ನವ ದೆಹಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ನೋಟಿಸ್ ಪಡೆದಿದ್ದಾರೆ. ಕ್ರೀಡೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ಇದು ದೊಡ್ಡ ಚರ್ಚೆಯ ಸಂಗತಿ. ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕ ಮಹೇಂದ್ರ ಸಿಂಗ್ ಧೋನಿ ನಾನಾ ರೀತಿಯ ಹೂಡಿಕೆಗಳನ್ನು ಮಾಡಿದ್ದರು. ಕೆಲವೊಂದು ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿಯೂ ನೇಮಕಗೊಂಡಿದ್ದರು. ಅದೇ ರೀತಿ ಈಗ ನಿಷ್ಕ್ರಿಯಗೊಂಡಿರುವ ಅಮ್ರಪಾಲಿ ರಿಯಲ್ ಎಸ್ಟೇಟ್ ಗುಂಪಿಗೂ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಆ ಕಂಪನಿಯ ಜತೆಗಿನ ವ್ಯವಹಾರದ ತಕರಾರಿನ ವಿಚಾರದಲ್ಲಿ ಧೋನಿ ಇದೀಗ ನೋಟಿಸ್ ಪಡೆದುಕೊಂಡಿದ್ದಾರೆ.
ಅಮ್ರಪಾಲಿ ಗ್ರೂಪ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಧೋನಿಗೆ ಮನೆ ನಿರ್ಮಾಣ ಯೋಜನೆಯಲ್ಲಿ ಪೆಂಟ್ ಹೌಸ್ ನೀಡುವುದಾಗಿ ಕಂಪನಿ ಒಪ್ಪಿಕೊಂಡಿತ್ತು. ಸುಮಾರು ೧೦ ವರ್ಷಗಳ ಹಿಂದೆಯೇ ಈ ಒಪ್ಪಂದ ನಡೆದಿತ್ತು. ಅದು ಸುಮಾರು ೪೦ ಕೋಟಿ ರೂಪಾಯಿಗಳ ವಹಿವಾಟು. ಆದರೆ, ಅಮ್ರಪಾಲಿ ಗ್ರೂಪ್ ದಿವಾಳಿಯಾದ ಬಳಿಕ ಧೋನಿ, ತಮ್ಮ ಒಪ್ಪಂದವನ್ನು ರಕ್ಷಿಸುವಂತೆ ೨೦೧೯ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅದಕ್ಕಿಂತ ಮೊದಲು ೨೦೧೬ರಲ್ಲಿ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಡೆಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ಕೋರ್ಟ್ ಮಾಜಿ ನ್ಯಾಯಾಧೀಶರೊಬ್ಬರನ್ನು ಮಧ್ಯಸ್ಥಿಕೆಗೆ ನೇಮಕ ಮಾಡಿತ್ತು. ಆ ಮಧ್ಯಸ್ಥಿಕೆ ನಡೆಸದಂತೆ ಈಗ ಸುಪ್ರೀಂ ಕೋರ್ಟ್ ಧೋನಿಗೆ ನೋಟಿಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ರಪಾಲಿಯ ಮಾಜಿ ನಿರ್ದೇಶಕರಾದ ಅನಿಲ್ ಕುಮಾರ್ ಶರ್ಮಾ, ಶಿವಪ್ರಿಯಾ ಮತ್ತು ಅಜಯ್ ಕುಮಾರ್ ಅವರು ಜೈಲಿನಲ್ಲಿದ್ದಾರೆ. ಕೋರ್ಟ್f ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದೆ. ಧೋನಿಗೆ ಕೋರ್ಟ್ ನೋಟಿಸ್ ಸಿಗುತ್ತಿದ್ದಂತೆ ಮಾಜಿ ನಾಯಕ ನಡೆಸುತ್ತಿರುವ ಉದ್ಯಮಗಳು ಎಷ್ಟಿರಬಹುದು ಎಂಬ ಚರ್ಚೆ ಆರಂಭಗೊಂಡಿದೆ. ಆ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ.
ಗರುಡಾ ಏರೋಸ್ಪೇಸ್
ಕಳೆದ ತಿಂಗಳು ಮಹೇಂದ್ರ ಸಿಂಗ್ ಧೋನಿ, ಡ್ರೋನ್ ತಯಾರಿಕಾ ಕಂಪನಿ ಗರುಡಾ ಏರೋಸ್ಪೇನ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಎಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಇಲ್ಲ. ಕಂಪನಿಯ ಸಂಸ್ಥಾಪಕ ಅಗ್ನೀಶ್ವರ್ ಜಯಪ್ರಕಾಶ್ ಅವರು ಧೋನಿ ಹೂಡಿಕೆ ಮಾಡಿದ್ದನ್ನು ಟ್ವೀಟ್ ಮೂಲಕ ತಿಳಿಸಿದ್ದರು.
Khatabookನಲ್ಲೂ ಹೂಡಿಕೆ
೨೦೨೦ರಲ್ಲಿ ಧೋನಿ ಖಾತಾಬುಕ್‌ನಲ್ಲೂ ಹೂಡಿಕೆ ಮಾಡಿದ್ದರು. ಇದು MSMEಗಳಿಗೆ (ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು) ಯುಟಿಲಿಟಿ ಪರಿಹಾರಗಳನ್ನು ಕೊಡುವ ಸಂಸ್ಥೆಯಾಗಿದೆ. ಇದಕ್ಕೆ ೫ ಕೋಟಿ ಗ್ರಾಹಕರಿದ್ದಾರೆ.
