Site icon Vistara News

Asia Cup | ಸಾಲು ಸಾಲು ಸಂಕಷ್ಟಗಳ ನಡುವೆ ಏಷ್ಯಾ ಕಪ್‌ ಕಿರೀಟ ಮುಡಿಗೇರಿಸಿಕೊಂಡ ಶ್ರೀಲಂಕಾ

asia cup

ಬೆಂಗಳೂರು : ಈ ಬಾರಿಯ ಏಷ್ಯಾ ಕಪ್‌ನಲ್ಲಿ (Asia Cup) ಅಚ್ಚರಿಯ ಫಲಿತಾಂಶ ಪ್ರಕಟಗೊಂಡಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ದಸುನ್‌ ಶನಕ ನೇತೃತ್ವದ ಶ್ರೀಲಂಕಾ ತಂಡ ಟ್ರೋಫಿ ಗೆದ್ದಿದೆ. ಪ್ರಶಸ್ತಿ ಫೇವರಿಟ್‌ಗಳೆನಿಸಿಕೊಂಡಿದ್ದ ಭಾರತ ತಂಡವನ್ನು ಸೂಪರ್‌-೪ ಹಂತದಲ್ಲಿ ಹಾಗೂ ಪಾಕಿಸ್ತಾನ ತಂಡವನ್ನು ಸೂಪರ್‌-೪ ಹಂತ ಹಾಗೂ ಫೈನಲ್‌ ಪಂದ್ಯದಲ್ಲಿ ಮಣಿಸಿದ ಶ್ರೀಲಂಕಾ ತಂಡ ಅರ್ಹವಾಗಿ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿದೆ. ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆಯೇ ಈ ಬಾರಿಯ ಏಷ್ಯಾ ಕಪ್‌ನ ಆತಿಥ್ಯ ವಹಿಸಿದ್ದ ಕಾರಣ ಈ ಗೆಲುವು ಲಂಕಾ ಪಡೆಗೆ ವಿಶೇಷ ಎನಿಸಿಕೊಳ್ಳಲಿವೆ.

ಹಾಲಿ ಆವೃತ್ತಿಯ ಏಷ್ಯಾ ಕಪ್‌ ೧೫ನೇ ಆವೃತ್ತಿಯದ್ದು. ಈ ಬಾರಿಯ ಟ್ರೋಫಿ ಸೇರಿ ಶ್ರೀಲಂಕಾ ತಂಡ ಒಟ್ಟಾರೆ ಆರು ಬಾರಿ ಪ್ರಶಸ್ತಿ ಗೆದ್ದುಕೊಂಡಂತಾಗಿದೆ. ೨೦೧೪ರಲ್ಲಿ ಲಂಕಾ ತಂಡ ಕೊನೇ ಬಾರಿಗೆ ಟ್ರೋಫಿ ಗೆದ್ದಿತ್ತು. ಇದೀಗ ಮತ್ತೆ ಟ್ರೋಫಿ ಗೆಲ್ಲುವ ಮೂಲಕ ಮತ್ತೆ ಯಶಸ್ಸು ಸಾಧಿಸಿದೆ. ಆದರೆ, ಶ್ರೀಲಂಕಾ ತಂಡದ ಗೆಲವಿನ ಹಾದಿ ಸರಳವಾಗಿರಲಿಲ್ಲ. ಆರ್ಥಿಕ ಸಂಕಷ್ಟದಿಂದ ಬಳಲಿರುವ ದೇಶ, ರಾಜಕೀಯ ತಲ್ಲಣಗಳಿಂದ ಕೂಡಿದ ಸರಕಾರ, ಸೊರಗಿ ಹೋಗಿರುವ ಕ್ರಿಕೆಟ್‌ ಮಂಡಳಿ. ಹೀಗಾಗಿ ಹತ್ತು ಹಲವು ಒತ್ತಡಗಳ ನಡುವೆ ಲಂಕಾ ತಂಡ ಟ್ರೋಫಿ ಗೆಲ್ಲುವ ಮೂಲಕ ಕ್ರಿಕೆಟ್‌ ಪ್ರೇಮಿಗಳ ಮನ ಗೆದ್ದಿದೆ.

