Site icon Vistara News

INDvsNZ T20 | ಭಾರತದ ದ್ವಿಶತಕದ ಸಾಧಕರಿಂದ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಪಂದ್ಯದಲ್ಲಿ ಇನಿಂಗ್ಸ್​ ಆರಂಭ!

Rohit sharma

ರಾಂಚಿ : ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯ (INDvsNZ T20) ಮೊದಲ ಪಂದ್ಯದಲ್ಲಿ ವಿಕೆಟ್​ಕೀಪರ್​ ಬ್ಯಾಟರ್​ ಇಶಾನ್​ ಕಿಶನ್​ ಅವಕಾಶ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಲಿದ್ದಾರೆ. ಅತ್ತ ಉತ್ತಮ ಫಾರ್ಮ್​ನಲ್ಲಿರುವ ಶುಭ್​​ಮನ್​ ಗಿಲ್​ ಕೂಡ ಆರಂಭಿಕರಾಗಿ ಬ್ಯಾಟ್​ ಮಾಡುತ್ತಾರೆ ಎಂಬುದಾಗಿ ನಾಯಕ ಹಾರ್ದಿಕ್ ಪಾಂಡ್ಯ ಘೋಷಿಸಿದ್ದಾರೆ. ಈ ಮೂಲಕ ಭಾರತ ತಂಡದ ಪರ ಏಕ ದಿನ ಮಾದರಿಯಲ್ಲಿ ದ್ವಿ ಶತಕದ ಸಾಧನೆ ಮಾಡಿದ ಇಬ್ಬರು ಇನಿಂಗ್ಸ್​ ಆರಂಭಿಸಿದಂತಾಗುತ್ತದೆ.

ಇಶಾನ್​ ಕಿಶನ್​ ಬಾಂಗ್ಲಾದೇಶ ಪ್ರವಾಸದಲ್ಲಿ 131 ಎಸೆತಗಳಲ್ಲಿ 210 ರನ್​ ಬಾರಿಸಿದ್ದರು. ಶುಬ್ಮನ್ ಗಿಲ್​ ನ್ಯೂಜಿಲ್ಯಾಂಡ್​ ವಿರುದ್ಧದ ಏಕ ದಿನ ಸರಣಿಯಲ್ಲಿ 208 ರನ್ ಬಾರಿಸಿದ್ದಾರೆ. ಇಬ್ಬರೂ ಉತ್ತಮ ಫಾರ್ಮ್​ನಲ್ಲಿ ಇರುವ ಕಾರಣ ಅವರಿಗೆ ಆರಂಭಿಕರಾಗಿ ಬ್ಯಾಟ್​ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಇಶಾನ್ ಕಿಶನ್​ ಸೇರ್ಪಡೆಯಿಂದಾಗಿ ಅವಕಾಶಕ್ಕಾಗಿ ಕಾಯುತ್ತಿದ್ದ ಪೃಥ್ವಿ ಶಾ ಅವರಿಗೆ ನಿರಾಸೆಯಾಗಿದೆ. ಇಶಾನ್​ಗೆ ಅವಕಾಶ ನೀಡದೇ ಹೋಗಿದ್ದರೆ ಪೃಥ್ವಿ ಶಾ ತಂಡಕ್ಕೆ ಸೇರ್ಪಡೆಯಾಗುತ್ತಿದ್ದರು.

ಜಾರ್ಖಂಡ್​ ಇಶಾನ್​ ಕಿಶನ್​ ಅವರ ತವರೂರು. ಧೋನಿಯಂತೆ ಅವರು ಕೂಡ ಜೆಎಸ್​ಸಿಎ ಇಂಟರ್​ನ್ಯಾಷನಲ್​ ಸ್ಟೇಡಿಯಮ್​ ಕಾಂಪ್ಲೆಕ್ಸ್​ನಲ್ಲಿ ಆಡಿದವರು. ತವರಿನಲ್ಲಿ ಅವರಿಗೆ ಮಿಂಚುವ ಅವಕಾಶ ಇರುವ ಕಾರಣ ಆಡುವ 11ರ ಬಳಗದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಇದನ್ನೂ ಓದಿ : IND VS NZ | ಇದು ಕ್ರಿಕೆಟ್​ ಅಲ್ಲ, ಇಶಾನ್​ ಕಿಶನ್​ಗೆ ಸುನೀಲ್​ ಗವಾಸ್ಕರ್​ ಎಚ್ಚರಿಕೆ ನೀಡಿದ್ದು ಏಕೆ?

ಭಾರತ ತಂಡದ ಪರವಾಗಿ ದ್ವಿ ಶತಕದ ಸಾಧಕರು ಇನಿಂಗ್ಸ್​ ಆರಂಭ ಮಾಡುವುದು ಇದೇ ಮೊದಲಲ್ಲ. ಏಕ ದಿನ ಸರಣಿ ಪಂದ್ಯಗಳಲ್ಲಿ ರೋಹಿತ್​ ಶರ್ಮ ಹಾಗೂ ಶುಬ್ಮನ್ ಗಿಲ್​ ಇನಿಂಗ್ಸ್​ ಆರಂಭ ಮಾಡಿದಾಗಲೂ ಇದೇ ದಾಖಲೆ ಸೃಷ್ಟಿಯಾಗಿತ್ತು.

Exit mobile version