ಮುಂಬಯಿ: ವಿರಾಟ್ ಕೊಹ್ಲಿಯ(virat kohli) ಬದ್ಧ ಎದುರಾಳಿ ಅಫಘಾನಿಸ್ತಾನ ತಂಡದ ವೇಗಿ ನವೀನ್ ಉಲ್ ಹಕ್ (Naveen-ul-Haq) 24ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅನೇಕರು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಆದರೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್(Gautam Gambhir) ಅವರ ಹಾರೈಕೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.
ವಿರಾಟ್ ಕೊಹ್ಲಿ ಅವರನ್ನು ಒಂದಲ್ಲ ಒಂದು ವಿಚಾರವಾಗಿ ಕೆಣಕುವ ಮತ್ತು ಅಪಹಾಸ್ಯ ಮಾಡುವ ಗಂಭೀರ್ ಈ ಬಾರಿಯೂ ಇದೇ ಕೀಳುಮಟ್ಟದ ಪ್ರವೃತ್ತಿಯನ್ನು ತೋರಿದ್ದಾರೆ. ಐಪಿಎಲ್ನ ಲಕ್ನೋ ತಂಡದ ಜೆರ್ಸಿಯಲ್ಲಿ ಜತೆಗಿರುವ ಫೋಟೊವನ್ನು ಹಂಚಿಕೊಂಡು ನವೀನ್ ಉಲ್ ಹಕ್ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ, ನೀನು ಯಾವುದೇ ಕಾರಣಕ್ಕೂ, ಬದಲಾಗಬೇಡ, ನಿನ್ನಂತಹ ವ್ಯಕ್ತಿಗಳು ಸಿಗುವುದು ತುಂಬಾ ಕಡಿಮೆ” ಎಂದು ಹರಸಿ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನವೀನ್ ಉಲ್ ಹಕ್ ವಿಚಾರದಲ್ಲಿ ಕೊಹ್ಲಿ ಜತೆ ಕಿರಿಕ್
ಈ ಬಾರಿಯ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದ ಗೌತಮ್ ಗಂಭಿರ್ ಅವರು ನವೀನ್ ಉಲ್ ಹಕ್ ವಿಚಾರದಲ್ಲಿ ಕೊಹ್ಲಿ(virat kohli and naveen ul haq) ಜತೆ ಮೈದಾನದಲ್ಲೇ ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸುವ ಹಂತದದ ವರೆಗೂ ಹೋಗಿದ್ದರು. ಅತ್ತ ನವೀನ್ ಕೂಡ ಕೊಹ್ಲಿಯನ್ನು ಪದೇಪದೆ ಕೆಣಕಿ ಅಗೌರವದಿಂದ ನಡೆದುಕೊಂಡಿದ್ದರು. ಇದಕ್ಕೆ ಕೊಹ್ಲಿ ಅಭಿಮಾನಿಗಳು ಗಂಭೀರ್ ಮತ್ತು ನವೀನ್ ಅವರನ್ನು ಕಂಡಾಗಲೆಲ್ಲಾ ಕೊಹ್ಲಿಯ ಹೆಸರನ್ನು ಜೋರಾಗಿ ಕರೆದು ಕೆಣಕುತ್ತಿದ್ದಾರೆ.
ಏಷ್ಯಾಕಪ್ನಲ್ಲಿಯೂ ಕೊಹ್ಲಿಯನ್ನು ಕೆಣಕಿದ್ದ ಗಂಭೀರ್
ಕಳೆದ ವಾರ ಮುಕ್ತಾಯ ಕಂಡ ಏಷ್ಯಾಕಪ್ ಟೂರ್ನಿಯಲ್ಲಿಯೂ ಕೊಹ್ಲಿಯನ್ನು ಗಂಭೀರ್ ಅಪಹಾಸ್ಯ ಮಾಡಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಕೊಹ್ಲಿ, ಶಾಹೀನ್ ಅಫ್ರಿದಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ವೇಳೆ ಲೈವ್ ಕಾಮೆಂಟ್ರಿಯಲ್ಲೇ ಟೀಕಿಸಿದ್ದರು. ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ “ಈ ಎಸೆತಕ್ಕೆ ಬ್ಯಾಟ್ ಬೀಸುವ ಅಗತ್ಯವೇ ಇರಲಿಲ್ಲ. ವಿಕೆಟ್ನ ಮುಂದೆ ಕೂಡ ಈ ಚೆಂಡು ಇರಲಿಲ್ಲ. ಸಂಪೂರ್ಣವಾಗಿ ವಿಕೆಟ್ ನಿಂದ ಚೆಂಡು ಹೊರ ಭಾಗದಲ್ಲಿತ್ತು. ವಿಶ್ವದ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾಗಿರುವ ಶಾಹೀನ್ ಅಫ್ರಿದಿ ಅವರಂತ ಬೌಲರ್ಗಳ ಮುಂದೆ ಶ್ರೇಷ್ಠ ಬ್ಯಾಟರ್ ಈ ಎಸೆತಕ್ಕೆ ಮುಂದೆ ಹೋಗಬೇಕೋ ಅಥವಾ ಹಿಂದೆ ಹೋಗಬೇಕೋ ಎಂಬುದನ್ನು ತಿಳಿದಿರಬೇಕು” ಎಂದು ಹೇಳುವ ಮೂಲಕ ಗಂಭೀರ್ ಅವರು ಕೊಹ್ಲಿಯನ್ನು ಟೀಕಿಸಿ ವ್ಯಂಗ್ಯವಾಡಿದ್ದರು.
ಇದನ್ನೂ ಓದಿ IND vs PAK : ಭಾರತದ ಕ್ರಿಕೆಟಿಗರು ಪಾಕಿಸ್ತಾನದವರ ಕೈ ಕುಲುಕುವುದು ಸರಿಯಲ್ಲ; ಗಂಭೀರ್ ಹೀಗೆ ಹೇಳಿದ್ಯಾಕೆ?
ಇದಾದ ಬಳಿಕ ಪಾಕ್ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದನ್ನು ಗಂಭೀರ್ ಟೀಕಿಸಿದ್ದರು. 94 ಎಸೆತದಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 122 ರನ್ ಗಳಿಸಿದ್ದರು. ಅಲ್ಲದೆ ಅತಿ ವೇಗವಾಗಿ 13 ಸಾವಿರ ರನ್ ಪೂರ್ತಿಗೊಳಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಈ ಎಲ್ಲ ಕಾರಣದಿಂದ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಆದರೆ ಗಂಭೀರ್ ಈ ಪ್ರಶಸ್ತಿಗೆ ಕೊಹ್ಲಿ ಅರ್ಹನಲ್ಲ ಎಂದು ಹೇಳಿದ್ದರು.