ಆತಿಥೇಯ ತಂಡ

ಹಾಲಿ ಆವೃತ್ತಿಯ ಏಷ್ಯಾ ಕಪ್‌ಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯೇ ಆತಿಥ್ಯ ವಹಿಸಿದ್ದು, ಅಲ್ಲೇ ನಡೆಯಬೇಕಾಗಿತ್ತು. ಆದರೆ, ರಾಜಕೀಯ ಅರಾಜಕತೆಯ ಕಾರಣಕ್ಕೆ ಟೂರ್ನಿಯನ್ನು ತಮ್ಮ ದೇಶದಲ್ಲಿ ನಡೆಸಲು ಅಲ್ಲಿನ ಕ್ರಿಕೆಟ್‌ ಮಂಡಳಿಗೆ ಸಾಧ್ಯವಾಗಿಲ್ಲ. ಆರ್ಥಿಕ ಸಮಸ್ಯೆಯ ಕಾರಣಕ್ಕೆ ಅಗತ್ಯ ವಸ್ತುಗಳ ಕೊರತೆ ಎದುರಿಸುತ್ತಿರುವ ಲಂಕಾದಲ್ಲಿ ಟೂರ್ನಿ ನಡೆಸುವು ಅಸಾಧ್ಯ ಎಂದು ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ನಿರ್ಧರಿಸಿದ ಕಾರಣ, ಯುಎಇಗೆ ಸ್ಥಳಾಂತರ ಮಾಡಲಾಯಿತು. ಈ ಮೂಲಕ ತಮ್ಮ ದೇಶದ ಪ್ರಜೆಗಳಿಗೆ ಕ್ರಿಕೆಟ್‌ನ ರಸದೌತಣ ಬಡಿಸುವ ಅವಕಾಶವನ್ನೂ ದ್ವೀಪ ರಾಷ್ಟ್ರ ಕಳೆದುಕೊಂಡಿತ್ತು.

ಶ್ರೀಲಂಕಾ ಕ್ರಿಕೆಟ್ ಮಂಡಳಿಯೂ ಆರ್ಥಿಕ ಸಮಸ್ಯೆಗೆ ಒಳಗಾಗಿದೆ. ಹೀಗಾಗಿ ಆಟಗಾರರ ಗುತ್ತಿಗೆ ನೀಡುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳನ್ನು ಎದುರಿಸುತ್ತಿದೆ. ಸರಿಯಾಗಿ ಸಂಭಾವನೆ ದೊರೆಯುತ್ತಿಲ್ಲ ಎಂಬ ಕಾರಣವಿಟ್ಟುಕೊಂಡು ಹಲವು ಹಿರಿಯ ಕ್ರಿಕೆಟಿಗರು ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಅಷ್ಟಾಗಿಯೂ ಖ್ಯಾತನಾಮರು ಇಲ್ಲದ ತಂಡವನ್ನು ಕಟ್ಟಿಕೊಂಡು ಆಡಿ ಟ್ರೋಫಿ ಗೆದ್ದಿರುವುದು ನಿಜವಾದ ಸಾಧನೆ.

