Site icon Vistara News

The Olympic Games: 72ರ ಇಳಿ ವಯಸ್ಸಿನಲ್ಲೂ ಒಲಿಂಪಿಕ್ಸ್​ ಪದಕ ಗೆದ್ದಿದ್ದ ಶೂಟರ್‌; ಯಾರಿವರು?

The Olympic Games

The Olympic Games: Who Is The Oldest Olympian Ever?

ಬೆಂಗಳೂರು: ಕ್ರೀಡಾಭಿಮಾನಿಗಳು ಕಾದು ಕುಳಿತಿರುವ ಪ್ಯಾರಿಸ್​ ಒಲಿಂಪಿಕ್ಸ್(Paris Olympics 2024)​ ಕ್ರೀಡಾಕೂಟ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಒಲಿಂಪಿಕ್ಸ್(The Olympic Games)​ ಕುರಿತ ಹಲವು ಸಾರಸ್ಯಕರ ಸಂಗತಿಗಳ ಕಿರಿ ಅವಲೋಕನ ಮಾಡಲಾಗಿದೆ. ಇದೀಗ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ಆ್ಯತ್ಲೀಟ್‌ ಯಾರು?, ಅವರ ಸಾಧನೆ ಏನು? ಎಂಬ ವರದಿ ಇಲ್ಲಿದೆ.

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ಆ್ಯತ್ಲೀಟ್‌ ಎಂಬ ಹೆಗ್ಗಳಿಕೆ ಸ್ವೀಡನ್‌ನ ಶೂಟರ್‌ ಆಸ್ಕರ್‌ ಸ್ವಾನ್‌ ಹೆಸರಿನಲ್ಲಿದೆ. 1920ರಲ್ಲಿ(1920 Summer Olympics) ಆಂಟ್ವರ್ಪ್​ನಲ್ಲಿ(Antwerp 1920) ನಡೆದಿದ ಟೂರ್ನಿಯ ಶೂಟಿಂಗ್‌ನಲ್ಲಿ ಸ್ಪರ್ಧಿಸಿದಾಗ ಅವರಿಗೆ 72 ವರ್ಷ 281 ದಿನವಾಗಿತ್ತು. ಅಚ್ಚರಿ ಎಂದರೆ ಇಳಿ ವಯಸ್ಸಿನಲ್ಲೂ ಆಸ್ಕರ್‌ ಸ್ವಾನ್‌(Oscar Swahn) ಇಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದರು. ಜತೆಗೆ ಒಲಿಂಪಿಕ್ಸ್‌ ಇತಿಹಾಸದಲ್ಲಿ ಪದಕ ಗೆದ್ದ ಹಿರಿಯ ಕ್ರೀಡಾಪಟು ಎನ್ನುವ ಐತಿಹಾಸಿಕ ಸಾಧನೆ ಮಾಡಿದ್ದರು. ಒಟ್ಟಾರೆಯಾಗಿ ಇವರು ಒಲಿಂಪಿಕ್ಸ್ ವೃತ್ತಿ ಜೀವನದಲ್ಲಿ 6​ ಪದಕ ಜಯಿಸಿದ್ದಾರೆ. ಇದರಲ್ಲಿ 3 ಚಿನ್ನದ ಪದಕ ಒಳಗೊಂಡಿದೆ.


ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಹಿರಿಯ ಮಹಿಳಾ ಆ್ಯತ್ಲೀಟ್‌ ಇಂಗ್ಲೆಂಡ್‌ನ‌ ಹಿಲ್ಡಾ ಲೊರ್ನಾ ಜಾನ್‌ಸ್ಟನ್‌. 1972ರ ಮ್ಯೂನಿಚ್‌ ಗೇಮ್ಸ್​ನಲ್ಲಿ ಜಾನ್‌ಸ್ಟನ್‌ 70ರ ವಯಸ್ಸಿನಲ್ಲಿ ಈಕ್ವೆಸ್ಟ್ರಿಯನ್‌ನಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಲಿಡ ಪೇಟನ್‌ ಎಲಿಜಾ 1904ರಲ್ಲಿ 63ನೇ ವಯಸ್ಸಿನಲ್ಲಿ ಆರ್ಚರಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಹಿರಿಯ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ Olympics On Television: ಒಲಿಂಪಿಕ್ಸ್​ ಕ್ರೀಡಾಕೂಟ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಕಂಡಿದ್ದು ಯಾವಾಗ?

