ಮುಂಬಯಿ: ಐಪಿಎಲ್ (IPL 2023) ಯಶಸ್ಸು ಇತರ ಕ್ರಿಕೆಟ್ ಮಂಡಳಿಗಳ ಕಣ್ಣು ಕುಕ್ಕುತ್ತಿದೆ. ಈ ಕ್ರಿಕೆಟ್ ಲೀಗ್ ಸಂಪಾದಿಸುವ ದುಡ್ಡು ಹಾಗೂ ಜನಪ್ರಿಯತೆಗೆ ಎಲ್ಲರೂ ಮನ ಸೋತಿದ್ದಾರೆ. ಹೀಗಾಗಿ ಕ್ರಿಕೆಟ್ ಆಡುವ ಮತ್ತು ಆಡದೇ ಇರುವ ದೇಶಗಳು ಲೀಗ್ಗಳನ್ನು ನಡೆಸಲು ಮುಂದಾಗಿದೆ. ಕ್ರಿಕೆಟ್ ಆಡುವ ದೇಶಗಳಂತೂ ಈ ಮಾದರಿಯ ಕ್ರಿಕೆಟ್ ಅನ್ನು ಭಯಂಕರವಾಗಿ ಅಪ್ಪಿಕೊಂಡಿದೆ. ಅಂತೆಯೇ ಇದೀಗ ಕೊಲ್ಲಿ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಕೂಡ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಲೀಗ್ ನಡೆಸಲು ಮುಂದಾಗಿದೆ. ಈ ವಿಚಾರವಾಗಿ ಚರ್ಚೆ ನಡೆಸಿ ರೂಪುರೇಷೆಗಳನ್ನು ಹಾಕಿಕೊಳ್ಳುವುದಕ್ಕೆ ಅಲ್ಲಿನ ನಿಯೋಗವೊಂದು ಇತ್ತೀಚೆಗೆ ಭಾರತಕ್ಕೆ ಬಂದು ಇಲ್ಲಿನ ಫ್ರಾಂಚೈಸಿಗಳ ಜತೆ ಮಾತುಕೆ ನಡೆಸಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ತಮ್ಮದಾಗಬೇಕು ಎಂಬುದೇ ನಿಯೋಗದ ಅಭಿಲಾಷೆ.
ಸೌದಿ ಅರೇಬಿಯಾ ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿದೆ. ಫಾರ್ಮುಲಾ ಒನ್ ಕಾರು ರೇಸ್ ಹಾಗೂ ಎಲ್ಐವಿ ಗಾಲ್ಫ್ನಂಥ ಶ್ರೀಮಂತ ಕ್ರೀಡೆಗಳನ್ನು ಈ ದೇಶ ಆಯೋಜಿಸುತ್ತಿದೆ. ಅದೇ ಮಾದರಿಯಲ್ಲಿ ಕ್ರಿಕೆಟ್ ಕ್ಷೇತ್ರದಲ್ಲೂ ಹೂಡಿಕೆ ಮಾಡಲು ಮುಂದಾಗಿದೆ ಸೌದಿ ಅರೇಬಿಯಾ.
ಸೌದಿ ಅರೇಬಿಯಾ ನಿಯೋಗವು ಫ್ರಾಂಚೈಸಿ ಮಾಲೀಕರ ಜತೆ ಮಾತುಕತೆ ನಡೆಸಿದ್ದು, ನಮ್ಮ ದೇಶದಲ್ಲಿ ಕ್ರಿಕೆಟ್ ಲೀಗ್ನ ಆಯೋಜಿಸುವಾಗ ತಂಡಗಳನ್ನು ಖರೀದಿ ಮಾಡುವಂತೆ ಮನವರಿಕೆ ಮಾಡಿದೆ. ಅದೇ ರೀತಿ ಪ್ರಾಯೋಜಕತ್ವವನ್ನು ನೀಡುವ ಭರವಸೆಯನ್ನೂ ಒದಗಿಸಿದೆ. ಅದೇ ರೀತಿ ಬಿಸಿಸಿಐ ಜತೆ ಮಾತುಕತೆ ನಡೆಸಿ ಭಾರತದ ಕ್ರಿಕೆಟರ್ಗಳಿಗೆ ಸೌದಿ ಅರೇಬಿಯಾದ ಲೀಗ್ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ಕೋರಿಕೊಂಡಿದೆ. ಸದ್ಯದ ನಿಯಮದ ಪ್ರಕಾರ ಬಿಸಿಸಿಐ ಜತೆ ಒಪ್ಪಂದ ಮಾಡಿಕೊಂಡಿರುವ ಆಟಗಾರರು ವಿದೇಶಿ ಲೀಗ್ಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಸೌದಿ ಅರೇಬಿಯಾ ವಿಚಾರದಲ್ಲಿ ನಿಯಮ ಸಡಿಲಗೊಳಿಸಬೇಕು ಎಂದು ಬೇಡಿಕೆ ಇಟ್ಟಿದೆ.
