಂದ ಅವರು ಉತ್ತಮ ಬಾಂಧವ್ಯ ಹೊಂದಿಲ್ಲ ಎಂಬುದಾಗಿ ಹರ್ಭಜನ್ ಸಿಂಗ್ ಹೇಳಿದ್ದಾರೆ.