ಅಹಮದಾಬಾದ್: ಭಾರತ ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಅವರನ್ನು ಮಾಜಿ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಕುಸ್ತಿಪಟು ದಿ ಗ್ರೇಟ್ ಖಲಿ(The Great Khali) ಅವರು ಅಹಮದಾಬಾದ್‌ನಲ್ಲಿ ಭೇಟಿಯಾಗಿದ್ದಾರೆ. ಈ ಫೋಟೊವನ್ನು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಇದೇ ವೇಳೆ ಖಲಿ, ಭಾರತ ವಿಶ್ವಕಪ್(icc world cup 2023) ಗೆಲ್ಲಲಿ ಎಂದು ಹಾರೈಸಿದ್ದಾರೆ.
ಭಾರತ ಕಪ್ ಗೆಲ್ಲಬೇಕು
ಅಕ್ಟೋಬರ್ 4ರಂದು ಅಹಮದಾಬಾದ್‌ನಲ್ಲಿ ನಡೆದ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮದ ವೇಳೆ ಖಲಿ, ರೋಹಿತ್ ಅವರನ್ನು ಭೇಟಿಯಾಗಿದ್ದರು. ಅಪ್ಪಟ್ಟ ಕ್ರಿಕೆಟ್ ಪ್ರೇಮಿಯಾಗಿರುವ ಖಲಿ ಅಕ್ಟೋಬರ್ 14ರಂದು ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲಬೇಕು ಮತ್ತು ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಬೇಕು ಎಂದು ಟೀಮ್ ಇಂಡಿಯಾಕ್ಕೆ ಹಾರೈಸಿದ್ದಾರೆ. ಕೆಲ ಕಾಲ ಅವರು ಕ್ರಿಕೆಟ್ ಆಡಿರುವ ವಿಡಿಯೊ(viral video) ಕೂಡ ವೈರಲ್ ಆಗಿದೆ.
ಭಾರತವು ತನ್ನ ಕ್ರಿಕೆಟ್ ವಿಶ್ವಕಪ್ 2023ರ ಅಭಿಯಾನವನ್ನು ಇಂದು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಈ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. 5 ಬಾರಿಯ ಆಸೀಸ್ ಕೂಡ ಬಲಿಷ್ಠವಾಗಿರುವ ಕಾರಣ ಇತ್ತಂಡಗಳ ಕಾದಾಟ ಹೈವೋಲ್ಟೇಜ್ನಿಂದ ಕೂಡಿರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ಪಂದ್ಯಕ್ಕೆ ಬಿಸಿಸಿಐ ಮತ್ತೆ 14,000 ಸಾವಿರ ಟಿಕೆಟ್‌ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಪಂದ್ಯದ ಟಿಕೆಟ್ಗಳು ಇಂದು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾಗುತ್ತದೆ. ಕ್ರಿಕೆಟ್ ಅಭಿಮಾನಿಗಳು ಅಧಿಕೃತ ಟಿಕೆಟ್ ವೆಬ್ಸೈಟ್ https://tickets.cricketworldcup.com ನಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ. ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳ ನಡುವಿನ ಈ ಕಾದಾಟವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.
ಪಾಕಿಸ್ತಾನ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿದೆ. ಇದಕ್ಕೂ ಮುನ್ನ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಕೊನೆಯ ಬಾರಿ ಪಾಕ್ ತಂಡ ಭಾರತಕ್ಕೆ ಬಂದಿತ್ತು. ಮುಂಬಯಿ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡುವುದನ್ನು ನಿಲ್ಲಿಸಿದೆ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
ಉಭಯ ವಿಶ್ವಕಪ್ ತಂಡಗಳು
ಪಾಕಿಸ್ತಾನ: ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಇಮಾಮ್ ಉಲ್ ಹಕ್, ಫಕಾರ್ ಜಮಾನ್, ಇಫ್ತಿಕಾರ್ ಅಹ್ಮದ್, ಮೊಹಮ್ಮದ್ ನವಾಜ್, ಶದಾಬ್ ಖಾನ್, ಹಸನ್ ಅಲಿ, ಹ್ಯಾರೀಸ್ ರಾವುಫ್, ಮೊಹಮ್ಮದ್ ವಾಸಿಂ, ಶಹೀನ್ ಅಫ್ರಿಧಿ, ಸೌದ್ ಶಕೀಲ್, ಸಲ್ಮಾನ್ ಅಲಿ ಆಘಾ, ಉಸ್ಮಾನ್ ಮೀರ್, ಅಬ್ದುಲ್ಲಾ ಶಫೀಕ್
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.