ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟರ್ ಅಭಿಮಾನಿಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ತಮ್ಮ ಕ್ರಿಕೆಟ್ ಆರಾಧ್ಯ ದೈವಗಳನ್ನು ನೋಡದೇ ಬೇಸರ ಮೂಡಿದ್ದ ಮನಸ್ಸಿಗೆ ಕಚಗುಳಿ ಇಡುವಂಥ ವಾರ್ತೆಯೂ ಬಂದಾಗಿದೆ. ಅದೇನು ಗೊತ್ತೇ? ಮುಂದಿನ ಆವೃತ್ತಿ ಐಪಿಎಲ್ (IPL 2023) ಪಂದ್ಯಗಳಿಗೆ ಆತಿಥ್ಯ ವಹಿಸುವ ಅವಕಾಶ ಆಯಾಯ ಫ್ರಾಂಚೈಸಿಗಳಿಗೆ ದೊರೆಯುತ್ತದೆ. ಹೀಗಾಗಿ ಆರ್‌ಸಿಬಿ ತಂಡದ ತವರಿನ ಚರಣದ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ. ಹೀಗಾಗಿ ಅಭಿಮಾನಿಗಳಿಗೆ ಪಂದ್ಯದ ನೇರ ವೀಕ್ಷಣೆ ಅವಕಾಶ ಲಭಿಸಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಮಾತನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದು, ಬೆಂಗಳೂರಿಗೆ ಬರ್ತೇವೆ ಎಂದು ಹೇಳಿದೆ. “ಮುಂದಿನ ಆವೃತ್ತಿಯ ಐಪಿಎಲ್ ಪಂದ್ಯಗಳು ತವರಿನ ಚರಣಕ್ಕೆ ಸಾಗಲಿವೆ. ನಿಗದಿತ ತಾಣಗಳಲ್ಲಿ ಐಪಿಎಲ್ ತವರಿನ ಪಂದ್ಯಗಳು ನಡೆಯಲಿವೆ,” ಗಂಗೂಲಿ ಹೇಳಿದ್ದಾರೆ.
೨೦೧೯ರಲ್ಲಿ ಕೊರೊನಾ ವೈರಸ್ ವಕ್ಕರಿಸಿಕೊಂಡ ಬಳಿಕ ಐಪಿಎಲ್ ಅಯೋಜನೆ ಬಿಸಿಸಿಐಗೆ ದೊಡ್ಡ ಸವಾಲಾಗಿತ್ತು. ೨೦೧೯ರಲ್ಲಿ ಇಡೀ ಟೂರ್ನಿ ಯುಎಇನಲ್ಲಿ ನಡೆದಿದ್ದರೆ, ೨೦೨೦ರಲ್ಲಿ ಅರ್ಧ ಟೂರ್ನಿ ಭಾರತದ ಕೆಲವು ತಾಣಗಳಲ್ಲಿ ನಡೆದು ಬಳಿಕ ಯುಎಇಗೆ ಶಿಫ್ಟ್ ಆಗಿತ್ತು. ೨೦೨೧ರ ಆವೃತ್ತಿ ಭಾರತದಲ್ಲೇ ನಡೆದಿದ್ದರೂ, ಮುಂಬಯಿಯ ಮೂರು ಹಾಗೂ ಪುಣೆಯ ಒಂದು ಸ್ಟೇಡಿಯಮ್‌ಗೆ ಸೀಮಿತಗೊಂಡಿತ್ತು. ಹೀಗಾಗಿ ತವರಿನ ಕ್ರಿಕೆಟ್ ಪ್ರೇಮಿಗಳಿಗೆ ಸ್ಟೇಡಿಯಮ್‌ಗೆ ಹೋಗಿ ಪಂದ್ಯ ನೋಡುವ ಅವಕಾಶ ನಷ್ಟವಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿಕೊಂಡಿರುವ ಕಾರಣ ನಾನಾ ತಾಣಗಳಲ್ಲಿ ಪಂದ್ಯ ಆಯೋಜಿಸಲು ಬಿಸಿಸಿಯ ತೀರ್ಮಾನ ಕೈಗೊಂಡಿದೆ.
ಇದನ್ನೂ ಓದಿ | Women’s IPL | ಮುಂದಿನ ವರ್ಷಾರಂಭದಲ್ಲೇ ನಡೆಯಲಿದೆ ಮಹಿಳೆಯರ ಐಪಿಎಲ್, ಗಂಗೂಲಿ ಸುಳಿವು