ಕ್ಯಾಂಡಿ: ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಏಷ್ಯಾಕಪ್(Asia Cup 2023) ಪಂದ್ಯ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅಲ್ಲದೆ ಇತ್ತಂಡಗಳು ಈ ಪಂದ್ಯಕ್ಕಾಗಿ ಹಲವು ರಣತಂತ್ರಗಳನ್ನು ರೂಪಿಸಿದೆ. ಆದರೆ ಭಾರತ ತಂಡದ ಪಾಲಿಗೆ ಸೆಪ್ಟೆಂಬರ್ ತಿಂಗಳು ಅನ್ಲಕ್ಕಿಯಾದಂತೆ ತೋರುತ್ತಿದೆ. ಅದರಲ್ಲೂ ಪಾಕ್ ವಿರುದ್ಧದ ಪಂದ್ಯ. ಅಂಕಿ ಅಂಶವೂ ಇದನ್ನೇ ಹೇಳುತ್ತದೆ. ಇದಕ್ಕೆ ಸೂಕ್ತ ನಿದರ್ಶನವೊಂದು ಇಲ್ಲಿದೆ.
ಅಂಕಿ ಅಂಶ ಭವಿಷ್ಯ ಹೇಗಿದೆ?
ಕಳೆದ ವರ್ಷ ಭಾರತ ತಂಡ ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳನ್ನು ಆಡಿತ್ತು. ಮೊದಲ ಪಂದ್ಯವನ್ನು ಆಗಸ್ಟ್ 28ನೇ ತಾರಿಕಿನಂದು ಆಡಿತ್ತು. ಇದು ಇತ್ತಂಡಗಳ ಮೊದಲ ಲೀಗ್ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಭಾರತ 5 ವಿಕೆಟ್ಗಳಿಂದ ಪಾಕ್ಗೆ ಸೋಲುಣಿಸಿತ್ತು. ಹಾರ್ದಿಕ್ ಪಾಂಡ್ಯ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಸೂಪರ್-4 ಪಂದ್ಯದಲ್ಲಿ ತಿರುಗಿ ಬಿದ್ದ ಪಾಕಿಸ್ತಾನ 5 ವಿಕೆಟ್ಗಳಿಂದ ಗೆದ್ದು ಭಾರತದ ಪೈನಲ್ ಕನಸನ್ನು ನುಚ್ಚುನೂರು ಮಾಡಿತ್ತು. ಈ ಪಂದ್ಯ ನಡೆದದ್ದು ಸೆಪ್ಟೆಂಬರ್ 4ರಂದು. ಹೀಗಾಗಿ ಸೆಪ್ಟೆಂಬರ್ ತಿಂಗಳು ಪಾಕ್ ವಿರುದ್ಧ ಭಾರತಕ್ಕೆ ಅನ್ಲಕ್ಕಿಯಾಗಿದೆ.
ಭವಿಷ್ಯ ಸುಳ್ಳು ಮಾಡುವುದೇ ಟೀಮ್ ಇಂಡಿಯಾ
ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕ್ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಅಲ್ಲದೆ ಭಾರತ ಎಲ್ಲ ಪಂದ್ಯಗಗಳನ್ನು ಸೆಪ್ಟೆಂಬರ್ ತಿಂಗಳಲ್ಲೇ ಆಡುತ್ತಿದೆ. ಹೀಗಾಗಿ ಭಾರತದ ಪಾಲಿಗೆ ಅನ್ಲಕ್ಕಿಯಾದ ಸೆಪ್ಟೆಂಬರ್ ತಿಂಗಳನ್ನು ಈ ಬಾರಿ ಲಕ್ಕಿಯಾಗಿ ಪರಿವರ್ತಿಸಲಿದೆಯೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ Asia Cup 2023: ಭಾರತ-ಪಾಕ್ ಏಷ್ಯಾಕಪ್ ಇತಿಹಾಸವೇ ಬಲು ರೋಚಕ
ಮೂರು ಬಾರಿ ಮುಖಾಮುಖಿ ಸಾಧ್ಯತೆ
ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಮೊದಲನೆಯದಾಗಿ ಉಭಯ ತಂಡಗಳ ನಡುವಿನ ಪೈಪೋಟಿ ಲೀಗ್ ಸುತ್ತಿನಲ್ಲಿ ನಡೆಯಲಿದೆ. ಇದಾದ ಬಳಿಕ ಸೂಪರ್-4 ಸುತ್ತಿನಲ್ಲೂ ಉಭಯ ತಂಡಗಳು ಸೆಣಸಬಹುದು. ಬಳಿಕ ಅಂಕಪಟ್ಟಿಯಲ್ಲಿ ಉಭಯ ತಂಡಗಳು ಅಗ್ರ ಎರಡು ಸ್ಥಾನ ಪಡೆದರೆ, ಎರಡೂ ತಂಡಗಳು ಫೈನಲ್ನಲ್ಲೂ ಹೋರಾಟ ನಡೆಸಲಿವೆ. ಹೀಗಾದರೆ 15 ದಿನಗಳ ಅಂತರದಲ್ಲಿ ಮೂರು ಪಂದ್ಯಗಳನ್ನು ಆಡಿದಂತಾಗುತ್ತದೆ. ಭಾರತ ಮತ್ತು ಪಾಕ್(ind vs pak) ತನ್ನ ಮೊದಲ ಪಂದ್ಯ ಸೆಪ್ಟೆಂಬರ್ 2ರಂದು ಲಂಕಾದ ಕ್ಯಾಂಡಿಯಲ್ಲಿ ಆಡಲಿದೆ.
ಇದುವರೆಗೂ ಫೈನಲ್ ಮುಖಾಮುಖಿಯಾಗಿಲ್ಲ
ಸಾಂದ್ರದಾಯಿಕ ಬದ್ದ ಎದುರಾಳಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಟೂರ್ನಿಯ ಲೀಗ್ ಪಂದ್ಯ ಮತ್ತು ಸೂಪರ್-4 ಹಂತದ ಪಂದ್ಯದಲ್ಲಿ ಹಲವು ಬಾರಿ ಮುಖಾಮುಖಿಯಾಗಿವೆ. ಸ್ವಾರಸ್ಯವೆಂದರೆ ಏಷ್ಯಾ ಕಪ್ ಚರಿತ್ರೆಯಲ್ಲಿ ಇತ್ತಂಡಗಳು ಒಮ್ಮೆಯೂ ಫೈನಲ್‌ನಲ್ಲಿ ಮುಖಾಮುಖಿ ಆಗಿಲ್ಲ. ಈ ಬಾರಿಯಾದರೂ ಉಭಯ ತಂಡಗಳ ನಡುವೆ ಫೈನಲ್ ಸಮರ ಏರ್ಪಡಲಿದೆಯಾ ಎಂದು ಕಾದು ನೋಡಬೇಕಿದೆ.