ಹೈದರಾಬಾದ್: ಪಾಕಿಸ್ತಾನ(Pakistan vs Netherlands) ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ನೆದರ್ಲೆಂಡ್ಸ್‌ನ ಆಲ್ರೌಂಡರ್ ಬಾಸ್ ಡಿ ಲೀಡೆ(bas de leede) ಅವರು ತಮ್ಮ ತಂದೆಯ(Tim and Bas de Leede) ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ತಂದೆ ಮಗನ ಈ ಸಾಧನೆ ವಿಶ್ವಕಪ್ನ(icc world cup 2023) ಮೊದಲ ನಿದರ್ಶನವಾಗಿದೆ.
ಬಾಸ್ ಡಿ ಲೀಡೆ ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 9 ಓವರ್ ಎಸೆದು ಕೇವಲ 62 ರನ್ ವೆಚ್ಚದಲ್ಲಿ 4 ವಿಕೆಟ್ ಪಡೆದರು. ಇದೇ ವೇಳೆ ಇನಿಂಗ್ಸ್ ಒಂದರಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ನೆದರ್ಲೆಂಡ್ಸ್‌ನ ನಾಲ್ಕನೇ ಬೌಲರ್ ಎನಿಸಿಕೊಂಡರು. ಈ ಮೂಲಕ ತಮ್ಮ ತಂದೆ ಟಿಮ್ ಡಿ ಲೀಡೆ(Tim de Leede) ಅವರು 2003ರ ವಿಶ್ವಕಪ್‌ನಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದರು.
ಭಾರತ ವಿರುದ್ಧ ಸಾಧನೆ ತೋರಿದ್ದ ತಂದೆ
2003 ಏಕದಿನ ವಿಶ್ವಕಪ್‌ನಲ್ಲಿ ಟಿಮ್ ಡಿ ಲೀಡೆ ಅವರು ಭಾರತದ ವಿರುದ್ಧ 35 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಿತ್ತಿದ್ದರು. ಇದೀಗ ಪಾಕ್ ವಿರುದ್ಧ ಬಾಸ್ ಡಿ ಲೀಡೆ ನಾಲ್ಕು ವಿಕೆಟ್ ಕೀಳುವ ಮೂಲಕ ತಂದೆಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದು ವಿಶ್ವಕಪ್ ಪಂದ್ಯವೊಂದರಲ್ಲಿ ತಂದೆ-ಮಗ ಜೋಡಿ ಒಂದೇ ಸಂಖ್ಯೆಯ ವಿಕೆಟ್‌ಗಳನ್ನು ಪಡೆದ ಮೊದಲ ನಿದರ್ಶನವಾಗಿದೆ. ವಿಕೆಟ್ ಪಡೆದ ಬಳಿಕ ತಂದೆಯ ಶೈಲಿಯಲ್ಲೇ ಮಗ ಕೂಡ ಸಂಭ್ರಮಾಚರಣೆ ಮಾಡಿ ಗಮನ ಸೆಳೆದರು. ಇದಕ್ಕೆ ನೆಟ್ಟಿಗರು ತಂದೆಗೆ ತಕ್ಕ ಮಗ ಎಂದು ಕಮೆಂಟ್ ಮಾಡಿದ್ದಾರೆ.
ಟಿಮ್ ಡಿ ಲೀಡೆ ಅವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್ ಅವರ ವಿಕೆಟ್ ಕಿತ್ತು ಈ ಸಾಧನೆ ಮಾಡಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 204 ರನ್ಗೆ ಆಲೌಟ್ ಆಗಿತ್ತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 136 ರನ್ಗೆ ಸರ್ವಪತನ ಕಂಡು 68 ರನ್ಗಳ ಸೋಲು ಕಂಡಿತ್ತು. ಜಾವಗಲ್ ಶ್ರೀನಾಥ್ ಮತ್ತು ಅನಿಲ್ ಕುಂಬ್ಳೆ ತಲಾ ನಾಲ್ಕು ವಿಕೆಟ್ ಕಿತ್ತು ಡಚ್ಚರ ಹಡೆಮುರಿ ಕಟ್ಟಿದ್ದರು.
ಇದನ್ನೂ ಓದಿ ICC World Cup 2023 : ಏಕ ದಿನ ಕ್ರಿಕೆಟ್ ಮಾದರಿ ಯುಗಾಂತ್ಯ? ಮೈದಾನಗಳು ಯಾಕೆ ಖಾಲಿ ಖಾಲಿ?
ರಾವುಫ್ಗೆ ಕಣ್ಣು ಹೊಡೆದ ಲೀಡೆ
ಇದೇ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಆಲ್ರೌಂಡರ್ ಬಾಸ್ ಡಿ ಲೀಡೆ(Bas de Leede) ಅವರು ಹ್ಯಾರಿಸ್ ರವೂಫ್ ಎಸೆತಕ್ಕೆ ಸಿಕ್ಸರ್ ಬಾರಿಸಿ ಕಣ್ಣು ಹೊಡೆದ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಹ್ಯಾರಿಸ್ ರವೂಫ್ ಅವರು 29ನೇ ಓವರ್‌ನ ನಾಲ್ಕನೇ ಎಸೆತವನ್ನು ಬೌನ್ಸರ್ ಎಸೆದರು. ಕ್ರೀಸ್ನಲ್ಲಿದ್ದ ಬಾಸ್ ಡಿ ಲೀಡೆ ಚೆಂಡನ್ನು ಲೀಲಾಜಾಲವಾಗಿ ಸಿಕ್ಸರ್‌ಗೆ ಬಡಿದಟ್ಟಿದರು. ಸೊಗಸಾದ ಸಿಕ್ಸರ್ ಬಾರಿಸಿದ ಸಂತಸದಲ್ಲಿ ಅವರು ರವೂಫ್ಗೆ ಕಣ್ಣು ಹೊಡೆದು ನಗೆ ಬೀರಿದರು. ಇದೇ ವೇಳೆ ಕಾಮೆಂಟ್ರಿಯಲ್ಲಿದ್ದವರು ‘ಅಬ್ಬಾ ಎಂತದ ಹೊಡೆದ. ನಿಜಕ್ಕೂ ಅದ್ಭುತ ಸಿಕ್ಸರ್’ ಎಂದು ಬಣ್ಣಿಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ಬಾಸ್ ಡಿ ಲೀಡೆ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 67 ರನ್ ಬಾರಿಸಿದರು.