ದುರ್ಬಲ ತಂಡ

ಅರ್ಜುನ್‌ ರಣತುಂಗಾ, ಸನತ್‌ ಜಯಸೂರ್ಯ, ಕುಮಾರ್ ಸಂಗಕ್ಕಾರ, ತಿಲಕರತ್ನೆ ದಿಲ್ಶನ್‌, ಮಹೆಲಾ ಜಯವರ್ಧನೆ ಅವರಂಥ ಸ್ಟಾರ್ ಆಟಗಾರರನ್ನು ಕಂಡಿರುವ ಲಂಕಾ ತಂಡ ಈ ಸಂಪೂರ್ಣವಾಗಿ ದುರ್ಬಲವಾಗಿದೆ. ವಿಶ್ವ ಕ್ರಿಕೆಟ್‌ನಲ್ಲಿ ಖ್ಯಾತಿ ಪಡೆದಿರುವ ಒಬ್ಬನೇ ಒಬ್ಬ ಆಟಗಾರ ಅಲ್ಲಿಲ್ಲ. ಅಂತೆಯೇ ಲಂಕಾ ತಂಡದ ಟಿ೨೦ ಮಾದರಿಯಲ್ಲಿ ಐಸಿಸಿ ಶ್ರೇಯಾಂಕ ೮. ಏಷ್ಯಾ ಭಾರತ ಹಾಗೂ ಪಾಕಿಸ್ತಾನ ಅಗ್ರ ಕ್ರಮಾಂಕದಲ್ಲಿರುವ ತಂಡಗಳು. ಹೀಗಾಗಿ ಲಂಕಾ ಪ್ರಶಸ್ತಿ ಗೆಲ್ಲುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ, ಶಕ್ತಿ ಮೀರಿ ಪ್ರದರ್ಶನ ನೀಡಿದ ಶ್ರೀಲಂಕಾ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಲಂಕಾ ಗೆಲುವಿನ ಹಾದಿ

ಬಿ ಗುಂಪಿನಲ್ಲಿದ್ದ ಶ್ರೀಲಂಕಾ ತಂಡ ಅಫಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಈ ವೇಳೆ ಲಂಕಾ ಈ ಬಾರಿ ಕೊನೇ ಸ್ಥಾನ ಪಡೆಯುತ್ತದೆ ಅಂದುಕೊಳ್ಳಲಾಗಿತ್ತು. ಆದರೆ, ನಂತರದಲ್ಲಿ ಪರಿಸ್ಥಿತಿಯೇ ಬದಲಾಯಿತು. ಫೈನಲ್‌ವರೆಗಿನ ಐದೂ ಪಂದ್ಯಗಳನ್ನು ಗೆದ್ದು ಲಂಕಾ ಬಳಗ ಚಾಂಪಿಯನ್‌ ಆಗಿದೆ.

ಗುಂಪು ಹಂತ

ಮೊದಲ ಪಂದ್ಯ: ಅಫಘಾನಿಸ್ತಾನ ವಿರುದ್ಧ ೮ ವಿಕೆಟ್‌ ಸೋಲು

ಎರಡನೇ ಪಂದ್ಯ: ಬಾಂಗ್ಲಾದೇಶ ವಿರುದ್ಧ ೨ ವಿಕೆಟ್‌ಗಳ ರೋಚಕ ಜಯ

ಸೂಪರ್‌ ೪ ಹಂತ

ಮೊದಲ ಪಂದ್ಯ: ಅಫಘಾನಿಸ್ತಾನ ವಿರುದ್ಧ ೪ ವಿಕೆಟ್‌ಗಳ ಜಯ

ಎರಡನೇ ಪಂದ್ಯ: ಭಾರತ ವಿರುದ್ಧ ೬ ವಿಕೆಟ್‌ಗಳ ಜಯ

ಮೂರನೇ ಪಂದ್ಯ: ಪಾಕಿಸ್ತಾನ ವಿರುದ್ಧ ೫ ವಿಕೆಟ್‌ಗಳ ಸುಲಭ ಜಯ

ಫೈನಲ್‌

ಪಾಕಿಸ್ತಾನ ತಂಡದ ವಿರುದ್ಧ ೨೩ ರನ್‌ಗಳ ಭರ್ಜರಿ ಜಯ

ಇದನ್ನೂ ಓದಿ | Asia Cup | ಪಾಕಿಸ್ತಾನ ತಂಡವನ್ನು ಮಣಿಸಿದ ಆತಿಥೇಯ ಶ್ರೀಲಂಕಾ ತಂಡಕ್ಕೆ ಏಷ್ಯಾ ಕಪ್‌ ಚಾಂಪಿಯನ್‌ ಪಟ್ಟ

Exit mobile version