ಈ ಬಾರಿಯ ಹಿರಿಯ ಆ್ಯತ್ಲೀಟ್‌ ಯಾರು?


ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ಹಿರಿಯ ಆ್ಯತ್ಲೀಟ್‌ ಯಾರೆಂದರೆ, ಕಾರ್ಲ್ ಹೆಸ್ಟರ್. ಇಂಗ್ಲೆಂಡ್​ನ ಈಕ್ವೆಸ್ಟ್ರಿಯನ್‌ ಆಗಿರುವ ಅವರಿಗೆ 57 ವರ್ಷ. ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಬಾರಿಯೂ ಪದಕ ಗೆಲ್ಲುವು ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಪರ್ಧಾ ಪಟ್ಟಿಯಲ್ಲಿರುವ ಕ್ರೀಡೆಗಳು ಯಾವುವು? ಇವುಗಳಲ್ಲಿ ಅತ್ಯಂತ ಪ್ರಾಚೀನ ಕ್ರೀಡೆಗಳು ಯಾವುದೆಲ್ಲ?

ಒಲಿಂಪಿಕ್ಸ್‌ 5 ರಿಂಗ್​ಗಳ ಮಹತ್ವವೇನು?

5 ಖಂಡಗಳನ್ನು ಪ್ರತಿನಿಧಿಸುವ 5 ರಿಂಗ್‌ಗಳುಳ್ಳ ಒಲಿಂಪಿಕ್ಸ್‌ ಧ್ವಜವನ್ನು 1913ರಲ್ಲಿ ಆಧುನಿಕ ಒಲಿಂಪಿಕ್ಸ್‌ ಪಿತಾಮಹ ಫ್ರಾನ್ಸ್‌ನ ಪಿಯರ್‌ ಡಿ ಕೌಬರ್ಟಿನ್‌ ವಿನ್ಯಾಸಗೊಳಿಸಿದರು. ಈ ಬಾರಿಯ ಒಲಿಂಪಿಕ್ಸ್​ ಕೂಡ ಫ್ರಾನ್ಸ್​ನಲ್ಲಿಯೇ ನಡೆಯುತ್ತಿರುವುದು ವಿಶೇಷ. ಈ ಒಲಿಂಪಿಕ್ಸ್‌ ಧ್ವಜ 1920ರ ಬೆಲ್ಜಿಯಂನ ಅಂಟ್ವೆರ್ಪ್​ನಲ್ಲಿ ಮೊದಲ ಬಾರಿ ಅಧಿಕೃತವಾಗಿ ಹಾರಾಡಿಸಲಾಯಿತು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಪ್ರತಿ ದೇಶದ ರಾಷ್ಟ್ರಧ್ವಜವೂ ಈ ರಿಂಗ್‌ಗಳ ಒಂದಾದರೂ ಬಣ್ಣವನ್ನು ಒಳಗೊಂಡಿರುವುದು ಈ ರಿಂಗ್​ನ ವಿಶೇಷತೆ.

ವೈವಿಧ್ಯಮಯ ಭಾಷೆ, ಸಂಸ್ಕೃತಿ, ಹವಾಮಾನ, ಆರ್ಥಿಕತೆ, ಆಹಾರ ಪದ್ಧತಿ ಮತ್ತು ಮೈಬಣ್ಣದ ಜನರೆಲ್ಲ ಒಂದಾಗಿ ಸೇರುವ ವಿಶ್ವದ ಅತಿದೊಡ್ಡ ವೇದಿಕೆ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ. ಹಲವು ವೈವಿಧ್ಯಗಳ ನಡುವೆಯೂ ಒಲಿಂಪಿಕ್ಸ್ ಏಕತೆಯನ್ನು ಸಾರುವುದು ಈ ಕ್ರೀಡಾಕೂಟದ ವಿಶೇಷತೆ.

Exit mobile version