ದಿ ಏಜ್ ಪತ್ರಿಕೆಯ ವರದಿ ಪ್ರಕಾರ ಸೌದಿ ಅರೇಬಿಯಾವು ಕ್ರಿಕೆಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಕ್ಕೆ ಕಳೆದ ಕೆಲವು ವರ್ಷಗಳಿಂದ ಪ್ರಯತ್ನ ನಡೆಸುತ್ತಿದೆ. ಆ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬ ಟೀಕೆಗಳು ಇರುವ ಹೊರತಾಗಿಯೂ ಕ್ರಿಕೆಟ್ ದೇಶಗಳು ಅಲ್ಲಿನ ಕ್ರಿಕೆಟ್ಗೆ ಬೆಂಬಲ ಕೊಡಲು ಮುಂದಾಗಿದೆ.
ಐಸಿಸಿ ಚೇರ್ಮೆನ್ ಗ್ರೆಗ್ ಬಾರ್ಕ್ಲೆ ಅವರು ಸೌದಿ ಅರೇಬಿಯಾ ಸರಕಾರ ಕ್ರೀಡಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಮುಂದಾಗಿದೆ ಎಂದಿದ್ದಾರೆ.
ಫುಟ್ಬಾಲ್ ಹಾಗೂ ಎಫ್ಒನ್ ರೀತಿಯಲ್ಲಿಯೇ ಕ್ರಿಕೆಟ್ ಬಗ್ಗೆಯೂ ಸೌದಿ ಅರೇಬಿಯಾ ಸರಕಾರ ಆಸಕ್ತಿ ಹೊಂದಿದೆ. ಇದರಿಂದ ಸೌದಿ ಅರೇಬಿಯಾಕ್ಕೆ ಕ್ರಿಕೆಟ್ ಕ್ಷೇತ್ರದಲ್ಲಿ ಪ್ರಾತಿನಿಧ್ಯವೂ ದೊರೆಯಲಿದೆ ಎಂದು ಗ್ರೆಗ್ ಅವರು ಅಭಿಪ್ರಾಯಪಟ್ಟಿದ್ದರು.
ಪ್ರವಾಸೋದ್ಯಮ
ಮೂಲಗಳ ಪ್ರಕಾರ ಸೌದಿ ಅರೇಬಿಯಾ ಸರಕಾರ ಕ್ರಿಕೆಟ್ ಮೂಲಕ ಭಾರತದ ಗೆಳೆತನ ಬಯಸಿದೆ. 2020ರ ವೇಳೆಗೆ ಸೌದಿಯು ಭಾರತೀಯರ ಅತ್ಯಂತ ಇಷ್ಟದ ಪ್ರವಾಸಿ ತಾಣವಾಗಿ ಮಾರ್ಪಾಟು ಮಾಡುವಂತೆ ಮಾಡುವುದೇ ಅವರ ಉದ್ದೇಶವಾಗಿದೆ.
ಸದ್ಯ ಭಾರತವು ಯುಎಇಯನ್ನು ಪರ್ಯಾಯ ಕ್ರಿಕೆಟ್ ತಾಣವಾಗಿ ಬಳಸುತ್ತಿದೆ. 2020ರ ಐಪಿಎಲ್ ಹಾಗೂ 2021ರ ಟಿ20 ವಿಶ್ವ ಕಪ್ ಅನ್ನು ಭಾರತ ಇಲ್ಲೇ ಆಯೋಜಿಸಿತ್ತು.