7InkBrews
ಆಹಾರ ಮತ್ತು ಪಾನೀಯ ಉದ್ಯಮವಾಗಿರುವ 7InkBrews ಸಂಸ್ಥೆಯಲ್ಲೂ ಧೋನಿ ಹೂಡಿಕೆ ಮಾಡಿದ್ದಾರೆ. ೨೦೨೦ರಲ್ಲಿ ಅವರು ಈ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಕಳೆದ ವರ್ಷ ಇದೇ ಕಂಪನಿ ಚಾಕೊಲೆಟ್ ಹಾಗೂ ಪಾನೀಯವೊಂದನ್ನು ಮಾರುಕಟ್ಟೆಗೆ ಇಳಿಸಿತ್ತು. ಅದರ ಹೆಸರು ಕಾಪ್ಟರ್‌೭ (Copter7). ಇದು ಧೋನಿಯ ಹೆಲಿಕಾಪ್ಟರ್ ಶಾಟ್‌ನಿಂದ ಪ್ರೇರಣೆ ಪಡೆದಿರುವ ಉತ್ಪನ್ನವಾಗಿದೆ.
CARS24
ಬಳಸಿರುವ ಕಾರು ಮಾರಾಟ ಹಾಗೂ ಖರೀದಿ ಮಾಡುವ ಸಂಸ್ಥೆಯಾಗಿರುವ CARS24 ನಲ್ಲೂ ಧೋನಿ ಹೂಡಿಕೆ ಮಾಡಿದ್ದಾರೆ. ೨೦೧೯ರಲ್ಲಿ ಈ ವಹಿವಾಟು ನಡೆದಿದೆ. ಆದರೆ, ಹೂಡಿಕೆ ಎಷ್ಟೆಂಬುದು ಗೊತ್ತಿಲ್ಲ. ಆದರೆ, ಧೋನಿ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡುತ್ತಿದ್ದಾರೆ.
HomeLane
ಇದು ಮನೆಯ ಒಳಾಂಗಣ ತಯಾರಿಸುವ ಕಂಪನಿ. ೨೦೨೧ರಲ್ಲಿ ಧೋನಿ ಮತ್ತು ಈ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಇಲ್ಲಿ ಧೋನಿ ಕಂಪನಿಯ ಈಕ್ವಿಟಿ ಪಾಲುದಾರ ಹಾಗೂ ಬ್ರಾಂಡ್ ಅಂಬಾಸಿಡರ್. ಹೂಡಿಕೆ ವಿವರಣೆ ಲಭ್ಯವಿಲ್ಲ.
ಹೋಟೆಲ್ ಮಹಿ ರೆಸಿಡೆನ್ಸಿ
ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೋಟೆಲ್ ಒಂದರ ಮಾಲೀಕ ಎಂಬುದು ಹಲವರಿಗೆ ಗೊತ್ತಿಲ್ಲ. ಅವರು ತಮ್ಮ ಊರು ರಾಂಚಿಯಲ್ಲಿ ಮಹಿ ರೆಸಿಡೆನ್ಸಿ ಎಂಬ ಹೋಟೆಲ್ ಸ್ಥಾಪಿಸಿದ್ದಾರೆ. ಇದಕ್ಕೆ ಬೇರೆ ಬ್ರಾಂಚ್‌ಗಳು ಇಲ್ಲ.
SportsFit
ಧೋನಿ ಹೂಡಿಕೆ ಮಾಡಿರುವ ಇನ್ನೊಂದು ಕಂಪನಿ ಇದು. ಇದು ಫಿಟ್‌ನೆಸ್ ಸಂಸ್ಥೆಯಾಗಿದ್ದು, ಜಗತ್ತಿನಾದ್ಯಂತ ೨೦೦ಕ್ಕೂ ಅಧಿಕ ಜಿಮ್‌ಗಳನ್ನು ಹೊಂದಿದೆ.
ಧೋನಿಯ ಸ್ಯಾಲರಿ ಎಷ್ಟು?
Caknowledge.com ಹೇಳುವಂತೆ ಧೋನಿಯ ಒಟ್ಟು ಆದಾಯ 846 ಕೋಟಿ ರೂಪಾಯಿ. ಅವರ ತಿಂಗಳ ಸಂಬಳ ೪ ಕೋಟಿ ರೂಪಾಯಿ ಹಾಗೂ ವಾರ್ಷಿಕ ಆದಾಯ ೫೦ ಕೋಟಿ ರೂಪಾಯಿ. ಅಂತೆಯೇ ಐಪಿಎಲ್‌ನಿಂದ ೧೨ ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ | ʼಕೂಲ್ ಕ್ಯಾಪ್ಟನ್ʼ ಮಹೇಂದ್ರ ಸಿಂಗ್ ಧೋನಿ ಜನ್ಮದಿನಕ್ಕೆ ಅವರ ಸಾಧನೆಗಳ ಮೆಲುಕು